Bengaluru 22°C

ವಿನೂತನ ಹಾಗೂ ವಿಶಿಷ್ಟ ಶೈಕ್ಷಣಿಕ ಸಂಸ್ಥೆಯಾಗಿ ಯುವಿಸಿಇ ಅಭಿವೃದ್ದಿ: ಸಚಿವ ಡಾ ಎಂ ಸಿ ಸುಧಾಕರ್‌

ದೇಶದ ಇತರೆ ಐಐಟಿ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗಿಂತಲೂ ಅತ್ಯಂತ ವಿನೂತನ ಹಾಗೂ ಆಕರ್ಷಕ ವಿನ್ಯಾಸದಲ್ಲಿ ಯುವಿಸಿಇ ಅಭಿವೃದ್ದಿಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಬೆಂಗಳೂರು: ದೇಶದ ಇತರೆ ಐಐಟಿ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗಿಂತಲೂ ಅತ್ಯಂತ ವಿನೂತನ ಹಾಗೂ ಆಕರ್ಷಕ ವಿನ್ಯಾಸದಲ್ಲಿ ಯುವಿಸಿಇ ಅಭಿವೃದ್ದಿಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈಗಾಗಲೇ ವಿನ್ಯಾಸ ರಚನೆಗೆ ಟೆಂಡರ್‌ ಆಹ್ವಾನಿಸಲಾಗಿದ್ದು, ವಿನೂತನ. ವಿಶಿಷ್ಟ ಹಾಗೂ ದೇಶಕ್ಕೆ ಮಾದರಿಯಾಗುವಂತಹ ಶೈಕ್ಷಣಿಕ ಸಂಸ್ಥೆಯಾಗಿ ಅಭಿವೃದ್ದಿಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾದ ಡಾ ಎಂ ಸಿ ಸುಧಾಕರ್‌ ತಿಳಿಸಿದರು.


ಯುನಿವರ್ಸಿಟಿ ಆಫ್‌ ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಇಂಜಿನೀಯರಿಂಗ್‌ ನ ಹಿರಿಯ ವಿದ್ಯಾರ್ಥಿಗಳ ಸಂಘ ಯುವಿಸಿಇ ಫೌಂಡೇಶನ್‌ ವತಿಯಿಂದ ನೀಡಲಾಗುವು ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು. ವಿಶ್ವದ ಇಂಜಿನೀಯರಿಂಗ್‌ ಕ್ಷೇತ್ರದಲ್ಲಿ ತಮ್ಮದೇ ಆದ ವಿಶೇಷ ಹೆಸರನ್ನು ಮೂಡಿಸಿರುವ ಸರ್‌ ಎಂ ವಿಶ್ವೇಶ್ವರಯ್ಯ ಅವರಿಂದ ಸ್ಥಾಪಿತವಾಗಿರುವ ಈ ಕಾಲೇಜನ್ನು ಐಐಟಿ ಯಂತೆ ಅಭಿವೃದ್ದಿಗೊಳಿಸಲು ನಮ್ಮ ಸರಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ.


ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್‌ ಅವರು ಈ ಬಾರಿಯ ಆಯವ್ಯಯದಲ್ಲಿ 500 ಕೋಟಿ ರೂಪಾಯಿಗಳ ಅನುದಾನ ನೀಡುವ ಘೋಷಣೆ ಮಾಡಿದ್ದಾರೆ. ಅಲ್ಲದೇ, ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂಪಾಯಿಗಳ ಅನುದಾನ ಕೂಡಾ ಬಿಡುಗಡೆ ಮಾಡಿದ್ದಾರೆ.


ಐಐಟಿ ಎಂದರೆ ಕೇವಲ ಘೋಷಣೆ ಅಷ್ಟೇ ಅಲ್ಲ ಅದಕ್ಕೆ ತಕ್ಕಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕೂಡಾ ಮುಖ್ಯ. ಈ ಕನಸನ್ನು ನನಸು ಮಾಡುವುದು ನನ್ನ ಗುರಿಯಾಗಿದೆ. ಈಗಾಗಲೇ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ 50 ಏಕರೆ ಜಾಗವನ್ನು ನಿಗದಿಪಡಿಸಲಾಗಿದ್ದು ಅದನ್ನ ಯುವಿಸಿಇ ಗೆ ಹಸ್ತಾಂತರಿಸುವ ಕ್ರಮ ಕೈಗೊಳ್ಳಲಾಗಿದೆ. ಐಐಟಿ ಕ್ಯಾಂಪಸ್‌ನ್ನ ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಆಸಕ್ತಿ ವ್ಯಪಡಿಸುವಿಕೆಯ ಟೆಂಡರ್‌ ಕರೆಯಲಾಗಿದೆ.


ಇದಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ನೂರಕ್ಕೂ ಹೆಚ್ಚು ವಿನ್ಯಾಸಕಾರರು ಪಾಲ್ಗೊಂಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಟೆಂಡರ್‌ ಕರೆಯಲು ಆಡಳಿತಾತ್ಮಕ ಒಪ್ಪಿಗೆ ನೀಡುವ ಸಂಧರ್ಭದಲ್ಲಿ ಸಿಎಂ, ಡಿಸಿಎಂ ಹಾಗೂ ಸಚಿವ ಸಂಪುಟದ ಸಚಿವರು ಬೆಂಬಲ ನೀಡಿದ್ದಾರೆ. ಅಲ್ಲದೇ, ಕೇವಲ ಒಂದು ವಿನ್ಯಾಸವಲ್ಲ, ಹಲವು ವಿನ್ಯಾಸಗಳ ಆಯ್ಕೆಗಳನ್ನು ತಯಾರಿಸುವಂತೆ ಸೂಚಿಸಿದ್ದು ಸಚಿವ ಸಂಪುಟದಲ್ಲೇ ವಿನ್ಯಾಸ ಅಂತಿಗೊಳಿಸುವುದಾಗಿ ತಿಳಿಸಿದ್ದಾರೆ. ಇಂತಹ ಉತ್ತಮ ಬೆಂಬಲ ದೊರೆತಿರುವುದು ಬಹಳ ಸಂತಸದ ವಿಷಯವಾಗಿದೆ ಎಂದರು.


ಈ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಅಭಿವೃದ್ದಿಗೆ ನೀಡುತ್ತಿರುವ ಕೊಡುಗೆ ಅಪಾರ. ಈಗಾಗಲೇ ಕಾಲೇಜಿನ ಹಲವಾರು ಅಭಿವೃದ್ದಿ ಕೆಲಸಗಳಿಗೆ ಹಣಕಾಸಿನ ಸಹಾಯ ನೀಡಿದ್ದಾರೆ. ಅಲ್ಲದೇ ಕಳೆದ 13 ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದಾರೆ. ಆರ್ಥಿಕವಾಗಿ ಚೈತನ್ಯ ತುಂಬುವ ಇಂತಹ ಕಾರ್ಯಗಳಿಂದ ಅನುಕೂಲ ಪಡೆದಿರುವ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರೈಸಿ ಉದ್ಯೋಗ ಪಡೆದ ನಂತರ ಇದನ್ನು ಮುಂದುವರೆಸಬೇಕು. ದೊರೆತಿರುವ ವಿದ್ಯಾರ್ಥಿ ವೇತನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಯುವಿಸಿಇ ಫೌಂಡೇಶನ್‌ನ ಅಧ್ಯಕ್ಷರಾದ ಬಿ.ವಿ ಜಗದೀಶ್‌ ಮಾತನಾಡಿ , ಭಾರತ ದೇಶ ತನ್ನ ಆರ್ಥಿಕತೆಯನ್ನು 10 ಟ್ರಿಲಿಯನ್‌ ಗೆ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಸಂಧರ್ಭದಲ್ಲಿ ಎದುರಾಗುವ ಹಲವಾರು ಸಮಸ್ಯೆಗಳ ಪರಿಹಾರದಲ್ಲಿ ಉದ್ಯಮಿಗಳು ಪ್ರಮುಖ ಪಾತ್ರವಹಿಸಲಿದ್ದಾರೆ. ವಿದ್ಯಾರ್ಥಿಗಳು ಎಐ ಕ್ಷೇತ್ರ ಪ್ರಾಮುಖ್ಯತೆಯನ್ನು ಅರಿತುಕೊಂಡು ಅದರಲ್ಲಿ ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.


ಈ ಬಾರಿ ಯುವಿಸಿಇ ಫೌಂಡೇಶನ್‌ ವತಿಯಿಂದ 160‌ ವಿದ್ಯಾರ್ಥಿಗಳಿಗೆ ಸುಮಾರು 45 ಲಕ್ಷ ರೂಪಾಯಿಗ ವಿದ್ಯಾರ್ಥಿ ವೇತನ ನೀಡಲಾಯಿತು. ಈ ಸಂಧರ್ಭದಲ್ಲಿ ಯುವಿಸಿಇ ಬೋರ್ಡ್‌ ಆಫ್‌ ಗೌವರ್ನರ್ಸ್‌ನ ಅಧ್ಯಕ್ಷರಾದ ಬಿ ಮುತ್ತುರಾಮನ್‌, ಯುವಿಸಿಇ ನಿರ್ದೇಶಕರಾದ ಪ್ರೊ. ಸುಭಾಶಿಸ್‌ ತ್ರಿಪಾಠಿ, ಯುವಿಸಿಇ ಫೌಂಡೇಶನ್‌ ಸ್ಕಾಲರ್‌ಶಿಪ್‌ ಸಮಿತಿಯ ಅಧ್ಯಕ್ಷರಾದ ರಾಮ ವಸಂತರಾಮ್‌, ಯುವಿಸಿಇ ಫೌಂಡೇಶನ್‌ ಅಧ್ಯಕ್ಷರಾದ ಮಾಧವ, ಕಾರ್ಯದರ್ಶಿಗಳಾದ ಡಾ. ಅಲೀಸ್‌ ಅಬ್ರಾಹಂ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


Nk Channel Final 21 09 2023