Bengaluru 23°C
Ad

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ: 4 ರಾಜ್ಯಗಳಿಗೆ ಎನ್ಐಎ ದಾಳಿ ನಡೆಸಿ 11 ಶಂಕಿತ ಉಗ್ರರು ವಶಕ್ಕೆ

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳವು ತನಿಖೆ ಚುರುಕುಗೊಳಿಸಿದ್ದು, ಇಂದು ಕರ್ನಾಟಕ ಸೇರಿ 4 ರಾಜ್ಯಗಳ 11 ಸ್ಥಳಗಳಲ್ಲಿ ದಾಳಿ ನಡೆಸಿ, 11 ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದೆ.

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳವು ತನಿಖೆ ಚುರುಕುಗೊಳಿಸಿದ್ದು, ಇಂದು ಕರ್ನಾಟಕ ಸೇರಿ 4 ರಾಜ್ಯಗಳ 11 ಸ್ಥಳಗಳಲ್ಲಿ ದಾಳಿ ನಡೆಸಿ, 11 ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದೆ.

ಈ ಪೈಕಿ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶೋಯೆಬ್‌ ಅಬ್ದುಲ್ ಮಿರ್ಜಾ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.ಹುಬ್ಬಳ್ಳಿಯ ಗೌಸಿಯಾ ಟೌನ್‌ನಲ್ಲಿ ವಾಸವಿದ್ದ ಶೋಯೆಬ್‌ ಅಬ್ದುಲ್ ಮಿರ್ಜಾನನ್ನು ವಶಕ್ಕೆ ಪಡೆದಿದ್ದು, ಈತ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾನೆ.

ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಸಂಚುಕೋರರನ್ನು ಪತ್ತೆ ಮಾಡಲು ರಾಷ್ಟ್ರೀಯ ತನಿಖಾ ದಳವು ನಾಲ್ಕು ರಾಜ್ಯಗಳ 11 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದೆ.ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದ 11 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.

ಇಂದು ಪತ್ತೆಯಾದ 11 ಮಂದಿ ಶಂಕಿತರಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿ ಜಿಲ್ಲೆಗಳಲ್ಲಿ 2012ರ ಲಷ್ಕರ್–ಎ–ತಯ್ಬಾ (ಎಲ್‌ಇಟಿ) ಪಿತೂರಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳೂ ಸೇರಿದ್ದಾರೆ. ದಾಳಿ ವೇಳೆ ಡಿಜಿಟಲ್ ಪರಿಕರಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಮೇಶ್ವರಂ ಕೆಫೆ ಸ್ಫೋಟದ ಮಾಸ್ಟರ್‌ ಮೈಂಡ್‌ ಅಬ್ದುಲ್‌ ಮತೀನ್‌ ತಾಹ ಹಾಗೂ ಬಾಂಬ್‌ ಇರಿಸಿದ್ದ ಮುಸಾವಿರ್‌ ಹುಸೇನ್‌ ಶಾಜಿಬ್‌ರನ್ನು ಎನ್‌ಐಎ ಈಗಾಗಲೇ ಬಂಧಿಸಿದೆ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸಿ ಕೋಲ್ಕತ್ತಾದಲ್ಲಿ ಉಗ್ರರು ತಲೆಮರೆಸಿಕೊಂಡಿದ್ದರು. ಬಂಧನದಿಂದ ಬಚಾವ್‌ ಆಗಲು ಇಬ್ಬರೂ ಕೂಡ ಸಾಕಷ್ಟು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದರು ಎನ್ನುವ ವಿವರ ಕೂಡ ಪತ್ತೆಯಾಗಿದೆ.

ಬೇರೆ ಹೆಸರಿನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡು ಶಂಕಿತರು ಅಡಗಿದ್ದರು. ಎನ್ಐಎ ತನಿಖೆ ವೇಳೆ ನಕಲಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅಬ್ದುಲ್‌ ಮತೀನ್‌ ತಾಹ, ಯಶ್‌ ಶಹನವಾಜ್‌ ಪಟೇಲ್‌ ಹೆಸರಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿಕೊಂಡಿದ್ದರೆ, ಮುಸಾವಿರ್‌ ಹುಸೇನ್‌ ಶಾಜಿಬ್‌, ಅನ್ಮೋಲ್‌ ಕುಲಕರ್ಣಿ ಎನ್ನುವ ಹಿಂದು ಹೆಸರಲ್ಲಿ ಆಧಾರ್‌ ಕಾರ್ಡ್‌ ರಚಿಸಿಕೊಂಡಿದ್ದ.

ಇಬ್ಬರೂ ಕೂಡ ಕೋಲ್ಕತ್ತಾದ ಪ್ಯಾರಡೈಸ್ ಹೋಟೆಲ್‌ಗೆ ನಕಲಿ ದಾಖಲೆ ನೀಡಿ ವಾಸ್ತವ್ಯ ಮಾಡಿದ್ದರು. ದಾಳಿ ವೇಳೆ ನಕಲಿ ದಾಖಲೆಗಳನ್ನು ಎನ್‌ಐಎ ವಶಕ್ಕೆ ಪಡೆದಾಗ ಈ ಮಾಹಿತಿ ಪತ್ತೆಯಾಗಿದೆ.ನಕಲಿ ದಾಖಲೆಗಳನ್ನು ಎನ್‌ಐಎ ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಉಗ್ರರು ತಲೆಮರೆಸಿಕೊಂಡಿದ್ದ ಸಂಪೂರ್ಣ ಮಾಹಿತಿ ಸಂಗ್ರಹವನ್ನೂ ಮಾಡಿದ್ದಾರೆ. 12 ದಿನ ಕೋಲ್ಕತ್ತದಲ್ಲಿದ್ದ ಇಬ್ಬರೂ ಉಗ್ರರು, ಮೂರು ನಾಲ್ಕು ದಿನಕ್ಕೊಮ್ಮೆ ಸ್ಥಳವನ್ನು ಬದಲಾವಣೆ ಮಾಡುತ್ತಿದ್ದರು.

ಏಪ್ರಿಲ್ 12ರಂದು ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಇಬ್ಬರು ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು. ಆರೋಪಿಗಳ ಕಸ್ಟಡಿ ಅವಧಿ ಅಂತ್ಯವಾದ ಬಳಿಕ ಪುನಃ 7 ದಿನ ಕಸ್ಟಡಿಗೆ ಪಡೆಯಲಾಗಿತ್ತು. ನಂತರ ಮತ್ತೆ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಾರ್ಚ್ 1ರಂದು ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್‌ನ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಕೆಫೆ ಸಿಬ್ಬಂದಿ, ಗ್ರಾಹಕರಸಹಿತ 9 ಜನರು ಗಾಯಗೊಂಡಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಎನ್​ಐಎಗೆ ವಹಿಸಲಾಗಿತ್ತು. ಪ್ರಕರಣ ಸಂಬಂಧ ಹಲವೆಡೆ ಶೋಧ ನಡೆಸಿದ್ದ ಎನ್​ಐಎ ಅಧಿಕಾರಿಗಳು ಸುಮಾರು 40 ದಿನಗಳ ಬಳಿಕ ಕೋಲ್ಕೊತಾದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

Ad
Ad
Nk Channel Final 21 09 2023
Ad