ಬೆಂಗಳೂರು: ಗೆಳತಿಯನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದ ನಕ್ಸಲ್ನನ್ನು ಕೇಂದ್ರ ಅಪರಾಧ ವಿಭಾಗದ ಎಟಿಸಿ ತಂಡ ಬಂಧಿಸಿರುವ ಘಟನೆ ನಡೆದಿದೆ.
ಹರಿಯಾಣ ಮೂಲದ ಅನಿರುದ್ದ್ ಬಂಧಿತ ನಕ್ಸಲ್. ಅನಿರುದ್ದ್ ನಿಷೇಧಿತ ಸಿಪಿಐ(ಎಂ) ನಕ್ಸಲ್ ಸಂಘಟನೆಯಲ್ಲಿ ಇದ್ದನು. ಅನಿರುದ್ದ್ ನಿಷೇಧಿತ ಬರಹಗಳನ್ನ ಬರೆದು ಪೋಸ್ಟ್ ಮಾಡುತ್ತಿದ್ದನು. ಈತನಿಗಾಗಿ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ತಂಡ ಬಲೆ ಬೀಸಿತ್ತು. ಆದರೆ, ಅನಿರುದ್ದ್ ಬಲೆಗೆ ಬಿದ್ದಿರಲಿಲ್ಲ. ಘಟನೆ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಿರುದ್ದ್ ರಾಜನ್ ಗೆಳತಿಯನ್ನು ನೋಡಲು 3-4 ದಿನದ ಹಿಂದೆ ಬೆಂಗಳೂರಿಗೆ ಬಂದಿದ್ದನು. ಅನಿರುದ್ದ್ ರಾಜನ್ ಗುರುವಾರ ಬೆಳಗ್ಗೆ 8 ಗಂಟೆಗೆ ಚೆನ್ನೈಗೆ ಹೋಗಲು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದನು. ಈ ವೇಳೆ ಆತನ ಮೇಲೆ ನಿಗಾ ಇಟ್ಟಿದ್ದ ಎಟಿಸಿ ತಂಡ ಬಂಧಿಸಿದೆ. ತನಿಖೆ ವೇಳೆ, ಅನಿರುದ್ದ್ ರಾಜನ್ ಹಣ ಸಂಗ್ರಹ, ಗುಪ್ತ ಸಭೆಗಳನ್ನು ನಡೆಸಿರುವುದು ಪತ್ತೆಯಾಗಿದೆ. ನಕ್ಸಲ್ ಅನಿರುದ್ದ್, ವಿಕಾಸ್ ಘಾಡ್ಗೆ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಹೊಂದಿದ್ದಾನೆ.
ಆರೋಪಿ ಅನಿರುದ್ದ್ ರಾಜನ್ನಿಂದ 2 ಬ್ಯಾಗ್, ಪೆನ್ಡ್ರೈವ್ಗಳು, ಟ್ಯಾಬ್ ವಶಕ್ಕೆ ಪಡೆಯಲಾಗಿದೆ. ಅನಿರುದ್ದ ರಾಜನ್ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಪ್ರಕರಣ ಸಂಬಂಧ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾತನಾಡಿ, ಹರಿಯಾಣ ಮೂಲದ ಅನಿರುದ್ದ ರಾಜನ್ ಖಾಸಗಿ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದನು. ಈತ ನಿಷೇಧಿತ ಎಡಪಂಥಿಯ ಸಂಘಟನೆಯ ಸಂಪರ್ಕ ಹೊಂದಿದ್ದಾನೆ. ಆ ಸಂಘಟನೆಗಳ ಜೊತೆಗೆ ಈತ ಕಾರ್ಯ ನಿರ್ವಹಿಸುತ್ತಿದ್ದನು. ಸದ್ಯ ಆತನನ್ನ ಬಂಧಿಸಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನ 15 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದೇವೆ. ಸದ್ಯ ಆತನ ಕಾರ್ಯ ಚಟುವಟಿಕೆ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಹೇಳಿದರು.