ಬೆಂಗಳೂರು: ಕರ್ನಾಟಕದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ವಾಯು ಗುಣಮಟ್ಟ ಗಣನೀಯವಾಗಿ ಕುಸಿಯುತ್ತಿರುವುದು ಗ್ರೀನ್‌ಪೀಸ್ ಇಂಡಿಯಾ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ. ಪರಿಣಾಮವಾಗಿ, ಹಿತಕರವಾದ ಹವಾಮಾನ ಮತ್ತು ಮಾಲಿನ್ಯ ಮುಕ್ತ ಪರಿಸರದಿಂದಲೇ ಗುರುತಿಸಿಕೊಂಡಿರುವ ಕರ್ನಾಟಕಕ್ಕೆ ಈ ವಿಚಾರದಲ್ಲಿ ತುಸು ಹಿನ್ನಡೆಯಾದಂತಾಗಿದೆ.
ದಕ್ಷಿಣ ಭಾರತದ 10 ಪ್ರಮುಖ ನಗರಗಳಲ್ಲಿ ಸರಾಸರಿ ಪಿಎಂ2.5 ಮತ್ತು ಪಿಎಂ10 (ಇವು ಗಾಳಿಯಲ್ಲಿರುವ ದೂಳು ಮತ್ತು ಅಪಾಯಕಾರಿ ಕಣಗಳನ್ನು ನಿರ್ಧರಿಸುವ ಮಾಪಕಗಳಾಗಿವೆ) ಮಟ್ಟ ಹೆಚ್ಚುತ್ತಲೇ ಇದೆ. ಇದು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ ಗಾಳಿಯ ಗುಣಮಟ್ಟದ ಮಾರ್ಗಸೂಚಿಗಳನ್ನು ಮೀರಿದೆ. ಇದು ಆರೊಗ್ಯದ ವಿಚಾರದಲ್ಲಿ ಆತಂಕ ಸೃಷ್ಟಿಸಿದೆ ಎಂದು ಗ್ರೀನ್‌ಪೀಸ್ ಇಂಡಿಯಾದ ಇತ್ತೀಚಿನ ವರದಿ, ‘ಸ್ಪೇರ್ ದಿ ಏರ್-2’ನಲ್ಲಿ ಉಲ್ಲೇಖಿಸಲಾಗಿದೆ.
ಯಾವೆಲ್ಲ ನಗರಗಳಲ್ಲಿ ಹೆಚ್ಚಿದೆ ವಾಯುಮಾಲಿನ್ಯ?
ಹೈದರಾಬಾದ್, ಚೆನ್ನೈ, ವಿಶಾಖಪಟ್ಟಣಂ, ಕೊಚ್ಚಿ, ಮಂಗಳೂರು, ಅಮರಾವತಿ, ವಿಜಯವಾಡ, ಬೆಂಗಳೂರು, ಮೈಸೂರು ಮತ್ತು ಪುದುಚೇರಿಗಳ ವಾಯು ಗುಣಮಟ್ಟದ ಬಗ್ಗೆ ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಅಧ್ಯಯನ ವರದಿಯು, ದಕ್ಷಿಣದ ರಾಜ್ಯಗಳಲ್ಲಿ ಶುದ್ಧ ಗಾಳಿ ಇದೆ ಎಂಬ ವಾದವನ್ನು ಸುಳ್ಳಾಗಿಸಿದೆ. ದಕ್ಷಿಣದ ರಾಜ್ಯಗಳಲ್ಲಿನ ಒಂದೇ ಒಂದು ಪ್ರಮುಖ ನಗರವೂ ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷಿತ ಮತ್ತು ಆರೋಗ್ಯಕರ ಗಾಳಿಯ ಮಾನದಂಡಗಳನ್ನು ಪೂರೈಸುವುದಿಲ್ಲ ಎಂದು ಗ್ರೀನ್‌ಪೀಸ್ ಇಂಡಿಯಾದ ಪ್ರಚಾರ ವ್ಯವಸ್ಥಾಪಕ ಅವಿನಾಶ್ ಚಂಚಲ್ ಹೇಳಿದ್ದಾರೆ.