ಬೆಂಗಳೂರು: ಬೈಕ್, ಕಾರ್, ಆಟೋಗಳ ಮೇಲೆ ತಮ್ಮಿಷ್ಟ ಬಂದಂತೆ ಸ್ಟಿಕ್ಕರ್‌ಗಳನ್ನ ಹಾಕಿದರೆ ಇನ್ಮುಂದೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಿ.ಮಲ್ಲಿಕಾರ್ಜುನ ಎಚ್ಚರಿಗೆ ನೀಡಿದ್ದಾರೆ.
ಸಾರಿಗೆ ಇಲಾಖೆಯ ಸಂಚಾರಿ ನಿಯಮಗಳ ಪ್ರಕಾರ ಈ ರೀತಿಯ ಸ್ಟಿಕ್ಕರ್ ಅಳವಡಿಕೆಗೆ ಈ ಮೊದಲಿನಿಂದಲೂ ನಿಷೇಧವಿದೆ. ಹೀಗಿದ್ದರೂ ಗಾಡಿಗಳ ಮೇಲೆ, ಮನೆಯರ ಹೆಸರು, ದೇವರ ಹಸರು, ಸಿನಮಾ ನಟ ನಟಿಯರ ಹೆಸರು ಸ್ಟಿಕ್ಕರ್ ಮಾಡಿಸುವುದು ಸಾಮಾನ್ಯವಾಗಿತ್ತು. ಆದರೆ ಇತ್ತೇಚೆಗೆ ಇಂಥಾ ಹುಚ್ಚಾಟಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಈಗ ಟಫ್ ರೂಲ್ಸ್ ಜಾರಿಗೆ ಬಂದಿದೆ.
ಕೊಲೆ ಕೇಸಲ್ಲಿ ಜೈಲಿನಲ್ಲಿರುವ ಆರೋಪಿ ದರ್ಶನ್ ಅಭಿಮಾನಿಗಳು, ಗಾಡಿಗಳ ಮೇಲೆ ಖೈದಿ ನಂಬರ್ 511 ಸ್ಟಿಕ್ಕರ್‌ಗಳನ್ನ ಹಾಕಿಸುವ ಮೂಲಕ ಹುಚ್ಚಾಟ ಮೆರೆದಿದ್ದರು. ಈ ಅಂಧಾಭಿಮಾನಿಗಳ ಕುಚೇಷ್ಟೆ ಮಿತಿ ಮೀರಿದ್ದು, ಇದಕ್ಕೆ ಬ್ರೇಕ್ ಹಾಕುವ ಸಲುವಾಗಿ ಈ ಹೊಸ ಸೂಚನೆಯನ್ನು ಹೊರಡಿಸಲಾಗಿದೆ.
ಇನ್ಮುಂದೆ ಗಾಡಿಗಳ ಮೇಲೆ ಈ ರೀತಿಯ ಸ್ಟಿಕ್ಕರ್ ಕಂಡು ಬಂದರೆ ಒಂದೆರೆಡು ಬಾರಿ ವಾರ್ನಿಂಗ್ ನೀಡಲಾಗುತ್ತದೆ. ಆ ನಂತರವೂ ಸ್ಟಿಕ್ಕರ್‌ಗಳನ್ನ ತೆಗೆಸಿಲ್ಲವಾದಲ್ಲಿ, ದಂಡ ವಿಧಿಸುವುದರ ಜೊತೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಿ.ಮಲ್ಲಿಕಾರ್ಜುನ ಎಚ್ಚರಿಗೆ ನೀಡಿದ್ದಾರೆ.