ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ತಮ್ಮ ಕುಟುಂಬದ ಜೊತೆ ಭಾನುವಾರ (ಇಂದು) ಮಧ್ಯರಾತ್ರಿಯಿಂದಲೇ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಡಿಕೆಶಿ ಅವರು 7 ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ.
ಡಿ.ಕೆ ಶಿವಕುಮಾರ್ ಅವರೊಂದಿಗೆ ಪತ್ನಿ ಉಷಾ, ಪುತ್ರಿಯರಾದ ಐಶ್ವರ್ಯ, ಆಭರಣ, ಪುತ್ರ ಆಕಾಶ್ ಅಳಿಯ ಅಮರ್ತ್ಯ ಸುಬ್ರಹ್ಮಣ್ಯ ಹೆಗ್ಡೆ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಪ್ರವಾಸದ ವೇಳೆ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರೋ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಭೇಟಿಗೆ ಡಿಸಿಎಂ ಕಚೇರಿ ಸಮಯ ಕೇಳಿದೆ.
ಇದುವರೆಗೂ ಭೇಟಿ ಬಗ್ಗೆ ಖಚಿತವಾಗಿಲ್ಲ. ಖಾಸಗಿ ಕಾರ್ಯಕ್ರಮಗಳ ನಡುವೆ ಭೇಟಿಗೆ ಅವಕಾಶ ಸಿಕ್ಕರೆ ಇಬ್ಬರನ್ನೂ ಭೇಟಿ ಮಾಡುವ ಸಾಧ್ಯತೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಮಧ್ಯೆ ಡಿ.ಕೆ ಶಿವಕುಮಾರ್ ಅವರಿಗೆ ಕಮಲಾ ಹ್ಯಾರಿಸ್ ಅವರಿಂದ ವಿಶೇಷ ಆಹ್ವಾನ ಬಂದಿದೆ ಎಂಬ ಮಾತುಗಳು ಕೇಳಿಬಂದಿವೆ.
ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಎಕ್ಸ್ ಖಾತೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ನನ್ನ ಮುಂಬರುವ ಭೇಟಿಗೆ ಸಂಬಂಧಿಸಿದಂತೆ, ಹಬ್ಬಿರುವ ವದಂತಿಯನ್ನು ಹೋಗಲಾಡಿಸಲು ನಾನು ಬಯಸುತ್ತೇನೆ. ನನ್ನ ಭೇಟಿಯು ಸಂಪೂರ್ಣವಾಗಿ ವೈಯಕ್ತಿಕ ಕಾರಣಗಳಿಗಾಗಿ ಆಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶಕ್ಕೆ ಸಂಬಂಧಿಸಿಲ್ಲ, ಜೊತೆಗೆ ರಾಜಕೀಯ ಆಹ್ವಾನದ ಕಾರಣದಿಂದಲೂ ಅಲ್ಲ. ಯಾವುದೇ ರೀತಿಯ ಊಹಾಪೋಹಗಳಿಗೆ ಒಳಗಾಗದಂತೆ ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದೇನೆ.