Bengaluru 23°C
Ad

ಬೀದರ್: ಅಮರನಾಥ ಪಾಟೀಲ ಗೆಲುವು ಖಚಿತ ಎಂದ ಪ್ರಕಾಶ ಖಂಡ್ರೆ

'ಈಶಾನ್ಯ ಕ್ಷೇತ್ರದ ಪದವೀಧರರು ಪ್ರಬುದ್ಧ ಮತದಾರರಾಗಿದ್ದು, ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಗೆಲುವು ಖಚಿತವಾಗಿದೆ' ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.

ಭಾಲ್ಕಿ: ‘ಈಶಾನ್ಯ ಕ್ಷೇತ್ರದ ಪದವೀಧರರು ಪ್ರಬುದ್ಧ ಮತದಾರರಾಗಿದ್ದು, ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಗೆಲುವು ಖಚಿತವಾಗಿದೆ’ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಬಿಜೆಪಿಯ ಒಂದು ಶಾಸಕ, ಸಂಸದರೂ ಇಲ್ಲದ ಸಮಯದಲ್ಲಿಯೂ ಈ ಕ್ಷೇತ್ರದ ಮತದಾರರು ಬಿಜೆಪಿ ಕೈ ಹಿಡಿದ್ದಾರೆ.

ಪ್ರತಿಸಲ ಬಿಜೆಪಿಯನ್ನೇ ಗೆಲ್ಲಿಸುತ್ತ ಬಂದಿದ್ದಾರೆ. ಪದವೀಧರ, ಶಿಕ್ಷಕರ ಬಗ್ಗೆ ಸದಾ ಹೋರಾಟ ಮಾಡಿ, ಸದನದಲ್ಲಿ ಪದವೀಧರರ ಬೇಡಿಕೆಗೆ ಒತ್ತು ನೀಡುತ್ತ ಪದವೀಧರರ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಅಮರನಾಥ ಪಾಟೀಲರ ಪಾತ್ರ ಸಾಕಷ್ಟಿದೆ. ಹೀಗಾಗಿ ಮತ್ತೊಮ್ಮೆ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮಂಡಲ್ ಅಧ್ಯಕ್ಷ ವೀರಣ್ಣ ಕಾರಬಾರಿ ಮಾತನಾಡಿ, ‘ಬೀದರ್‌ನ ಗುರುನಾನಕ ಕಾಲೇಜಿನಲ್ಲಿ ನಡೆದ ಘಟನೆಯಿಂದ ಕಾಂಗ್ರೆಸ್ ಸರ್ಕಾರದಲ್ಲಿ ಬಹುಸಂಖ್ಯಾತ ಹಿಂದೂಗಳು ಅಸುರಕ್ಷಿತರಾದ್ದಾರೆ. ಹಲ್ಲೆ ಮಾಡಿದವರನ್ನು ರಕ್ಷಿಸಿ, ಹಲ್ಲೆಗೊಳಗಾದವರ ಮೇಲೆಯೇ ಪ್ರಕರಣ ದಾಖಲಿಸಿರುವುದನ್ನು ಖಂಡಿಸುತ್ತೇವೆ. ಕಾಂಗ್ರೆಸ್ ಪಕ್ಷ ತುಷ್ಟೀಕರಣ ರಾಜಕಾರಣ ನಿಲ್ಲಿಸಿ, ಹಲ್ಲೆಗೊಳಗಾದವರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಶಿವರಾಜ ಗಂದಗೆ, ಸಹ ಸಂಚಾಲಕ ಸುರೇಶ ಬಿರಾದಾರ, ಪಂಡಿತ ಶಿರೋಳೆ, ಗೋವಿಂದರಾವ ಬಿರಾದಾರ, ದಿಗಂಬರಾವ ಮಾನಕಾರಿ, ಉತ್ತಮ ಪುರಿ, ಬಾಬುರಾವ ಧೂಪೆ, ಸುಭಾಷ ಬಿರಾದಾರ, ಸುಭಾಷ ಮಾಶೆಟ್ಟೆ ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad