Bengaluru 23°C
Ad

ಅಂಗನವಾಡಿ ಶಿಕ್ಷಕರ ಹುದ್ದೆಗೆ ಉರ್ದು ಕಡ್ಡಾಯ: ಸರ್ಕಾರದ ನಡೆಗೆ ವಿರೋಧ

Gvt

ಬೆಂಗಳೂರು: ಕರ್ನಾಟಕ ಸರ್ಕಾರವು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳ ಶಿಕ್ಷಕರ ಹುದ್ದೆಗೆ ಉರ್ದು ಭಾಷೆ ಕಡ್ಡಾಯ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಸರ್ಕಾರದ ನಡೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉರ್ದು ಭಾಷೆ ಕಡ್ಡಾಯಗೊಳಿಸಿರುವ ನಿರ್ಧಾರದ ಬಗ್ಗೆ ವಿರೋಧ ಪಕ್ಷ ಬಿಜೆಪಿ ಟೀಕಿಸಿದ್ದು, ಇದು ಕಾಂಗ್ರೆಸ್ ಸರ್ಕಾರದ “ಮುಸ್ಲಿಂ ತುಷ್ಟೀಕರಣ” ಎಂದು ಆರೋಪಿಸಿದೆ. ಕನ್ನಡ ಸಂಘಟನೆಗಳು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿವೆ.

ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇತ್ತೀಚಿನ ಅಧಿಸೂಚನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅಂಗನವಾಡಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಕೋರಿತ್ತು. ಆ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಉರ್ದು ಕಡ್ಡಾಯವಾಗಿ ತಿಳಿದಿರಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಇದು ಬಾರೀ ವಿವಾದಕ್ಕೀಡಾಗಿದೆ. ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ಕನ್ನಡಿಗರ ಮೇಲೆ ಉದ್ದೇಶಪೂರ್ವಕ ಉರ್ದು ಹೇರಿಕೆಯ ರಾಜ್ಯ ಸರ್ಕಾರದ ಕ್ರಮವು, ಟಿಪ್ಪು ಮತ್ತು ಹೈದರಾಲಿ ಮಾದರಿಯ ಕನ್ನಡ ದಮನನೀತಿಯ ಮುಂದುವರಿದ ಭಾಗವಾಗಿದೆ. ಟಿಪ್ಪುವನ್ನು ಪರಮ ಆದರ್ಶವನ್ನಾಗಿ ಅಂಗೀಕರಿಸಿರುವ, ಕಳೆದ 1 ವರ್ಷದಿಂದ ಒಂದು ಸಮುದಾಯದ ಅತಿಯಾದ ತುಷ್ಟೀಕರಣ ನೀತಿಯನ್ನು ಆಡಳಿತದ ಪರಮ ಧ್ಯೇಯವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರಗಳು ಕನ್ನಡದ ಅಸ್ಮಿತೆಗೆ, ಕನ್ನಡಿಗರಿಗೆ ಮಾಡುತ್ತಿರುವ ಅತೀ ದೊಡ್ಡ ಅಪಮಾನ ಎಂದು ಕಿಡಿಕಾರಿದ್ದಾರೆ. ಅಂಗನವಾಡಿ ಹುದ್ದೆಗಳಿಗೆ ಕನ್ನಡದ ಬದಲು, ಉರ್ದು ಹೇರಿಕೆಯನ್ನು ಕಡ್ಡಾಯಗೊಳಿಸುವ ಮೂಲಕ ಕನ್ನಡಕ್ಕೆ ಅಪಮಾನ ಮಾಡುವ ಕಾರ್ಯಕ್ಕೆ ‘ಕೈ’ ಹಾಕಿರುವುದು ಅಸಹ್ಯದ ಪರಮಾವಧಿ. ರಾಜಕೀಯ, ತುಷ್ಟೀಕರಣದ ಕಾರಣಗಳಿಗಾಗಿ ಕನ್ನಡದ ಸಾರ್ವಭೌಮತ್ವಕ್ಕೆ, ಅಸ್ಮಿತೆಗೆ ಉದ್ದೇಶಪೂರ್ವಕ ಅಪಮಾನವನ್ನು ಕನ್ನಡಿಗರು ಸಹಿಸಲು ಸಾಧ್ಯವಿಲ್ಲ. ಇಂತಹ ಪ್ರಮಾದಗಳಿಗೆ ರಾಜ್ಯ ಸರ್ಕಾರ ಅವಕಾಶ ನೀಡದೇ, ಸಂಬಂಧಪಟ್ಟವರನ್ನು ಕೂಡಲೇ ಅಮಾನತ್ತುಗೊಳಿಸಿ, ಕನ್ನಡದ ಅಸ್ಮಿತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂಗೆ ಆಗ್ರಹಿಸಿದ್ದಾರೆ.

Ad
Ad
Nk Channel Final 21 09 2023