ಬೆಳ್ತಂಗಡಿ: ಮಕ್ಕಳನ್ನು ಬೈಕಿನಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಘಟನೆ ಶಿಶಿಲದಲ್ಲಿ ಇಂದು ಬೆಳಗ್ಗೆ ನಡೆದಿದೆ. ಶಿಶಿಲ ಗ್ರಾಮದ ಕಳ್ಳಾಜೆ ನಿವಾಸಿ ವಸಂತ ಗೌಡ ಎಂಬವರ ಇಂದು ಬೆಳಗ್ಗೆ ತನ್ನ ಇಬ್ಬರು ಮಕ್ಕಳಾದ ಲಾವ್ಯಾ ಹಾಗೂ ಅದ್ವಿತ್ ರನ್ನು ಶಿಬಾಜೆ ಗ್ರಾಮದ ಪೆರ್ಲ ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಇಂದು ಬೆಳಗ್ಗೆ 8:30ರ ಸುಮಾರಿಗೆ ವಸಂತ ಗೌಡ ಬೈಕಿನಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದ ವೇಳೆ ರಸ್ತೆಯ ತಿರುವಿನ ಮಧ್ಯೆ ಏಕಾಏಕಿ ಒಂಟಿ ಸಲಗ ಕಾಣಿಸಿಕೊಂಡಿದೆ. ಭಯದಿಂದ ತನ್ನ ಬೈಕನ್ನು ಸಡನ್ನಾಗಿ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ರಸ್ತೆಗೆ ಬಿದ್ದ ವಸಂತ ಗೌಡ ಮತ್ತು ಮಕ್ಕಳಿಬ್ಬರಿಬ್ಬರ ಕೈಕಾಲಿಗೆ ಗಾಯಗಳಾಗಿವೆ. ಕಾಡಾನೆ ಹತ್ತಿರ ಬರುತ್ತಿದ್ದಂತೆ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.
ಓಡುತ್ತಿದ್ದಂತೆಯೇ ಬೈಕ್ ಕಡೆಗೆ ಆಗಮಿಸಿದ ಒಂಟಿ ಸಲಗ ಬೈಕನ್ನು ಸೊಂಡಿಲಿನಿಂದ ಕೆಡವಿ ಕಾಲಿನಿಂದ ತುಳಿದು ಸಂಪೂರ್ಣ ನಜ್ಜುಗುಜ್ಜುಗೊಳಿಸಿದೆ ಎಂದು ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಕಾಡಾನೆಯ ಉಪಟಳ ಮಿತಿಮೀರಿದ್ದು, ಕೂಡಲೇ ಅರಣ್ಯ ಇಲಾಖೆಯವರು ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.