ಬೆಂಗಳೂರು: ಬೆಂಗಳೂರಿನ ಮಕ್ಕಳಲ್ಲಿ ಕಳೆದ ಕೆಲವು ದಿನಗಳಿಂದ ವೈರಾಣು ಜ್ವರ ಹೆಚ್ಚಾಗಿದೆ. ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ಶೇ 30 ರಷ್ಟು ಮಕ್ಕಳಲ್ಲಿ ಜ್ವರದ ಪ್ರಕರಣ ಏರಿಕೆ ಕಂಡು ಬಂದಿದೆ. ಇದಕ್ಕೆಲ್ಲ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಹವಾಮಾನ ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಗಾಳಿ ಸಹಿತ ಮಳೆ, ಬಿಸಿಲು, ಚಳಿಯಿಂದಾಗಿ ಮಕ್ಕಳಲ್ಲಿ ಹೆಚ್ಚಾಗಿ ವೈರಾಣು ಜ್ವರ ಕಂಡು ಬರುತ್ತಿದೆ. ವೈರಾಣು ಜ್ವರದ ಜೊತೆ ILI ಪ್ರಕರಣಗಳ ಏರಿಕೆಯೂ ಕಂಡು ಬರುತ್ತಿದೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಪ್ರತಿನಿತ್ಯ 550 ರಿಂದ 600 ಹೊರ ರೋಗಿಗಳು ಚಿಕಿತ್ಸಗೆ ಬರುತ್ತಿದ್ದಾರೆ.
ಈ ಪೈಕಿ ಶೇ 50 ರಷ್ಟು ಮಕ್ಕಳಲ್ಲಿ ವೈರಾಣು ಜ್ವರ ಕಂಡು ಬರುತ್ತಿದೆ. ಜತೆಗೆ ಕೆಸಿ ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ್ ಆಸ್ಪತ್ರೆ ಸೇರಿದಂತೆ ಬಹುತೇಕ ಆಸ್ಪತ್ರೆಗಳಲ್ಲಿ ದಾಖಲಾಗುವ ಅರ್ದದಷ್ಟು ಹೊರ ರೋಗಿಗಳ ವಿಭಾಗದಲ್ಲಿಯೂ ವೈರಾಣು ಜ್ವರ ಕಂಡು ಬರುತ್ತಿದೆ.
ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿಯೇ ಹೆಚ್ಚಾಗಿ ಈ ಜ್ವರ ಕಂಡು ಬರುತ್ತಿದೆ. ಮನೆಯಲ್ಲಿ ಮಕ್ಕಳಿಂದ ಮನೆ ಮಂದಿಗೆಲ್ಲ ಈ ವೈರಾಣು ಸೋಂಕು ಹರಡುತ್ತಿದ್ದು ಎಚ್ಚರಿಕೆ ವಹಿಸುವಂತೆ ವೈದ್ಯರು ಸೂಚಸಿದ್ದಾರೆ. ಅದರಲ್ಲೂ ಚಿಣ್ಣರಲ್ಲಿ ಕಂಡು ಬರುತ್ತಿರುವ ಈ ಸೋಂಕಿನ ಬಗ್ಗೆ ಹೆಚ್ಚು ನಿಗಾವಹಿಸುವಂತೆ ಪೋಷಕರಿಗೆ ತಿಳಸಿದ್ದಾರೆ. ಇದರ ಜೊತೆಗೆ ILI ಕೇಸ್ ಏರಿಕೆ ಕೂಡಾ ರಾಜಧಾನಿಯಲ್ಲಿ ಕಂಡು ಬರ್ತಿದೆ ಜುಲೈನಲ್ಲಿ 72 ಇದ್ದ ಪ್ರಕರಣಗಳ ಸಂಖ್ಯೆ ಸೆಪ್ಟಂಬರ್ ವೇಳೆಗೆ 261 ಕ್ಕೆ ಏರಿಕೆ ಕಂಡಿದೆ ಹೀಗಾಗಿ ಪೋಷಕರು ನಿಗಾವಹಿಸಬೇಕಿದೆ. ಮಕ್ಕಳ ಆರೋಗ್ಯದಲ್ಲಿ ಬದಲಾಣವೆಯಾದರೂ ನಿರ್ಲಕ್ಷ್ಯವಹಿದಂತೆ ಸೂಚಿಸಿದ್ದಾರೆ.