News Karnataka Kannada
Tuesday, April 23 2024
Cricket
ರಾಮನಗರ

ವಿನಾ ಕಾರಣ ಅಲೆದಾಡಿಸುವುದನ್ನು ಸಹಿಸಲ್ಲ: ಎಚ್.ಸಿ.ಬಾಲಕೃಷ್ಣ

Will not tolerate wandering for no reason: HC Balakrishna
Photo Credit : By Author

ರಾಮನಗರ: ಗ್ರಾಪಂ ಗಳಲ್ಲಿ ಇ-ಖಾತೆ ಮಾಡಿಕೊಡಲು ಅರ್ಜಿದಾರರಿಗೆ ವಿನಾಕಾರಣ ಅಲೆದಾಡಿಸುವುದನ್ನು ತಾವು ಸಹಿಸುವುದಿಲ್ಲ. ಸಬೂಬು ಹೇಳಿ ಕೆಲಸ ವಿಳಂಭ ಮಾಡುವ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಗುಡುಗಿದರು.

ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ತಾಲ್ಲೂಕಿನ ಬಿಡದಿ ಹೋಬಳಿ ಮಂಚನಾಯ್ಕನಹಳ್ಳಿ ವ್ಯಾಪ್ತಿಯ ಶೇಷಗಿರಿಹಳ್ಳಿ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮರ್ಪಣೆ ಹಾಗೂ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿದ ವೇಳೆ ಅವರು ಮಾತನಾಡಿ, ಮಂಚನಾಯ್ಕನಹಳ್ಳಿ ಗ್ರಾಪಂ ನಲ್ಲಿ ಇ-ಖಾತೆ ನೀಡಲು ವಿಳಂಭ ಮಾಡಲಾಗುತ್ತಿದೆ. ದಾಖಲೆಗಳು ಸರಿಯಿಲ್ಲ, ಸರ್ವರ್ ಸಮಸ್ಯೆ ಎಂಬಿತ್ಯಾದಿ ಕಾರಣಗಳನ್ನು ಹೇಳಿ ಅರ್ಜಿದಾರರನ್ನು ಅಲೆದಾಡಿಸಲಾಗುತ್ತಿದೆ. ಕೆಲವು ಅಕ್ರಮ ಲೇಔಟ್‌ಗಳಲ್ಲಿನ ನಿವೇಶನಗಳಿಗೆ ಇ-ಖಾತೆ ಸೃಜಿಸಿ ಕೊಡಲಾಗಿದೆ. ಆದರೆ ನಿಯಮಬದ್ಧವಾಗಿರುವ ಸ್ವತ್ತಿಗೆ ಎಂಟು ಹತ್ತು ತಿಂಗಳಾದರೂ ಇ-ಖಾತೆ ನೀಡಿಲ್ಲ ಎಂಬ ವಿಷಯವನ್ನು ಮುಖಂಡ ಶೇಷಗಿರಿಹಳ್ಳಿ ಶಿವಣ್ಣ ಸಭೆಯ ಗಮನಕ್ಕೆ ತಂದರು.

ಈ ವೇಳೆ ಗರಂ ಆದ ಶಾಸಕರು ಮಂಚನಾಯ್ಕನಹಳ್ಳಿ ಗ್ರಾಪಂ ನಲ್ಲಿ ಪ್ರಸಕ್ತ ಸಾಲಿನಲ್ಲಿ ಎಷ್ಟು ಖಾತೆಗಳಾಗಿವೆ ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸಭೆಯಲ್ಲಿದ್ದ ತಾಪಂ ಇಒ ಪ್ರದೀಪ್ ಅವರಿಗೆ ಸೂಚಿಸಿದರು. ಎಲ್ಲಾ ಕೆಲಸಗಳು ಕಾನೂನು ಬದ್ಧವಾಗಿ ನಡೆಯಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಜೆ 5.30 ಗಂಟೆವರೆಗೆ ಕಚೇರಿಯಲ್ಲಿದ್ದು ಕೆಲಸ ಮಾಡಬೇಕು. ಕಚೇರಿಗಳಿಗೆ ಜನರು ಕೆಲಸವಾಗಿಲ್ಲವೆಂದು ಅಲೆದಾಡಬಾರದು ಅಧಿಕಾರಿಗಳು ಸಮಯಪ್ರಜ್ಞೆ ಇಟ್ಟುಕೊಂಡು ಕೆಲಸ ನಿರ್ವಹಿಸಬೇಕು ಎಂದು ಖಡಕ್ಕಾಗಿ ಹೇಳಿದರು.

ಲಕ್ಷ್ಮೀಸಾಗರ ಗ್ರಾಮದ ಬಳಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಹೊಸ ಬಡಾವಣೆಯನ್ನು ನಿರ್ಮಿಸಿ 296ನಿವೇಶನಗಳನ್ನು ವಿಂಗಡಿಸಲಾಗಿದೆ. ಅಲ್ಲದೆ ಲೇಔಟ್ ನಿರ್ಮಾಣಕ್ಕೆ ಕೆರೆಯ ನಾಲೆಯನ್ನು ಒತ್ತುವರಿ ಮಾಡಿರುವುದಲ್ಲದೆ “ಬಿ” ಖರಾಬ್ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿರಿಸದೆ ಗ್ರಾಪಂ ನಿಂದ ನಕ್ಷೆ ಅನುಮೋದನೆ ನೀಡಲಾಗಿದೆ. ಈ ಅಕ್ರಮ ಲೇಔಟ್ ನಲ್ಲಿರುವ ನಿವೇಶನಗಳಿಗೆ 11ಬಿ ನಮೂನೆ ಖಾತೆಗಳನ್ನು ಸಹ ನೀಡಲಾಗಿದೆ ಎಂದು ಬಿಲ್ಲಕೆಂಪನಹಳ್ಳಿ ರುದ್ರಯ್ಯ ಆರೋಪಿಸಿ ದಾಖಲೆ ಸಲ್ಲಿಸಿದರು.

ಸದರಿ ಲೇಔಟ್‌ನಲ್ಲಿ ಆಗಿರುವ ಖಾತೆಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ವರದಿ ನೀಡುವಂತೆ ತಾಪಂ ಇಒ ಅಧಿಕಾರಿಗೆ ಬಾಲಕೃಷ್ಣ ತಾಕೀತು ಮಾಡಿದರು. ಗ್ರಾಮಸ್ಥರ ಜೊತೆ ಅನುಚಿತವಾಗಿ ವರ್ತಿಸುವ ಜೊತೆಗೆ ನಿರಂತರ ಕರ್ತವ್ಯಲೋಪ ಎಸಗುತ್ತಿರುವ ಈ ಭಾಗದ ಬೆಸ್ಕಾಂ ಲೈನ್ ಮ್ಯಾನ್ ವಿರುದ್ಧ ಶಿಸ್ತು ಜರುಗಿಸಬೇಕು ಎಂದು ಹಲವು ಗ್ರಾಮಸ್ಥರು ಮಾಡಿದ ಮನವಿಗೆ ಸ್ಪಂಧಿಸಿದ ಶಾಸಕರು ಸದರಿ ಲೈನ್ ಮ್ಯಾನ್‌ನನ್ನು ಬೇರೆ ಕಡೆಗೆ ವರ್ಗಾಯಿಸುವಂತೆ ಸ್ಥಳದಲ್ಲಿದ್ದ ಬೆಸ್ಕಾಂ ಎಇಇ ಅಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ಇ-ಖಾತೆ ಸಮಸ್ಯೆ, ಕೈಗಾರಿಕೆಗಳ ತೆರಿಗೆ ಸಂಗ್ರಹದಲ್ಲಿ ತಾರತಮ್ಯ, ಗ್ರಾಪಂ ಸದಸ್ಯರ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ರಾಜಕಾಲುವೆ ಒತ್ತುವರಿ. ಅಭಿವೃದ್ಧಿ ಕಾಮಗಾರಿಗಳು ಕಳಪೆ ಮಾಡಿರುವ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಡುವುದಿಲ್ಲ. ಇಡೀ ಗ್ರಾಪಂ ಕಚೇರಿ ಗೋಲ್ ಮಾಲ್ ಕೇಂದ್ರವಾಗಿದೆ ಎಂಬ ಆರೋಪಗಳು ಗ್ರಾಪಂ ಸದಸ್ಯರು ಮತ್ತು ಸ್ಥಳೀಯ ಮುಖಂಡರಿಂದ ವ್ಯಕ್ತವಾದವು.

