ರಾಮನಗರ

ರಾಮನಗರದಲ್ಲಿ ದಳಪತಿಗಳಿಗೆ ಖೆಡ್ಡಾ ತೋಡಿದ್ರಾ ಕೈನಾಯಕರು

ರಾಮನಗರ: ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳುವ ಸಲುವಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು 2023ರ ವಿಧಾನಸಭಾ ಚುನಾವಣೆಗೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಿದ್ದಾರೆ. ಆದರೆ ಈ ನಡುವೆ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ರಾಮನಗರದಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಆದರೆ ಡಿ.ಕೆ.ಸುರೇಶ್ ಮಾತ್ರ ನನಗೇನು ಆಸಕ್ತಿ ಇಲ್ಲ ಎನ್ನುತ್ತಿದ್ದಾರೆ.

ಇದೀಗ ಈ ಸುದ್ದಿ ದಳಪತಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಾಮನಗರದಲ್ಲಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ಇಕ್ಬಾಲ್ ಹುಸೇನ್ ಅವರು ಮಿಂಚಿನ ಸಂಚಾರ ನಡೆಸುತ್ತಿದ್ದಾರೆ ಹೀಗಿರುವಾಗ ಡಿ.ಕೆ.ಸುರೇಶ್ ಅವರು ಕಣಕ್ಕಿಳಿಯುತ್ತಿದ್ದಾರೆ ಎನ್ನುವುದು ಎಷ್ಟರ ಮಟ್ಟಿಗೆ ನಿಜ ಎಂಬುದು ಅಚ್ಚರಿಗೆ ಕಾರಣವಾಗಿದೆ.

ಇಷ್ಟರಲ್ಲೇ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಾ ರಾಜ್ಯದಾದ್ಯಂತ ಪಂಚರಥಯಾತ್ರೆ ನಡೆಸುತ್ತಿರುವ ಹೆಚ್.ಡಿ.ಕುಮಾರಸ್ವಾಮಿಗೆ ರಾಜ್ಯದೆಲ್ಲೆಡೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಅವರನ್ನು ಕಟ್ಟಿಹಾಕಬೇಕಾದರೆ ರಾಮನಗರದಲ್ಲಿ ಪ್ರಭಾವಿಯಾಗಿರುವ ಡಿ.ಕೆ.ಸುರೇಶ್ ಅವರ ಸ್ಪರ್ಧೆ ಅಗತ್ಯವಿದೆ. ಹೀಗೆ ಮಾಡುವುದರಿಂದ ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಹೊಡೆಯುವ ತಂತ್ರವೂ ಅಡಗಿದೆ. ಪುತ್ರ ನಿಖಿಲ್ ಕುಮಾರ್ ನನ್ನು ಗೆಲ್ಲಿಸಿಕೊಂಡು ಬರಲೇ ಬೇಕಾಗಿರುವುದರಿಂದ ಹೆಚ್.ಡಿ.ಕುಮಾರಸ್ವಾಮಿ ಅವರು ರಾಮನಗರದತ್ತ ಹೆಚ್ಚಿನ ಗಮನಕೊಡಬೇಕಾಗುತ್ತದೆ. ಆಗ ಬೇರೆಡೆಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಅದು ಕೂಡ ಕಾಂಗ್ರೆಸ್ ಗೆ ಲಾಭ ತರಬಹುದು ಎಂಬ ಲೆಕ್ಕಾಚಾರವಾಗಿದೆ.

ಹಾಗೆನೋಡಿದರೆ ರಾಮನಗರ  ಕ್ಷೇತ್ರ ಜೆಡಿಎಸ್ ನ ಭದ್ರಕೋಟೆಯಾಗಿದ್ದು, ಕಳೆದ ಬಾರಿ (2018)ಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಬಳಿಕ ನಡೆದ ಉಪಚುನಾವಣೆಯಲ್ಲಿ ತಾಯಿ ಅನಿತಾಕುಮಾರಸ್ವಾಮಿ ಅವರು ಗೆಲುವು ಕಂಡಿದ್ದರು. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುತ್ತಿದ್ದು ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಆಗಿರುವ ಬೆಳವಣಿಗೆ ದಳಪತಿಗಳ ನಿದ್ದೆಗೆಡಿಸಿದೆ.

ಈ ಬಾರಿಯ ವಿಧಾನಸಭಾ ಚುನಾವಣೆ ರಾಮನಗರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿಗೆ ವೇದಿಕೆಯಾಗುವ ಎಲ್ಲ ಲಕ್ಷಣಗಳು ಕಂಡು ಬಂದಿವೆ. ಅದರಲ್ಲೂ ಈ ಚುನಾವಣೆ ಎರಡು ಪಕ್ಷಗಳ ನಡುವಿನ ಹಣಾಹಣಿಯಾಗುವ ಬದಲಿಗೆ ಡಿಕೆ ಬ್ರದರ್ಸ್ ಮತ್ತು ಹೆಚ್ಡಿಕೆ ಕುಟುಂಬದ ನಡುವಿನ ಪ್ರತಿಷ್ಠೆಯಾದರೂ ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ ಎರಡು ಕುಟುಂಬಗಳು ತಮ್ಮ ಪಕ್ಷದ ಮೂಲಕ ಜಿಲ್ಲೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವುದರೊಂದಿಗೆ ಪ್ರಾಬಲ್ಯ ಸಾಧಿಸುವ ಹಠಕ್ಕೆ ಬಿದ್ದಿದ್ದಾರೆ.

ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಭಾರೀ ಪೈಪೋಟಿಯಿತ್ತು. ಆದರೂ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಭಾವ ಕೆಲಸ ಮಾಡಿತ್ತು. ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಡಿ.ಕೆ.ಶಿವಕುಮಾರ್ ಅವರ ಯಾವ ತಂತ್ರಗಳು ನಡೆಯಲಿಲ್ಲ. ಅವರು ಕನಕಪುರಕ್ಕಷ್ಟೆ ಸೀಮಿತರಾಗಿ ಗೆಲುವು ಸಾಧಿಸಲು ಸಾಧ್ಯವಾಯಿತು.

ಅವತ್ತು ಅವರದ್ದೇ ಆದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಜೆಡಿಎಸ್ ಮುಂದೆ ಮಂಡಿಯೂರಬೇಕಾಯಿತು. ಒಂದು ರೀತಿಯಲ್ಲಿ ರಾಮನಗರ ಜೆಡಿಎಸ್ ಎನ್ನುವುದಕ್ಕಿಂತಲೂ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಭಾವ ಹೆಚ್ಚಿರುವ ಕ್ಷೇತ್ರವಾಗಿದ್ದು, ಹೆಚ್.ಡಿ.ಕುಮಾರಸ್ವಾಮಿ ಅವರ ಭದ್ರಕೋಟೆ ಎಂದರೆ ತಪ್ಪಾಗಲಾರದು. ಈ ಭದ್ರಕೋಟೆಗೆ ಈ ಬಾರಿ ಅತ್ತ ಡಿಕೆಶಿ ಬ್ರದರ್ಸ್ ಇತ್ತ ಬಿಜೆಪಿಯೂ ಲಗ್ಗೆಯಿಡಲು ಮುಂದಾಗಿದೆ.

2018ರಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಹೀಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿಯೂ ಗೆಲುವು ಪಡೆದಿದ್ದರು. ಬಳಿಕ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರಲ್ಲದೆ, ಉಪಚುನಾವಣೆ ನಡೆದಾಗ ಕಾಂಗ್ರೆಸ್ ನ ಡಿಕೆಶಿ ಬ್ರದರ್ಸ್ ಸಹಾಯದಿಂದ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಇವತ್ತಿನ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಜೋಡೆತ್ತು(ಡಿಕೆಶಿ- ಹೆಚ್ಡಿಕೆ)ಗಳ ನಡುವೆ ರಾಜಕೀಯ ಅಸ್ತಿತ್ವಕ್ಕೆ ಹೋರಾಟ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷರೂ, ಒಕ್ಕಲಿಗರ ನಾಯಕರೂ ಆಗಿರುವ ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದು, ಅದು ಸಾಧ್ಯವಾಗಬೇಕಾದರೆ ಒಕ್ಕಲಿಗರ ಪ್ರಾಬಲ್ಯವಿರುವ ರಾಮನಗರದಲ್ಲಿ ತಮ್ಮ ಕ್ಷೇತ್ರದೊಂದಿಗೆ ಮತ್ತೊಂದು ಕ್ಷೇತ್ರವನ್ನು ಗೆಲ್ಲಿಸಿ ತೋರಿಸಬೇಕಾದ ಅನಿವಾರ್ಯತೆಯಿದೆ.

ಕೆಪಿಸಿಸಿ ಅಧ್ಯಕ್ಷನಾಗಿ ರಾಜ್ಯದಲ್ಲಿ ದಂಡಯಾತ್ರೆ ನಡೆಸಿ ಕಾಂಗ್ರೆಸ್ ನ್ನು ಗೆಲ್ಲಿಸಿಕೊಂಡು ಬರುವುದು ಒಂದೆಡೆಯಾದರೆ, ತನ್ನದೇ ಜಿಲ್ಲೆಯಲ್ಲಿ ಎಷ್ಟು ಸ್ಥಾನವನ್ನು ಗೆಲ್ಲಿಸಿದ್ದಾರೆ ಎನ್ನುವುದು ಕೂಡ ಅಷ್ಟೇ ಮುಖ್ಯವಾಗಲಿದೆ. ಹೀಗಾಗಿ ಹಠಕ್ಕೆ ಬಿದ್ದಿರುವ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲೆಯಲ್ಲಿ ಗೆಲುವಿನ ಪತಾಕೆ ಹಾರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದು ಅನಿವಾರ್ಯವೂ ಹೌದು.

ರಾಮನಗರ ನೆಲದಲ್ಲಿ ಒಕ್ಕಲಿಗ ಸಮುದಾಯ ಜೆಡಿಎಸ್ ನ್ನು ಬೆಂಬಲಿಸುತ್ತಾ ಬಂದಿದ್ದು ಅವರನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನಕ್ಕೆ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಮೇಕೆದಾಟು ಯೋಜನೆ ಪಾದಯಾತ್ರೆ ಯೊಂದಿಗೆ ತಮ್ಮ ಶಕ್ತಿಪ್ರದರ್ಶನ ಆರಂಭಿಸಿದ್ದರು. ಆದರೆ ಇದೀಗ ಚುನಾವಣೆ ಬರುತ್ತಿದ್ದಂತೆಯೇ ತಾರಕ್ಕೇರಿದ್ದು, ನಿಖಿಲ್ ಕುಮಾರಸ್ವಾಮಿ ಅವರನ್ನು  ಈಗಲೇ ಕಟ್ಟಿಹಾಕದಿದ್ದರೆ ಮುಂದೆ ಕಷ್ಟವಾಗಬಹುದು ಎಂಬುದು ಡಿಕೆಶಿ ಬ್ರದರ್ಸ್ ಆಲೋಚನೆಯಾಗಿದೆ.

ಇಷ್ಟರಲ್ಲೇ  ಕ್ಷೇತ್ರದಲ್ಲಿ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಹಲವು ರೀತಿಯ ಅಭಿಯಾನವನ್ನು ಆರಂಭಿಸಿದೆ. ಇದೆಲ್ಲದರ ನಡುವೆ ಡಿ.ಕೆ.ಶಿವಕುಮಾರ್ ಅವರ ಸಹೋದರ ಸಂಸದ ಡಿ.ಕೆ.ಸುರೇಶ್  ಅವರನ್ನು ರಾಮನಗರ ಕ್ಷೇತ್ರದಿಂದ  ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಒಂದು ವೇಳೆ ಡಿ.ಕೆ.ಸುರೇಶ್ ಅವರು ರಾಮನಗರ ಕ್ಷೇತ್ರದಿಂದ ನಿಖಿಲ್ ಕುಮಾರ್ ಸ್ವಾಮಿ ವಿರುದ್ಧ ಸ್ಪರ್ಧಿಸುವುದು ನಿಜವೇ ಆದರೆ ರಾಜ್ಯ ರಾಜಕಾರಣದಲ್ಲಿ  ರಾಮನಗರ ಕ್ಷೇತ್ರ ಭಾರೀ ಸುದ್ದಿ ಮಾಡುವುದರೊಂದಿಗೆ ಎಲ್ಲರ ಗಮನಸೆಳೆಯುವುದಂತು ಖಚಿತ.

Ashika S

Recent Posts

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…

18 mins ago

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

43 mins ago

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

1 hour ago

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

2 hours ago

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

3 hours ago

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

3 hours ago