ಬೆಂಗಳೂರು: ನಂದಿನಿ ಹಾಲಿನ ದರವನ್ನು ಆಗಸ್ಟ್ 1 ರಿಂದ ಲೀಟರ್ಗೆ ಮೂರು ರೂಪಾಯಿಗಳಷ್ಟು ಹೆಚ್ಚಿಸಲು ಕರ್ನಾಟಕ ಸಚಿವ ಸಂಪುಟ ಗುರುವಾರ ರಾತ್ರಿ ನಿರ್ಧರಿಸಿದೆ. ಕರ್ನಾಟಕ ಹಾಲು ಒಕ್ಕೂಟದ ಉತ್ಪನ್ನಗಳ ಬ್ರಾಂಡ್ ಆಗಿರುವ ನಂದಿನಿ ಹಾಲಿನ ದರ ಹೆಚ್ಚಳದ ಬಗ್ಗೆ ಇತ್ತೀಚೆಗಷ್ಟೇ ಕೆಎಂಎಫ್ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸೇರಿದಂತೆ ಪ್ರಮುಖರು ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದಿದ್ದರು. ಇದೀಗ ದರ ಹೆಚ್ಚಳ ಪ್ರಸ್ತಾವನೆಗೆ ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ.
ಹಾಲು ಉತ್ಪಾದಕರ ಬೇಡಿಕೆಗಳನ್ನು ಪರಿಗಣಿಸಿ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಯ ನಂತರ ಸಚಿವ ಹೆಚ್ಕೆ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪರಿಷ್ಕೃತ ದರ ಲೆಕ್ಕಾಚಾರದ ಪ್ರಕಾರ, ರೈತರಿಗೆ ನೆರವಾಗುವ ಉದ್ದೇಶದಿಂದ ಲೀಟರ್ಗೆ 39 ರೂ. ಬೆಲೆಯ ಹಾಲು (ಟೋನ್ಡ್) ಆಗಸ್ಟ್ 1ರಿಂದ 42 ರೂ.ಗೆ ಮಾರಾಟವಾಗಲಿದೆ. ಉಳಿದಂತೆ ಲೀಟರ್ಗೆ 54 ರಿಂದ 56 ರೂ.ವರೆಗೆ ಮಾರಾಟವಾಗುತ್ತದೆ. ತಮಿಳುನಾಡಿನಲ್ಲಿ ಲೀಟರ್ ಹಾಲಿಗೆ 44 ರೂ. ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.