ಬೀದರ್: ಅಸ್ತಮಾ, ಕೆಮ್ಮು, ಕಫ, ಅಲರ್ಜಿ ಸಮಸ್ಯೆಗಳು ಮಳೆಗಾಲದಲ್ಲಿ ಬರುವುದು ಸಾಮಾನ್ಯ, ಆದ್ರೆ ಈ ಎಲ್ಲಾ ಸಮಸ್ಯೆಗಳಿಗೂ ಮುಂಜಾಗೃತೆಯಾಗಿ ಜೀವಂತ ಮೀನು ನುಂಗಿದ್ರೆ ಪರಿಹಾರ ಸಿಗುತ್ತೆ ಅಂತಾ ಜನ ಮುಗಿಬಿದ್ದು, ಮೀನು ನುಂಗೋಕೆ ರೆಡಿಯಾಗಿದ್ದಾರೆ. ಮಾರುಕಟ್ಟೆಯಲ್ಲಿ ಬಗೆಬಗೆಯ ಔಷಧಿಗಳಯ ಸಿಕ್ರೂ, ಜೀವಂತ ಮೀನು ನುಂಗಿದ್ರೆ ಮಳೆಗಾಲ ಮುಗಿಯೋವರೆಗೂ ಯಾವುದೇ ಕಾಯಿಲೆ ಬರೋದಿಲ್ಲಾ ಅನ್ನೋದು ಇಲ್ಲಿನ ಜನರ ನಂಬಿಕೆ.
ಹೌದು, ಇಂತಹದ್ದೊಂದು ವಿಶೇಷ ಚಿಕಿತ್ಸೆ ನೀಡುತ್ತಿರುವ ದೃಶ್ಯ ಕಂಡು ಬರುವುದು ಗಡಿ ಜಿಲ್ಲೆ ಬೀದರ್‌ನಲ್ಲಿ.ಬೀದರ್ ನಗರ ಹಾಗೂ ಹುಮನಾಬಾದ್ ಪಟ್ಟಣದಲ್ಲಿ ಈ ರೀತಿಯ ವಿಶೇಷ ಚಿಕಿತ್ಸೆಯನ್ನು ಮೃಗಶಿರ ಮಳೆ ಪ್ರವೇಶದ ದಿನ ನೀಡೋದು ವಾಡಿಕೆ.
ಬೀದರ್‌ನ ಓಲ್ಡ್ ಸಿಟಿಯಲ್ಲಿರುವ ಶ್ಯಾಮ್‌ಸುಂದರ್ ಅಗರವಾಲ್ ಎಂಬ ನಾಟಿ ವೈದ್ಯರು ಕಳೆದ ನಲವತ್ತೈದು ವರ್ಷಗಳಿಂದ ಚಿಕಿತ್ಸೆ ನೀಡುತ್ತಾ ಬರುತ್ತಿದ್ದಾರೆ. ತಂದೆ ರಘುಲಾಲ್ ಅಗರವಾಲ್ ಅವರ ವೃತ್ತಿಯನ್ನೇ ಮುಂದುವರೆಸಿಕೊಂಡು ಹೋಗ್ತಿದ್ದಾರೆ. ಮಳೆಗಾಲದಲ್ಲಿ ತಂಪು ಹೆಚ್ಚಾಗುವುದರಿಂದ ಅಸ್ತಮಾ, ಕಫ, ಕೆಮ್ಮು ಹೀಗೆ ನಾನಾ ಕಾಯಿಲೆಗಳು ಕಾಡೋದು ಸಹಜ. ಹೀಗಾಗಿ, ಮುಂಗಾರು ಹಂಗಾಮಿನ ಮೊದಲ ಮಳೆ ಮೃಗಶಿರಾ ಜೇಷ್ಠ ವದ್ಯಾ ಪಂಚಮಿ ದಿವಸ ಈ ಜೀವಂತ ಮೀನಿನ ಚಿಕಿತ್ಸೆ ಪ್ರತಿವರ್ಷ ನೀಡುತ್ತಾ ಬರಲಾಗುತ್ತಿದೆ. ಅಸ್ತಮಾ, ಕೆಮ್ಮು, ಕಫದಿಂದ ಬಳಲುತ್ತಿರುವವರಿಗೆ ಈ ಚಿಕಿತ್ಸೆ ರಾಮಬಾಣವಿದ್ದಂತೆ ಎಂಬುವುದು ಜನರ ನಂಬಿಕೆಯಾಗಿದೆ.
