News Karnataka Kannada
Monday, April 15 2024
Cricket
ರಾಮನಗರ

ಆಡಳಿತ ವಿರೋಧಿ ಅಲೆಯಿಂದ ಬಿಜೆಪಿಗೆ ಸೋಲು: ಡಿವಿಎಸ್

Anti-incumbency led to defeat for BJP: DVS
Photo Credit : News Kannada

ರಾಮನಗರ: ರಾಜ್ಯ ಸರ್ಕಾರದ ಆಡಳಿತ ವಿರೋಧಿ ಅಲೆಯು ಬಿರುಗಾಳಿಯಂತೆ ಬೀಸಿದ ಕಾರಣ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಾಣಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ಘಟಕ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಎದ್ದ ಭಾರಿ ವಿರೋಧಿ ಅಲೆಯೇ ನಮ್ಮ ಸೋಲಿಗೆ ಕಾರಣವೆಂದು ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಸಿದ್ದನಿದ್ದೇನೆ. ಪಕ್ಷದ ಸಾಧನೆಗಳನ್ನು ಜನರಿಗೆ ತಲುಪಿಸಲು ನಾವು ಸೋತಿದ್ದೇವೆ. ಕಾಂಗ್ರೆಸ್ ಸುಳ್ಳುಗಳನ್ನು ಕೌಂಟರ್ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಆಡಳಿತ ವಿರೋಧಿ ಅಲೆಗೆ ಸಿ.ಪಿ.ಯೋಗೇಶ್ವರ್ ಅವರಂತಹ ನಾಯಕರು ಸೋಲು ಅನುಭವಿಸಬೇಕಾಯಿತು ಎಂದು ವಿಷಾಧ ವ್ಯಕ್ತಪಡಿಸಿದರು.

ಡಿ.ಕೆ. ಶಿವಕುಮಾರ್ ಅವರು ಒಳ್ಳೆಯವರೊ ಕೆಟ್ಟವರೊ ಒಟ್ಟಾರೆ ಮುಖ್ಯಮಂತ್ರಿ ಆಗುತ್ತಾರೆಂದು ಭಾವಿಸಿ ರಾಮನಗರದ ಜನರು ಕಾಂಗ್ರೆಸ್‌ಗೆ ಮತ ಹಾಕಿದರು. ಚುನಾವಣೆ ಫಲಿತಾಂಶವನ್ನು ಸ್ವತಃ ಕಾಂಗ್ರೆಸ್ ಕೂಡ ನಿರೀಕ್ಷೆ ಮಾಡಿರಲಿಲ್ಲ. ಸುಳ್ಳು ಆಶ್ವಾಸನೆಯ ಚುನಾವಣೆ ಎಂಬುದಕ್ಕೆ ಈ ಚುನಾವಣೆ ನಿದರ್ಶನವಾಗಿದೆ. ರಾಜ್ಯ ನಾಯಕರು, ಜಿಲ್ಲಾ ನಾಯಕರ ಮಟ್ಟದಲ್ಲಿ ತಪ್ಪಾಗಿರಬಹುದು. ಆದರೆ, ಸೋಲಿಗೆ ಎದೆಗುಂದಬೇಕಿಲ್ಲ. ನಾವೀಗ ಗಾಯಗೊಂಡ ಹುಲಿಯಾಗಿದ್ದು, ಮತ್ತೆ ಬೇಟೆಯಾಡಲು ಸಿದ್ಧವಾಗಬೇಕಿದೆ ಎಂದು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಬಿಜೆಪಿ ಪ್ರತಿನಿಧಿಸಲಿದೆ. ಹಿಂದಿಗಿಂತ ಈಗಿನ ಕನಕಪುರದಲ್ಲಿ ಪಕ್ಷ ಹೆಚ್ಚಿನ ನೆಲೆ ಕಂಡಿದೆ. ಡಿಕೆಶಿ ಅವರ ಅಹಂಕಾರದ ನಡೆ ಮತ್ತು ಮಾಡುವ ತಪ್ಪುಗಳೇ ನಮ್ಮ ಪಕ್ಷಕ್ಕೆ ವರದಾನವಾಗಲಿದೆ. ಹೀಗಾಗಿ ಮುಂದಿನ ಚುನಾವಣೆ ಎದುರಿಸಲು ಕಾರ್ಯಕರ್ತರು ಮಾನಸಿಕವಾಗಿ ಸಿದ್ಧರಾಗಬೇಕು ಎಂದು ಸದಾನಂದಗೌಡರು ಸಲಹೆ ನೀಡಿದರು.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮಾತನಾಡಿ, ಬಿಜೆಪಿ-ಜೆಡಿಎಸ್ ಹೋರಾಟದಲ್ಲಿ ಕಾಂಗ್ರೆಸ್‌ಗೆ ಲಾಭವಾಗಿದೆ. ಆದರೆ, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಶಕ್ತಿಯನ್ನು ಕುಂದಿಸಿದ್ದೇವೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯಲ್ಲಿ ಯಾವುದೇ ಛಾಪು ಮೂಡಿಸಲಿಲ್ಲ. ನಮ್ಮದೇ ಸರ್ಕಾರ ಇದ್ದರೂ ಸಹ ಜನಸಾಮಾನ್ಯರನ್ನು ಪಕ್ಷದ ಕಡೆಗೆ ಸೆಳೆಯಲಾಗಲಿಲ್ಲ. ಜನರಲ್ಲಿ ಯಾವುದೇ ಭರವಸೆ ಮೂಡಿಸಲಾಗಲಿಲ್ಲ ಈ ಬಗ್ಗೆ ನನಗೆ ನೋವಿದೆ. ನಾಲ್ಕು ಕ್ಷೇತ್ರದಲ್ಲಿ ಹೋರಾಟ ಮಾಡಿದರೂ ಎಲ್ಲೂ ಗೆಲ್ಲಲಾಗಲಿಲ್ಲ ಎಂದು ಹೇಳಿದರು

ಕಾಂಗ್ರೆಸ್ಸಿಗರು ಸುಳ್ಳು ಭರವಸೆ ಮತ್ತು ಟೋಕನ್ ಹಂಚಿ ಗೆದ್ದರು. ಆ ಪಕ್ಷದಲ್ಲಿ ಎರಡು ಗುಂಪುಗಳಿದ್ದು, ಜನರಿಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸವುದಿಲ್ಲ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಕೊಟ್ಟರು. ಆದರೆ, ಖಾಸಗಿಯವರಿಗೆ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಅವರ ಐದು ಗ್ಯಾರಂಟಿಗಳು ಸಹ ಇದೇ ರೀತಿ ಇದ್ದು ವಿಫಲವಾಗಲಿವೆ. ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ಗೆ ಕರ್ನಾಟಕದಿಂದಲೇ ಹಣ ಹೊಂದಿಸಬೇಕಿದೆ. ರಾಮನಗರದಲ್ಲಿ ಒಂದು ಸಮುದಾಯ ಒಂದೇ ಕಡೆಗೆ ಮತ ಹಾಕಿತು. ಆ ಒಗ್ಗಟ್ಟು ನಮ್ಮಲ್ಲಿ ಇಲ್ಲದಿರುವುದು ಬೇಸರ ತಂದಿದೆ ಎಂದು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬದಲಾದ ಪರಿಸ್ಥಿತಿಯಲ್ಲಿ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿ ಕೆಲಸ ಮಾಡಬೇಕಿದೆ ಎಂದು ಯೋಗೇಶ್ವರ್ ತಿಳಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣಗೌಡ ಮಾತನಾಡಿ, ಜನರಿಗೆ ಉತ್ತಮ ಆಡಳಿತ ಕೊಟ್ಟರೂ ಸಹ ನಾವು ಸೋತಿದ್ದೇವೆ. ಕಾಂಗ್ರೆಸ್ ರಚನಾತ್ಮಕವಾಗಿ ಕೆಲಸ ಮಾಡಿ ಅಧಿಕಾರಕ್ಕೆ ಬಂದಿಲ್ಲ. ಸೋಲು ಗೆಲುವು ನಿರಂತರ ಪ್ರಕ್ರಿಯೆಯಾಗಿದ್ದ ನಾವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಮಾತನಾಡಿ, ಚುನಾವಣೆ ಫಲಿತಾಂಶನಿಜಕ್ಕೂ ನಿರಾಶೆ ಮೂಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ನಾವು ಮನೆಮನೆಗೆ ತಲುಪಿಸುವಲ್ಲಿ ನಾವು ವಿಫಲರಾದೆವು. ಆಗಿರುವ ತಪ್ಪುಗಳು ಮರುಕಳಿಸದಂತೆ ನಾವು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಪ್ರಧಾನ ಕಾರ್ಯದರ್ಶಿ ರುದ್ರದೇವರು, ಮುಖಂಡರಾದ ಪ್ರಸಾದ್‌ಗೌಡ, ಅಪ್ಪಾಜಿಗೌಡ ಸೇರಿದಂತೆ ಮುಂತಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು