ಬೆಂಗಳೂರು: ಇತ್ತೀಚೆಗೆ ಮಂಕಿಪಾಕ್ಸ್ ಸೋಂಕು ಜಾಗತಿಕವಾಗಿ ಭೀತಿಯನ್ನು ಹೆಚ್ಚಿಸುತ್ತಿದೆ. ನೆರೆಯ ಕೇರಳದಲ್ಲಿ ವ್ಯಕ್ತಿಯೊಬ್ಬರಲ್ಲಿ ಎಂಪಾಕ್ಸ್ ದೃಢಪಟ್ಟಿರುವ ಹಿನ್ನೆಲೆ ರಾಜ್ಯದಲ್ಲೂ ಕೆಟ್ಟೆಚ್ಚರ ವಹಿಸಲಾಗುತ್ತಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನರ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಥರ್ಮಲ್ ಸ್ಕ್ಯಾನರ್‌ನಲ್ಲಿ ಪ್ರಯಾಣಕರಲ್ಲಿ ಹೆಚ್ಚಿನ ತಾಪಮಾನ ಹಾಗೂ ಎಂಪಾಕ್ಸ್‌ಗೆ ಸಂಬಂಧಪಟ್ಟ ರೋಗಲಕ್ಷಣ ಕಂಡುಬಂದಲ್ಲಿ ಅವರನ್ನು ಪ್ರತ್ಯೇಕಿಸಿ, ಸರ್ಕಾರಿ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಆ ವ್ಯಕ್ತಿಯಲ್ಲಿ ಎಂಪಾಕ್ಸ್ ಸೋಂಕು ದೃಢಪಟ್ಟರೆ ಸೂಕ್ತ ವೈದ್ಯಕೀಯ ಆರೈಕೆಗಾಗಿ ಗೊತ್ತುಪಡಿಸಿದ ಆಸ್ಪತ್ರೆಗೆ ವರ್ಗಾಯಿಸಲು ಎಪಿಹೆಚ್‌ಒ ತಕ್ಷಣವೇ ವ್ಯವಸ್ಥೆ ಮಾಡುತ್ತದೆ.
ಕೆಐಎ ಆಪರೇಟರ್ ಆಗಿರುವ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ನ ವಕ್ತಾರರು, ಎಂಪಾಕ್ಸ್ ಏಕಾಏಕಿ ಏರಿಕೆಯ ಹಿನ್ನೆಲೆ ಎಲ್ಲಾ ಸಂಬಂಧಿತ ಆರೋಗ್ಯ ಮತ್ತು ಸುರಕ್ಷತಾ ಪ್ರೋಟೋಕಾಲ್ಗಳನ್ನು ಅನುಸರಿಸಲು ವಿಮಾನ ನಿಲ್ದಾಣವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಈ ಹಿಂದಿನ ಹೇಳಿಕೆಯಲ್ಲಿ, ನಾವು ಅಂತರಾಷ್ಟ್ರೀಯ ಪ್ರಯಾಣಿಕರ ಸ್ಕ್ರೀನಿಂಗ್ ಮತ್ತು ತಾಪಮಾನ ತಪಾಸಣೆ ನಡೆಸುತ್ತಿದ್ದೇವೆ. ಯಾರಾದರೂ ರೋಗಲಕ್ಷಣಗಳೊಂದಿಗೆ ಕಂಡುಬಂದರೆ, ನಾವು ಅವರನ್ನು 21 ದಿನಗಳ ಕ್ವಾರಂಟೈನ್‌ಗೆ ಕಳುಹಿಸುತ್ತೇವೆ ಎಂದು ಕೆಐಎಎಲ್ ಹೇಳಿತ್ತು.