ಹೆಜ್ಜಾಲದ ಎಸ್‌ವಿಟಿ ಕಾಲೋನಿಯಲ್ಲಿ ನಡೆದ ಸಭೆಯಲ್ಲಿ ಆಶ್ರಯ ಬಡಾವಣೆ ನಿರ್ಮಿಸಲು 6ಎಕರೆ ಭೂಮಿಯನ್ನು ಮೀಸಲಾಗಿಡಲಾಗಿದ್ದು 12 ವರ್ಷಗಳು ಕಳೆದರೂ ಅನುಷ್ಠಾನಕ್ಕೆ ಬಂದಿಲ್ಲ. ಸರಕಾರದ ಗಮನ ಸೆಳೆದು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಗ್ರಾಪಂ ಸದಸ್ಯ ಹೆಚ್.ಕೆ.ರವಿಕುಮಾರ್ ಮನವಿ ಸಲ್ಲಿಸಿದರು.

ಗ್ರಾಮಗಳಲ್ಲಿ ನಡೆದ ಸಭೆಗಳಲ್ಲಿ ಜಮೀನುಗಳ ಸರ್ವೆ, ರಸ್ತೆ ನಿರ್ಮಾಣ, ಹಾಗೂ ಸ್ಮಶಾನಕ್ಕೆ ಜಾಗ ಗುರುತಿಸುವಿಕೆ, ಅತಿಕ್ರಮಣ ತೆರವುಗೊಳಿಸುವುದು, ಹಕ್ಕುಪತ್ರ, ಮಾಸಾಶನ, ಆಸ್ಪತ್ರೆ, ವೈದ್ಯರ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ಅಹವಾಲುಗಳು ಸಲ್ಲಿಕೆಯಾದವು. ಕೆಲವು ಗ್ರಾಮಗಳಲ್ಲಿ ಸಾರ್ವಜನಿಕರು ನಾನಾ ಸಮಸ್ಯೆಗಳ ಸುರಿಮಳೆಗೈದರು.

ಸಭೆಯಲ್ಲಿ ರಾಮನಗರ ತಹಸೀಲ್ದಾರ್ ಬಿ.ತೇಜಸ್ವಿನಿ, ತಾಪಂ ಇಒ ಪ್ರದೀಪ್, ಮಂಚನಾಯ್ಕನಹಳ್ಳಿ ಗ್ರಾಪಂ ಅಧ್ಯಕ್ಷ ವಿ.ಸತೀಶ್‌ಕುಮಾರ್ ಹಾಗೂ ಸದಸ್ಯರು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಮಲ್ಲೇಶ್, ಮಾಜಿ ಅಧ್ಯಕ್ಷ ಯು.ನರಸಿಂಹಯ್ಯ, ಪಿಡಿಒ ಯತೀಶ್, ಕಾರ್ಯದರ್ಶಿ ಲಕ್ಷ್ಮೀಬಾಯಿ, ಜಿಲ್ಲಾ ಕಾಂಗ್ರೆಸ್ ಎಸ್‌ಎಸ್ಟಿ ಘಟಕದ ಅಧ್ಯಕ್ಷ ನರಸಿಂಹಯ್ಯ, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು ಸೇರಿದಂತೆ ಮುಂತಾದವರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು