ಬೆಂಗಳೂರು: ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಪುಟದಲ್ಲಿ ಹಳೆ ಬೇರು ಹೊಸ ಚಿಗುರು ಸೇರಿಸಿ ಹೊಸ ಆಯಾಮ ನೀಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವೆಲ್ಲ ಸಿಎಂ ಆಗಿ ಕೆಲಸ ಮಾಡಿದ್ದೇವೆ. ಹೊಸಬರಿಗೆ ಅವಕಾಶ ಮಾಡಿದ್ದಾರೆ ಈ ಬಾರಿ ಮೈತ್ರಿ ಪಾಲನೆ ಅಗತ್ಯ ಇದೆ. ಪಕ್ಷದವರು ನಮ್ಮಿಂದ ಸಹಕಾರ ಬಯಸಿದ್ದರು. ನಾವು ಸಹಕಾರ ನೀಡಿದ್ದೇವೆ ಎಂದರು.
ಇನ್ನು ಸೋಮಣ್ಣ ಅವರಿಗೆ ಸಚಿವ ಸ್ಥಾನ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೋಮಣ್ಣ ಅವರಿಗೆ ಕೊಟ್ಟಿರುವುದು ಅಚ್ಚರಿಯೇನಲ್ಲ. ಅವರು ಹೋರಾಟಗಾರರಿದ್ದಾರೆ. ಅವರು ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು. ಹೋರಾಟ ಮಾಡಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಅಂತರದಿಂದ ಗೆದ್ದು ಬಂದಿದ್ದರು. ಅವರ ಅನುಭವಕ್ಕೆ ಅವಕಾಶ ದೊರೆತಿದೆ. ಅವರ ಅನುಭವ ಸೇವೆ ದೇಶಕ್ಕೆ ದೊರೆಯುತ್ತದೆ ಎಂದು ಹೇಳಿದರು.
ನೂತನ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷ ದೇಶ ಮಟ್ಟದಲ್ಲಿ ಯೋಚನೆ ಮಾಡುತ್ತದೆ. ಇಡೀ ದೇಶವನ್ನು ಗಮನ ಕೊಡುತ್ತದೆ. ಉತ್ತರ ಕರ್ನಾಟಕದ ಸಮಸ್ಯೆ ಬಂದಾಗ ನಮ್ಮ ಪಕ್ಷ ಪ್ರಭಲವಾಗಿ ಕೆಲಸ ಮಾಡುತ್ತದೆ. ಪ್ರಲ್ಹಾದ್ ಜೋಷಿಯವರು ಸಂಪುಟ ಸಚಿವರಾಗಿದ್ದಾರೆ. ಉತ್ತರ ಕರ್ನಾಟಕ ಭಾಗವನ್ನು ಪ್ರತಿನಿಧಿಸುತ್ತಾರೆ. ಅವರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಗ್ಯಾರೆಂಟಿ ರಾಜಕೀಯ ಯೋಜನೆ
ಗ್ಯಾರೆಂಟಿ ಗಳಿಂದ ರಾಜಕೀಯ ಲಾಭವಾಗಿಲ್ಲ ಎನ್ನುವ ಚರ್ಚೆ ಆರಂಭವಾಗಿರುವುದನ್ನು ನೋಡಿದರೆ, ಕಾಂಗ್ರೆಸ್ ನವರು ರಾಜಕೀಯ ಲಾಭಕ್ಕಾಗಿ ಗ್ಯಾರೆಂಟಿ ಗಳನ್ನು ಮಾಡಿದ್ದರು ಎಂದು ಅರ್ಥವಾಗುತ್ತದೆ. ಗ್ಯಾರೆಂಟಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಇನ್ನು ಬಿಬಿಎಂಪಿಯಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಪ್ರತಿ ಮನೆಗೂ ತೆರಿಗೆ ಹಾಕುವ ಯೋಜನೆ ರೂಪಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದಲ್ಲಿ ಸಂಬಳ ಕೊಡಲು ಹಣ ಇಲ್ಲ. ಹೀಗಾಗಿ ಇವರು ಜನರ ಮೇಲೆ ತೆರಿಗೆ ಹಾಕಿ ವಸೂಲು ಮಾಡಲು ಮುಂದಾಗಿದ್ದಾರೆ. ಬೆಂಗಳೂರಿನ ಜನರು ಎಂಥ ಸರ್ಕಾರ ತಂದಿದ್ದೇವೆ ಎಂದು ಯೋಚನೆ ಮಾಡಬೇಕು ಎಂದರು.
ಇನ್ನು ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರದ ಕುರಿತು ನಾಗೇಂದ್ರ ರಾಜಿನಾಮೆ ನೀಡಿದ್ದಾರೆ. ಸಚಿವ ಶರಣ ಪ್ರಕಾಶ ಪಾಟೀಲರ ಬಗ್ಗೆ ಎಸ್ ಐಟಿ ಯಿಂದ ಸರಿಯಾದ ರೀತಿಯಲ್ಲಿ ತನಿಖೆಯಾಗುತ್ತಿದೆ. ಅವರು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ ಎಂದರು.
ಶಿಗ್ಗಾವಿಯಲ್ಲಿ ಅಭ್ಯರ್ಥಿ ಬಗ್ಗೆ ಪಕ್ಷ ತೀರ್ಮಾನ
ಶಿಗ್ಗಾವಿ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಬೇಕೆಂದು ಪಕ್ಷ ತೀರ್ಮಾನ ಮಾಡುತ್ತದೆ. ಅಲ್ಲಿ ನಮ್ಮ ಕುಟುಂಬದವರು ಅಭ್ಯರ್ಥಿಯಾಗಬೇಕೆಂದು ನಾವು ಬೇಡಿಕೆ ಇಟ್ಟಿಲ್ಲ. ನಾನು ಮಾಜಿ ಆಗಿರುವುದರಿಂದ ನನ್ನ ಮಗ ಭರತ್ ಹೆಸರು ಕೇಳಿ ಬರುತ್ತಿದೆ. ನಾವು ಯಾವುದೇ ಬೇಡಿಕೆ ಇಟ್ಟಿಲ್ಲ. ಅಲ್ಲಿ ಪಕ್ಷ ಸಮೀಕ್ಷೆ ಮಾಡಿ ಯಾರು ಗೆಲ್ಲುತ್ತಾರೆ ಅನ್ನುವುದನ್ನು ಪಕ್ಷ ಟಿಕೆಟ್ ನೀಡಲಿ. ಯಾರಿಗೇ ಟಿಕೆಟ್ ನೀಡಿದರೂ ಗೆಲ್ಲಿಸಿಕೊಂಡು ಬರುವ ಕೆಲಸ ಮಾಡುತ್ತೇವೆ ಎಂದರು.
ಅಲ್ಲದೇ ಆ ಕ್ಷೇತ್ರದಲ್ಲಿ ಯಾರೇ ಶಾಸಕರಾದರೂ, ಯಾರೇ ಮಂತ್ರಿ ಆದರೂ ಆ ಕ್ಷೇತ್ರದ ಜನತೆಯ ಜೊತೆಗೆ ಅವಿನಾಭಾವ ಸಂಬಂಧ ಇದೆ. ನಾನು ಆ ಕ್ಷೇತ್ರದ ಪ್ರತಿ ಮನೆಯ ಅಣ್ಣ, ತಮ್ಮ, ಮಗ ಆಗಿದ್ದೇನೆ. ಹೀಗಾಗಿ ಆ ಕ್ಷೇತ್ರದ ಜೊತೆಗೆ ಯಾವಾಗಲೂ ಇರುತ್ತೇನೆ ಎಂದು ಹೇಳಿದರು