ಬೆಂಗಳೂರು: ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಗರಣ ಸಂಬಂಧ ಬೆಂಗಳೂರಿನ ಗೋಡೌನ್‌ನಲ್ಲಿ ಕಾರ್ಕಳ ಪೊಲೀಸರು ಶನಿವಾರ ಸ್ಥಳ ಮಹಜರು ಮಾಡಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ಕಾರ್ಕಳ ಟೌನ್ ಠಾಣೆ ಪೊಲೀಸರ ತಂಡ ಕೆಂಗೇರಿ ಬಳಿಯ ಗೋಡೌನ್‌ನಲ್ಲಿ ಸ್ಥಳಮಹಜರು ನಡೆಸಿದ್ದಾರೆ. ಕೆಂಗೇರಿ ಬಳಿಯ ಗೋಡೌನ್‌ನಲ್ಲಿ ಸಂಗ್ರಹಿಸಿದ್ದ ಪ್ರತಿಮೆಗೆ ಬೇಕಾದ ವಸ್ತುಗಳು ಸೇರಿದಂತೆ ಪ್ರತಿಮೆ ನಿರ್ಮಾಣಕ್ಕೆ ಬಳಸಿದ್ದ ವಸ್ತುಗಳ ಪರಿಶೀಲನೆ ನಡೆಸಿದ್ದಾರೆ.
ಪರಶುರಾಮ ಮೂರ್ತಿ ನಿರ್ಮಾಣದ ಬಗ್ಗೆ ವಿವಾದ ಕೇಳಿ ಬಂದ ಹಿನ್ನೆಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾರ್ಕಳ ಟೌನ್ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
ಕಾರ್ಕಳ ಮಾಜಿ ಸಚಿವ, ಹಾಲಿ ಶಾಸಕ ಸುನೀಲ್ ಕುಮಾರ್ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಿದ್ದರು. ಕಾಮಗಾರಿ ಪೂರ್ಣಗೊಳ್ಳದೇ ಈ ಥೀಮ್ ಪಾರ್ಕ್ ಉದ್ಘಾಟನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಸಂಬಂಧ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಶಿಫಾರಸ್ಸಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಐಡಿ ತನಿಖೆಗೆ ಆದೇಶಿಸಿದ್ದರು.
ಉದ್ಘಾಟನೆಯಾದ ಬಳಿಕ ಸಿಡಿಲು ನಿರೋಧಕ ಅಳವಡಿಕೆ ಮತ್ತು ಇನ್ನಿತರ ಬಾಕಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಥೀಮ್ ಪಾರ್ಕ್ ಬಂದ್ ಮಾಡಿರುವ ವಿಚಾರವಾಗಿ, ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಪರಶುರಾಮನ ಮೂರ್ತಿ ನಕಲಿ ಎನ್ನುವ ಮೂಲಕ ಹೊಸ ವಿವಾದ ಆರಂಭವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪರಿಶೀಲನೆ ಮಾಡಿದ್ದರು. ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ನೀಡಿದ್ದರು.