ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಕೋಲಾರ ಜಿಲ್ಲೆಯ ನಂಗಲಿ ಗ್ರಾಮದ ಬಳಿಯಿಂದ ಮುನಿರತ್ನ ಅವರನ್ನು ಕರೆತಂದು ಬಂಧನದ ಪ್ರಕ್ರಿಯೆ ಮುಗಿದ ನಂತರ ವೈದ್ಯಕೀಯ ತಪಾಸಣೆಗೊಳಪಡಿಸಿ ಬಳಿಕ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ್ದಾರೆ.
“ನೀವು ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಅವರಿಗೆ ನಿಂದಿಸಿ ಲಂಚ ಕೇಳಿದ್ದೀರಾ? ಬಿಬಿಎಂಪಿಯ ಮಾಜಿ ಸದಸ್ಯ ವೇಲು ನಾಯ್ಕರ್ ಅವರಿಗೆ ಏಕೆ ಜಾತಿನಿಂದನೆ ಮಾಡಿದ್ದೀರಿ? ಅವರಿಗೂ, ನಿಮಗೂ ಏನು ಸಂಬಂಧ? ಗುತ್ತಿಗೆಯಲ್ಲಿ ಅವರ ಪಾತ್ರವೇನು? ನೀವು ಈ ರೀತಿ ಪದಗಳನ್ನು ಬಳಸಿ ನಿಂದನೆ ಮಾಡಬಹುದೇ? ನೀವು ಜನಪ್ರತಿನಿಧಿಗಳು ಈ ರೀತಿ ಮಾತನಾಡುವುದು ಸರಿಯೇ?” ಎಂಬಿತ್ಯಾದಿ ಪ್ರಶ್ನೆಗಳನ್ನು ಎಸಿಪಿಯವರು ಕೇಳಿ ಮಾಹಿತಿಯನ್ನು ಪಡೆದುಕೊಂಡಿ ದ್ದಾರೆ ಎಂದು ತಿಳಿದುಬಂದಿದೆ.
ಮಧ್ಯರಾತ್ರಿ 12ರಿಂದ 1.30ರವರೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಎಸಿಪಿಯವರು ಮುನಿರತ್ನ ಅವರನ್ನು ವಿಚಾರಣೆಗೊಳಪಡಿಸಿದ್ದರೆಂದು ಗೊತ್ತಾಗಿದೆ.ಆ ಆಡಿಯೋದಲ್ಲಿ ಇರುವುದು ನನ್ನ ಧ್ವನಿಯಲ್ಲ. ನಾನು ಜನಪ್ರತಿನಿಧಿ. ಆ ರೀತಿ ಮಾತನಾಡಲಿಲ್ಲ. ನನ್ನ ವಿರುದ್ಧ ಪಿತೂರಿ ಹಾಗೂ ಷಡ್ಯಂತ್ರ ಮಾಡಿದ್ದಾರೆ ಎಂದು ಮುನಿರತ್ನ ತನಿಖಾಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.