News Karnataka Kannada
Tuesday, April 30 2024
ರಾಮನಗರ

ಬಿಡದಿಯಲ್ಲಿ  ಬೆಲೆ ಏರಿಕೆ ವಿರೋಧಿಸಿ ಕಾರ್ಮಿಕರಿಂದ  ಪ್ರತಿಭಟನೆ

Bantwal (3)
Photo Credit :

ರಾಮನಗರ: ಕೇಂದ್ರ ಸರ್ಕಾರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಬಿಡದಿಯಲ್ಲಿ ಕಾರ್ಮಿಕರು ಬೈಕ್ ಜಾಥಾ  ನಡೆಸಿ ಪ್ರತಿಭಟಿಸಿದರು.

ಜೆ.ಸಿ.ಟಿ.ಯು ನೇತೃತ್ವದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಬಿಡದಿ ಕೈಗಾರಿಕಾ ಪ್ರದೇಶದ ೨೨ ಕಾರ್ಖಾನೆಗಳ ಕಾರ್ಮಿಕ ಸಂಘದ ಸದಸ್ಯರು ಹಾಗೂ ಸಿ.ಐ.ಟಿ.ಯು ಸಂಘಟನೆ ಮುಖಂಡರು ಸೋಮವಾರ ಬೈಕ್ ಜಾಥ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.

ಬಿಡದಿಯ ವಂಡರ್ ಲಾ ಗೇಟ್ ಬಳಿಯಿಂದ ಆರಂಭಗೊಂಡ ಬೈಕ್ ರ್‍ಯಾಲಿಯು ಬೆಂಗಳೂರು- ಮೈಸೂರು ಹೆದ್ದಾರಿ ಮೂಲಕ ಕಾಡುಮನೆ ವೃತ್ತ, ಮದರ್‌ಸನ್ ಕಾರ್ಖಾನೆ, ಬಾಷ್ ಇಂಡಿಯಾ ಕಂಪೆನಿ ಮಾರ್ಗವಾಗಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್, ಕೊಕಾ ಕೋಲಾ ಸರ್ಕಲ್, ಭೈರಮಂಗಲ ಕ್ರಾಸ್ ಮೂಲಕ ಸಾಗಿ ಚೌಕಿ ಮಠದ ಆವರಣದಲ್ಲಿ ಸಮಾವೇಶಗೊಂಡಿತು.

ನಂತರ ಬಿಡದಿಯ ಚೌಕಿ ಮಠದ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಿ.ಐ.ಟಿ.ಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಅವರು ಮಾತನಾಡಿ, ಕೇಂದ್ರದ ಮೋದಿ ಸರ್ಕಾರ ನವ ಉದಾರೀಕರಣ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದ್ದು, ಗ್ರಾಮೀಣ ಉದ್ಯೋಗ ಖಾತ್ರಿ, ಐಸಿಡಿಎಸ್ ಯೋಜನೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಮತ್ತಿತರ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ನಿರಂತರ ಹಣಕಾಸಿನ ಕಡಿತ ಮಾಡಲಾಗುತ್ತಿದೆ. ಇದರಿಂದ ನಿರುದ್ಯೋಗ, ಬಡತನ, ಹಸಿವಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಜನವಿರೋಧಿ ತೆರಿಗೆ ನೀತಿ, ದಿನ ಬಳಕೆಯ ಸರಕು ಮತ್ತು ಸೇವೆಗಳ ಮೇಲಿನ ಜಿ.ಎಸ್.ಟಿ ಯಿಂದಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಕೋವಿಡ್ ಸಂಕಷ್ಟದ ಜತೆಗೆ ಬೆಲೆ ಏರಿಕೆ ಬಿಸಿ ದೇಶದಲ್ಲಿ ಅರ್ಧದಷ್ಟು ಜನರನ್ನು ಬಡತನ ಹಸಿವಿಗೆ ತಳ್ಳಲ್ಪಟ್ಟಿದೆ. ಈ ಮೂಲಕ ಭಾರತವು ಜಾಗತಿಕ ಸೂಚ್ಯಾಂಕದಲ್ಲಿ ೧೦೧ನೇ ಸ್ಥಾನಕ್ಕೆ ಕುಸಿದಿದೆ ಎಂದು ಕಿಡಿಕಾರಿದರು.

ಸಿಐಟಿಯು ರಾಜ್ಯ ಸಮಿತಿ ಮಾಜಿ ಅಧ್ಯಕ್ಷ ಕಾಮ್ರೆಡ್ ವಿ.ಜೆ.ಕೆ.ನಾಯಕ್ ಮಾತನಾಡಿ, ದೇಶದ ಸಾರ್ವಜನಿಕ ಉದ್ದಿಮೆಗಳಾದ ರೈಲ್ವೆ, ವಿಮಾನಯಾನ, ವಿದ್ಯುತ್, ಬ್ಯಾಂಕ್, ದೂರ ಸಂಪರ್ಕ, ಹೆದ್ದಾರಿಗಳು ಮತ್ತಿತರ ಲಾಭದಾಯಕ ಉದ್ದಿಮೆಗಳನ್ನು ಹಂತಹಂತವಾಗಿ ಖಾಸಗೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಸಂಪತ್ತು ನಗದೀಕರಣ ಯೋಜನೆಯನ್ನು ರೂಪಿಸಿದೆ. ಇದಲ್ಲದೇ ಬಹುತೇಕ ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಮೂಲಕ ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ಖಾಸಗಿಕರಣ ಮಾಡಲು ಯೋಜಿಸಿರುವುದು ದೇಶವನ್ನು ದಿವಾಳಿತನಕ್ಕೆ ಹಿಡಿದ ಕೈಗನ್ನಡಿ ಎಂದು ಆಪಾದಿಸಿದರು.

ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷ ದೀಪಕ್ ಮಾತನಾಡಿ, ಕಾರ್ಖಾನೆಗಳಲ್ಲಿ ಕಾರ್ಮಿಕರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಹಾಗೂ ಗೌರವಯುತ ಬದುಕಿಗಾಗಿ ಸಂಘವನ್ನು ರಚಿಸಿಕೊಂಡಿವೆ. ಆದರೆ ಆಡಳಿತ ಮಂಡಳಿಗಳು ಸೇಡಿನ ಕ್ರಮವಾಗಿ ಕಾರ್ಮಿಕರನ್ನು ಕೆಲಸದಿಂದ ಹೊರಹಾಕಿ ಗುತ್ತಿಗೆ, ಟ್ರೈನಿಗಳನ್ನಾಗಿ ಕನಿಷ್ಠ ವೇತನದಲ್ಲಿ ಖಾಯಂ ಸ್ವರೂಪದ ಕೆಲಸಗಳಲ್ಲಿ ದುಡಿಸಿಕೊಳ್ಳುತ್ತಿವೆ. ಕಳೆದ ಆರು ತಿಂಗಳ ಹಿಂದೆಯಷ್ಟೇ ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ನಡೆಸಿದ ೪೦ ಜನ ಟಿಕೆಎಂ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವುದು ಇದಕ್ಕೆ ತಾಜಾ ಉದಾಹರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು