ಬೀದರ್: ಜೈ ಶ್ರೀರಾಮ್ ಹಾಡಿನ ವಿಷಯವಾಗಿ ನಗರದ ಮೈಲೂರಿನ ಗುರುನಾನಕ ದೇವ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳ ನಡುವೆ ನಡೆದ ಜಗಳ ಸಂಬಂಧ ರಾತ್ರಿಯಿಂದಲೇ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಘಟನೆಗೆ ಕೆಲವು ಮುಖಂಡರು, ಸಂಘಟನೆಗಳು ಕೋಮು ಬಣ್ಣ ಕೊಡುವ ಪ್ರಯತ್ನ ಮಾಡುತ್ತಿರುವುದನ್ನು ಅರಿತ ಬೀದರ್ ಜಿಲ್ಲಾ ಪೊಲೀಸರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಘಟನೆ ನಡೆದ ಗುರುನಾನಕ ಕಾಲೇಜಿನ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಗುರುವಾರ, ಶುಕ್ರವಾರ (ಮೇ 30,31) ಕಾಲೇಜಿನಲ್ಲಿ ನಡೆಯಬೇಕಿದ್ದ ವಾರ್ಷಿಕ ‘ಫೆಸ್ಟ್’ ರದ್ದುಗೊಳಿಸಲಾಗಿದೆ. ಕಾಲೇಜು ಮೌನಕ್ಕೆ ಜಾರಿದೆ.
ಇನ್ನು, ನಗರದ ಮೈಲೂರ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಓಲ್ಡ್ ಸಿಟಿಯ ಚೌಬಾರ ಸೇರಿದಂತೆ ಹಲವೆಡೆ ಪೊಲೀಸರನ್ನು ನಿಯೋಜಿಸಲಾಗಿದೆ.
ಕಾಲೇಜು ‘ಫೆಸ್ಟ್’ ಅಂಗವಾಗಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಬುಧವಾರ ಮಧ್ಯಾಹ್ನ ನೃತ್ಯಾಭ್ಯಾಸ ಮಾಡುತ್ತಿದ್ದರು. ಕೊನೆಯಲ್ಲಿ ಡಿ.ಜೆ, ‘ಜೈ ಶ್ರೀರಾಮ್’ ಹಾಡು ಹಾಕಿದ್ದಾರೆ. ಇದಕ್ಕೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ. ಹಿಂದೂ ವಿದ್ಯಾರ್ಥಿಗಳು ಡಿ.ಜೆ ಬೆಂಬಲಕ್ಕೆ ಹೋಗಿದ್ದಾರೆ. ಈ ವೇಳೆ ಎರಡೂ ಕಡೆಯವರ ನಡುವೆ ಮಾರಾಮಾರಿ ನಡೆದಿದೆ.
ಕಾಲೇಜು ಕ್ಯಾಂಪಸ್ ಕೆಲಕಾಲ ರಣಾಂಗಣವಾಗಿ ಮಾರ್ಪಟ್ಟಿತ್ತು. ಎರಡೂ ಕಡೆಯವರು ದೂರು-ಪ್ರತಿ ದೂರು ಕೊಟ್ಟಿದ್ದು, ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.