ದಾವಣಗೆರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಶೇ.40 ಸರ್ಕಾರವೆಂದು ಆರೋಪ ಮಾಡಿದ್ದು, ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಸುಳ್ಳು ಹೇಳುವ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ 9 ತಿಂಗಳಾದರೂ ಟೇಕಾಫ್ ಆಗಿಲ್ಲ. ಅಷ್ಟರಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ 40 ಪರ್ಸೆಂಟೇಜ್ ಸರ್ಕಾರವೆಂದು ಗುತ್ತಿಗೆದಾರರ ಸಂಘದ ಕೆಂಪಣ್ಣ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ಕೆಳಗಿಳಿಯಲಿ ಎಂದರು.
ನಮ್ಮ ಸರ್ಕಾರದ ವಿರುದ್ಧ 40 ಪರ್ಸೆಂಟೇಜ್ ಸರ್ಕಾರ, ಪೇ ಸಿಎಂ ಅಂತೆಲ್ಲಾ ಕಾಂಗ್ರೆಸ್ಸಿಗರು ಆರೋಪ ಮಾಡಿದ್ದರು. ಈಗ ಅದೇ ಕೆಂಪಣ್ಣ ಕಾಂಗ್ರೆಸ್ ಸರ್ಕಾರದ ವಿರುದ್ಧ 40 ಪರ್ಸೆಂಟೇಜ್ ಸರ್ಕಾರವೆಂದು, ಯಾವುದೇ ಬಿಲ್ ಕೂಡ ಬಿಡುಗಡೆಯಾಗಿಲ್ಲವೆಂಬ ಆರೋಪ ಮಾಡಿದ್ದಾರೆ.
ಬಿಜೆಪಿ ಸರ್ಕಾರವು ಕೆಲಸವನ್ನು ಮಾಡುತ್ತಿತ್ತು. ಈಗ ಏನು ಕೆಲಸಗಳೇ ಆಗುತ್ತಿಲ್ಲವೆಂದು ಸ್ವತಃ ಅಧಿಕಾರಸ್ಥ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಕಾಂಗ್ರೆಸ್ಸಿನ ಗ್ಯಾರಂಟಿಗಳೂ ವೈಫಲ್ಯ ಕಂಡಿವೆ. ರೈತರಿಗೆ ಬರ ಪರಿಹಾರ ನೀಡುವಲ್ಲೂ ಸಿದ್ದರಾಮಯ್ಯ ಸರ್ಕಾರ ವಿಫಲರಾಗಿದೆ ಎಂದು ಕುಟುಕಿದರು.