ಬೆಂಗಳೂರು: ನಟ ದರ್ಶನ್ ಅವರಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ನೋಟಿಸ್ ಜಾರಿಯಾಗಿದೆ. ಹೆಣ್ಣು ಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ನೋಟಿಸ್ ತಲುಪಿದ 10 ದಿನದಲ್ಲಿ ಬಂದು ವಿವರಣೆ ನೀಡಲು ಸೂಚನೆ ನೀಡಲಾಗಿದೆ.
ನಟ ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಾರ್ವಜನಿಕ ಸಮಾರಂಭದಲ್ಲಿ ದರ್ಶನ್ ಅವರು ಹೆಣ್ಣು ಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಗೌಡತಿಯರ ಸೇನೆ ಮಹಿಳಾ ಆಯೋಗಕ್ಕೆ ದೂರು ನೀಡಿತ್ತು.
ಹೆಣ್ಣು ಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಪ್ರತಿಭಟನೆ ನಡೆಸಿದ್ದ ಗೌಡತಿಯರ ಸೇನೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಗೌಡತಿಯರ ಸೇನೆ ರಾಜ್ಯಾಧ್ಯಕ್ಷರಾದ ಶ್ರೀಮತಿ ರೇಣುಕಾ ಅವರ ದೂರಿನ ಮೇರೆಗೆ ರಾಜ್ಯ ಮಹಿಳಾ ಆಯೋಗ ದರ್ಶನ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ 10 ದಿನದಲ್ಲಿ ಈ ಕುರಿತು ವಿವರಣೆ ನೀಡಲು ಸೂಚಿಸಲಾಗಿದೆ.