ಬೆಂಗಳೂರು: ಪರಿಸರ ಪ್ರೇಮಿ, ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಇಂದು ಸಂಜೆ ಮಂಜುನಾಥನಗರದಲ್ಲಿರುವ ನಿವಾಸದಲ್ಲಿ ಕಾಲು ಜಾರಿ ಬಿದ್ದಿದ್ದು, ಬೆನ್ನು ಮೂಳೆಗೆ ಪೆಟ್ಟಾಗಿದೆ. ಹಾಗಾಗಿ ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರು ಪರಿಸರದ ಮೇಲಿನ ತಮ್ಮ ಪ್ರೀತಿಯಿಂದ ಸಾಲುಮರದ ತಿಮ್ಮಕ್ಕ ಎಂದೇ ಖ್ಯಾತರಾದವರು.
ಸಾವಿರಾರು ಮರಗಳಿಗೆ ಜೀವ ನೀಡಿರುವ ಸಾಲುಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಸದ್ಯ ಏರುಪೇರಾಗಿದೆ. ತಮ್ಮ ನಿವಾಸದಲ್ಲಿ ಜಾರಿ ಬೀಳುವ ಮೂಲಕ ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಅವರಿಗೆ ಉಸಿರಾಟದ ತೊಂದರೆ, ಮಂಡಿ ನೋವು ಸಹ ಕಾಣಿಸಿಕೊಂಡಿತ್ತು.