ಜಾಫ್ನಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ಕನ್ನಡ ಚಲನಚಿತ್ರ ನಿರ್ಮಾಪಕ ಗಿರೀಶ್ ಕಾಸರವಳ್ಳಿ ಅವರಿಗೆ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತಿದೆ. ಸೆಪ್ಟೆಂಬರ್ 9 ರ ಇಂದು ನಡೆಯುವ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಗಿರೀಶ್ ಕಾಸರವಳ್ಳಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಶಸ್ತಿಯ ಜೊತೆಗೆ ಗಿರೀಶ್ ಕಾಸರವಳ್ಳಿ ಅವರ ನಾಲ್ಕು ಚಿತ್ರಗಳ ಪ್ರದರ್ಶನವೂ ಇರಲಿದೆ. ಹಾಗೆಯೇ ಜಾಫ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಗಿರೀಶ್ ಕಾಸರವಳ್ಳಿ ಅವರ ಒಂದು ಮಾಸ್ಟರ್ ಕ್ಲಾಸ್ ಅನ್ನೂ ಆಯೋಜಿಸಲಾಗಿದೆ.
ಗೌಹಾಟಿಯ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದು, ಇದೀಗ ಶ್ರೀಲಂಕಾದ ಭಾರತೀಯ ಹೈ ಕಮಿಷನ್‌ನಲ್ಲಿ ವಿವೇಕಾನಂದ ಕಲ್ಚರ್ ಸೆಂಟರ್‌ನ ನಿರ್ದೇಶಕರಾಗಿರುವ ಡಾ. ಅಂಕುರನ್ ದತ್ತ ಅವರು ಆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
1977 ರಲ್ಲಿ ತೆರೆಕಂಡ ಗಿರೀಶ ಕಾಸರವಳ್ಳಿ ಅವರು ನಿರ್ದೇಶಿಸಿದ ರಾಷ್ಟ್ರಪ್ರಶಸ್ತಿ ವಿಜೇತ ‘ಘಟಶ್ರಾದ್ಧ’ ಸಿನಿಮಾ ವಿಶ್ವದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಅಗ್ರಸ್ಥಾನ ಪಡೆದ ವೆನಿಸ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ವೆನಿಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೂ ‘ಘಟಶ್ರಾದ್ಧ’ ಭಾಜನವಾಗಿತ್ತು.