ಚಿತ್ರದುರ್ಗದ ರೇಣುಕಾ ಸ್ವಾಮಿ ನಟಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಸಂದೇಶ ಕಳಿಸಿದ್ದನು. ಈ ಕಾರಣಕ್ಕಾಗಿ ಆತನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಹೊಡೆಯಲಾಯಿತು. ಈ ವಿಚಾರವನ್ನು ಸ್ವತಃ ದರ್ಶನ್ ಒಪ್ಪಿಕೊಂಡಿದ್ದಾರೆ.
ಬೆಂಗಳೂರು ಪೊಲೀಸರು ವಿಚಾರಣೆ ಮಾಡಿದಾಗ ದರ್ಶನ್ ನೀಡಿದ ಸ್ವಇಚ್ಛಾ ಹೇಳಿಕೆಯಲ್ಲಿ ಈ ವಿಚಾರಗಳು ದಾಖಲಾಗಿವೆ. ನಾನು ಕೈಯಿಂದ ಬಲವಾಗಿ ಹೊಡೆದೆ, ಕಾಲಿನಿಂದ ತಲೆಭಾಗಕ್ಕೆ ಒದ್ದೆ. ಆಗ ಪವಿತ್ರಾ ಗೌಡನನ್ನು ಕರೆದು ಚಪ್ಪಲಿಯಿಂದ ಹೊಡೆಯುವಂತೆ ಹೇಳಿದೆ. ಆಮೇಲೆ ಪವಿತ್ರಾಳ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಆತನಿಗೆ ಸೂಚಿಸಿದೆ.
ಆನಂತರ ರೇಣುಕಾಸ್ವಾಮಿಯು ಪವಿತ್ರಾ ಗೌಡ ಕಾಲಿಗೆ ಬಿದ್ದ. ನಾನು ಆಕೆಯನ್ನು ಕಾರಿನ ಬಳಿ ಬಿಡುವಂತೆ ಪ್ರದೋಶ್ಗೆ ಹೇಳಿದೆ. ಪವಿತ್ರಾಳನ್ನ ಮನೆಗೆ ಡ್ರಾಪ್ ಮಾಡಿಸುವಂತೆ ವಿನಯ್ಗೆ ಹೇಳಿದೆ. ಅಷ್ಟರಲ್ಲಿ ನನ್ನ ಕಾರಿನ ಡ್ರೈವರ್ ಲಕ್ಷ್ಮಣ ಸಹ ಅಲ್ಲಿಗೆ ಬಂದಿದ್ದು, ಆತ ಕೂಡ ರೇಣುಕಾಸ್ವಾಮಿಗೆ ಕೈಯಿಂದ ಕತ್ತು, ಬೆನ್ನಿಗೆ ಹೊಡೆದಿದ್ದ.
ನಂದೀಶ್ ಆತನನ್ನು ಎತ್ತಿ ಜೋರಾಗಿ ನನ್ನ ಮುಂದೆ ಕುಕ್ಕುತ್ತಾನೆ. ಯಾರಿಗೆ ಕೆಟ್ಟ ಮೆಸೇಜ್ ಕಳುಹಿಸಿದ್ದಾನೆಂದು ಪವನ್ ಕೇಳಿದ. ಪವನ್ ಆತನ ಮೊಬೈಲ್ ತೆಗೆದು ಕೆಲವರಿಗೆ ಕಳುಹಿಸಿದ್ದ ಮೆಸೇಜ್ ಓದಿದ. ಆತನ ಮೊಬೈಲ್ನಲ್ಲಿದ್ದ ಫೋಟೋಗಳನ್ನು ಎಲ್ಲರಿಗೂ ತೋರಿಸಿದನು. ಅನೇಕ ನಟಿಯರಿಗೂ ಫೋಟೋ ಕಳಿಸಿ ಮೆಸೇಜ್ ಮಾಡಿದ್ದನ್ನ ತೋರಿಸಿದ.
ಆಗ ನಾನು ರೇಣುಕಾಸ್ವಾಮಿಗೆ ಬೈದು ಕಾಲಿನಿಂದ ಒಂದೆರಡು ಬಾರಿ ಒದ್ದೆ. ಇದಾದ ನಂತರ ನಾನು, ವಿನಯ್ ಸ್ಥಳದಿಂದ ಹೊರಟು ಹೋದೆವು. ನಾನು ಹೋಗ್ತಿದ್ದಾಗ ಜಯಣ್ಣ ಸಿಕ್ಕಿದರು. ಅವರನ್ನ ಮಾತನಾಡಿಸಿ ತೆರಳಿದೆ. ಅಲ್ಲಿಂದ ನೇರವಾಗಿ ಐಡಿಯಲ್ ಹೋಮ್ಸ್‌ನ ನನ್ನ ಮನೆಗೆ ಹೋದೆವು. ಸುಮಾರು 7:30ರ ವೇಳೆ ಪ್ರದೋಶ್ ವಾಪಸ್ ಮನೆಯ ಹತ್ತಿರ ಬಂದಿದ್ದ. ಪ್ರದೋಶ್ ಬಂದು ರೇಣುಕಾಸ್ವಾಮಿ ಸತ್ತಿರುವ ವಿಚಾರವನ್ನು ತಿಳಿಸಿದ. ಆಗ ನಾನೇ ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಹೋದೆ.
ನಂತರ ನಾಗರಾಜ್, ಲಕ್ಷ್ಮಣ ಸಹ ರೇಣುಕಾಸ್ವಾಮಿ ಸತ್ತ ಬಗ್ಗೆ ತಿಳಿಸಿದರು. ಪ್ರದೋಶ್ ಹ್ಯಾಂಡಲ್ ಮಾಡುತ್ತೇನೆಂದು ಹೇಳಿ 30 ಲಕ್ಷ ರೂ. ಕೇಳಿದ. ನಾನು ಮನೆಯಲಿಟ್ಟಿದ್ದ 30 ಲಕ್ಷ ರೂ. ಹಣವನ್ನು ಪ್ರದೋಶ್ಗೆ ಕೊಟ್ಟೆ. ಆಗ ವಿನಯ್ ಘಟನೆಯ ವಿಚಾರಕ್ಕೆ ಸಂಬಂಧಿಸಿದಂತೆ 10 ಲಕ್ಷ ರೂಪಾಯಿ ಕೇಳಿದ. ವಿನಯ್ಗೂ ನಾನು ಹಣವನ್ನು ಕೊಟ್ಟಿದ್ದೇನೆ ಎಂದು ದರ್ಶನ್ ಹೇಳಿಕೆ ನೀಡಿರುವುದು ತಿಳಿದುಬಂದಿದೆ.