ಚಿಕ್ಕ ಮಕ್ಕಳಿಂದ ಇಳಿವಯಸ್ಸಿನವರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಮ್ಮೆ ಈ ಚಿಕಿತ್ಸೆ ಪಡೆದ್ರೆ ಸತತ ಮೂರು ವರ್ಷ ಪಡೆಯಬೇಕು. ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಅಲ್ಲದೇ, ಚಿಕಿತ್ಸೆ ತೆಗೆದುಕೊಂಡ ಮೇಲೆ ಉಸಿರಾಟದ ತೊಂದರೆ ವಾಸಿಯಾಗಿದೆ ಅಂತಾರೆ ಸಾರ್ವಜನಿಕರು.
ನಾಟಿ ವೈದ್ಯ ಶ್ಯಾಮಸುಂದರ್ ಅವರು ಕಳೆದ ನಲವತ್ತೈದು ವರ್ಷಗಳಿಂದ ಅಸ್ತಮಾ, ಕೆಮ್ಮು, ಕಫ ಸಮಸ್ಯೆಗೆ ಜೀವಂತ ಮೀನಿನೊಂದಿಗೆ ನಾಟಿ ಔಷಧಿಯ ಚಿಕಿತ್ಸೆ ನೀಡುತ್ತಾ ಬರುತ್ತಿದ್ದಾರೆ. ಈ ಚಿಕಿತ್ಸೆ ಪಡೆಯಲು ಕರ್ನಾಟಕದ ವಿವಿಧ ಜಿಲ್ಲೆ ಸೇರಿ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ನಾನಾ ಭಾಗಗಳ ಜನರು ಬರುತ್ತಾರೆ. ಪ್ರತಿವರ್ಷ ಕನಿಷ್ಠ 300ಕ್ಕೂ ಅಧಿಕ ಜನರಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ.
ಈ ಔಷಧಿಯನ್ನ 14 ದಿನಗಳ ಕಾಲ ವಿವಿಧ ಗಿಡಮೂಲಿಕೆಗಳನ್ನು ಬಳಸಿ ವಿಶೇಷವಾಗಿ ತಯಾರಿಸಲಾಗುತ್ತೆ. ನಮ್ಮ ಪೂರ್ವಜರ ಕಾಲದಿಂದಲೂ ಈ ಚಿಕಿತ್ಸೆ ನೀಡಲಾಗುತ್ತಿದ್ದು, ಅದನ್ನೇ ನಾವೂ ಕೂಡಾ ಮುಂದುವರೆಸಿಕೊಂಡು ಹೋಗ್ತಾ ಇದ್ದೇವೆ. ಈ ಚಿಕಿತ್ಸೆಯಿಂದ ಮಳೆಗಾಲ ಮುಕ್ತಾಯದವರೆಗೆ ಯಾವುದೇ ಮಳೆ ಸಂಬಂಧಿತ ಖಾಯಿಲೆಗಳಯ ಬರುವುದಿಲ್ಲಾ. ಹಾಗಾಗಿ ವರ್ಷದಿಂದ ವರ್ಷಕ್ಕೆ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಯಾವುದೇ ಅಡ್ಡ ಪರಿಣಾಮಗಳೂ ಕೂಡಾ ಅಗುವುದಿಲ್ಲಾ ಅಂತಾ ಹೇಳ್ತಾರೆ ನಾಟಿ ಔಷಧಿ ನೀಡೊ ವೈದ್ಯ ಶ್ಯಾಮ್‌ಸುಂದರ್.
ವೈಜ್ಞಾನಿಕತೆಯಲ್ಲಿ ನಾವು ಎಷ್ಟೇ ಮುಂದುವರೆದಿದ್ರೂ ನಮ್ಮ ಪೂರ್ವಜರು ಬಳುವಳಿಯಾಗಿ ಬಿಟ್ಟು ಹೋಗಿ ನಾಟಿ ವೈದ್ಯಕೀಯದ ಮೇಲೆ ಜನರಿಗೆ ಇನ್ನೂ ನಂಬಿಕೆ ಹೋಗಿಲ್ಲ ಎಂಬುವುದಕ್ಕೆ ಇದೇ ಸಾಕ್ಷಿ. ವೈಜ್ಞಾನಿಕತೆಗೆ ಸವಾಲೆಂಬಂತೆ ಜೀವಂತ ಮೀನಿನ ಚಿಕಿತ್ಸೆ ನೀಡಿ ಅಸ್ತಮಾ, ಕೆಮ್ಮು, ಕಫ ಗುಣವಾಗುತ್ತಾರೆ ಎಂಬುವುದು ಜನ ಮರುಳೋ ಜಾತ್ರೆ ಮರುಳೋ ಎಂಬಂತಿದೆ.