ಬೆಂಗಳೂರು: ಟಿವಿ ನೋಡಬೇಡ ಎಂದಿದ್ದಕ್ಕೆ ಎಸೆಸೆಲ್ಸಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಶ್ರೀನಗರ ನಿವಾಸಿ ಭೂಮಿಕಾ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ತಂದೆ ಸುರೇಶ್ ದೂರು ನೀಡಿದ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.
ಕುಣಿಗಲ್ ಮೂಲದ ಸುರೇಶ್, ಪತ್ನಿ, ಪುತ್ರ ಹಾಗೂ ಪುತ್ರಿ ಜತೆ ಶ್ರೀನಗರದಲ್ಲಿ ವಾಸವಾಗಿದ್ದಾರೆ. ಕೃಷಿಕರಾಗಿರುವ ಅವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಈಗ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದ್ದು, ಟಿವಿ ನೋಡುತ್ತಿದ್ದ ಭೂಮಿಕಾಳ ಬಳಿ ತಂದೆ ಸುರೇಶ್ ಪರೀಕ್ಷೆಗೆ ಓದಿಕೊಳ್ಳುವಂತೆ ಹೇಳಿದರು.
ಆಗ ಆಕೆ ಊಟ ಮಾಡಿ ಓದಿಕೊಳ್ಳುವುದಾಗಿ ಹೇಳಿ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ಬೆಳಗ್ಗೆ 8 ಗಂಟೆಯಾದರೂ ಕೊಠಡಿಯಿಂದ ಹೊರಗಡೆ ಬಂದಿರಲಿಲ್ಲ. ಕರೆದರೂ ಪ್ರತಿಕ್ರಿಯೆ ಬಾರದ ಕಾರಣ ಬಾಗಿಲು ಒಡೆದು ಒಳಹೋಗಿ ನೋಡಿದಾಗ ಫ್ಯಾನ್‌ಗೆ ನೇಣುಬಿಗಿದುಕೊಂಡಿರುವುದು ಕಂಡುಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.