ಬೆಂಗಳೂರು: ನಗರದಲ್ಲಿ ಪಾನಮತ್ತ ಹಾಗೂ ಅತಿವೇಗದ ವಾಹನ ಚಾಲನೆಗೆ ಬ್ರೇಕ್ ಹಾಕಲು ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಕಳೆದ ಒಂದು ವಾರದಲ್ಲಿ ಬರೋಬ್ಬರಿ 1 ಸಾವಿರಕ್ಕೂ ಅಧಿಕ ಪ್ರಕರಣಗಳನ್ನ ದಾಖಲಿಸಿ, 2.30 ಲಕ್ಷ ರೂ ದಂಡ ವಿಧಿಸಿದ್ದಾರೆ.
ಜನವರಿ 27ರಿಂದ ಫೆ.2ರವರೆಗೆ ನಗರದ 50 ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ವೇಳೆ 62,300 ವಾಹನಗಳನ್ನು ಪರಿಶೀಲಿಸಿ, ಆ ಪೈಕಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ 800 ವಾಹನಗಳ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅದೇ ರೀತಿ ಅತಿವೇಗದ ಚಾಲನೆ ಮಾಡಿದ ನಿಯಮ ಉಲ್ಲಂಘಿಸಿದ 228 ವಾಹನಗಳ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 2,30,000 ರೂ ದಂಡ ವಿಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಮದ್ಯಪಾನ ಮಾಡಿ ಮತ್ತು ಅತಿವೇಗದಲ್ಲಿ ವಾಹನ ಚಲಾಯಿಸುವ ಚಾಲಕರ ಹಾವಳಿ ತಡೆಗಟ್ಟಲು ಮತ್ತು ರಸ್ತೆ ಸುರಕ್ಷತೆಗಾಗಿ ವಿಶೇಷ ಕಾರ್ಯಾಚರಣೆಗಳನ್ನು ಮುಂದೆಯೂ ಹಮ್ಮಿಕೊಳ್ಳುವುದಾಗಿ ಬೆಂಗಳೂರು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.