ಬೆಂಗಳೂರು: ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಸುರಿದ ಮಳೆ ಅಚ್ಚರಿ ಮೂಡಿಸಿದೆ. ಈ ನಡುವೆ ರಾಜ್ಯದ ಹಲವೆಡೆ ಮುಂದಿನ ಐದು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಕುರಿತು ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವು ಹವಾಮಾನ ಇಲಾಖೆ ಮುನ್ಸೂಚನೆಯನ್ನು ಉಲ್ಲೇಖಿಸಿ ಎಚ್ಚರಿಕೆ ನೀಡಿದೆ. ‘ರಾಜ್ಯದ ದಕ್ಷಿಣ ಒಳಭಾಗ, ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮುಂದಿನ 5 ದಿನ ಸಾಧಾರಣ ಮಳೆ ಸುರಿಯುವ ಸಾಧ್ಯತೆಯಿದೆ.
ಉತ್ತರದ ಜಿಲ್ಲೆಗಳ ಶುಷ್ಕ ಗಾಳಿ ಇರಲಿದೆ. ರಾಜ್ಯದಾದ್ಯಂತ ಸಾಧಾರಣದಿಂದ ಮಂಜು ಮತ್ತು ಅಲ್ಲಲ್ಲಿ ತುಂತುರು ಮಳೆ ಇರುತ್ತದೆ’ ಎಂದು ಹೇಳಿದೆ. ಎಂ.ಜಿ. ರಸ್ತೆ, ಜಯನಗರ, ಹೆಬ್ಬಾಳ, ಸುಲ್ತಾನಪಾಳ್ಯ, ಆರ್.ಟಿ. ನಗರ, ಇಂದಿರಾನಗರ. ಹಲಸೂರು ಮತ್ತು ಆರ್.ಆರ್.ನಗರ ಸೇರಿ ಹಲವೆಡೆ ಭಾನುವಾರ ಲಘು ಮಳೆಯಾಗಿದೆ.
ಬೆಂಗಳೂರಿನಲ್ಲಿ ಭಾನುವಾರ ತಾಪಮಾನವು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಇರಬಹುದು , ಸೋಮವಾರ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.