ಬೆಂಗಳೂರು: ಡ್ರಗ್ಸ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಕೋಟಿ ಕೋಟಿ ಹಣ ವಂಚಿಸುತ್ತಿದ್ದ ಐದು ಜನ ಸೈಬರ್ ವಂಚಕರನ್ನು ಸಿಐಡಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ದುಬೈನ ಮೂಲದ ಯುಸೂಫ್ ಸೇಠ್, ಬೆಂಗಳೂರು ಮೂಲದ ಮಹಮ್ಮದ್ ಶಾಕಿಬ್, ಮಹಮ್ಮದ್ ಅಯಾನ್, ಅಹಸಾನ್ ಅನ್ಸಾರಿ, ಸೊಲೋಮನ್ ರಾಜ ಬಂಧಿತ ಆರೋಪಿಗಳು. ನಿಮ್ಮ ಹೆಸರಿನ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ ಎಂದು ಆರೋಪಿಗಳು ಕರೆ ಮಾಡುತ್ತಿದ್ದರು.
ನಾವು ಕ್ರೈಂ ಪೊಲೀಸರು, ಈ ಪ್ರಕರಣವನ್ನು ಬಗೆಹರಿಸಲು ನೀವು ಹಣ ಕೊಡಬೇಕು ಎಂದು ಸಂತ್ರಸ್ತರಲ್ಲಿ ಬೇಡಿಕೆ ಇಡುತ್ತಿದ್ದರು. ಕೊಡಗು ಮೂಲದ ವ್ಯಕ್ತಿಯಿಂದ 2.20 ಕೋಟಿ ರೂ. ಹಣವನ್ನು ಆರ್‌ಟಿಜಿಎಸ್ ಮಾಡಿಸಿಕೊಂಡಿದ್ದರು. ವಂಚಿಸಿದ್ದ ಹಣದಿಂದ ಬೆನ್ಜ್ ಕಾರನ್ನು ಖರೀದಿ ಮಾಡಿದ್ದರು.
ಈ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 1.70 ಕೋಟಿ ರೂ., 7700 ಯುಎಸ್ ಡಾಲರ್ ವಶಪಡಿಸಿಕೊಳ್ಳಲಾಗಿದೆ. ದುಬೈನಲ್ಲಿ ವಂಚನೆ ಮಾಡಲು ಆರೋಪಿಗಳು ಭಾರತೀಯ ಬ್ಯಾಂಕ್ ಅಕೌಂಟ್ ಬಳಸಿದ್ದಾರೆ. ಈ ಕುರಿತಂತೆ ಸಿಐಡಿ ಅಧಿಕಾರಿಗಳು ತನಿಖೆ ನಡಸುತ್ತಿದ್ದಾರೆ.