ಚಿತ್ರದುರ್ಗ ಕೊಲೆ ಪ್ರಕರಣ: 24 ಗಂಟೆಯೊಳಗೆ ಆರೋಪಿ ಬಂಧನ

ಸಿರಿಗೆರೆ : ಸಮೀಪದ ಕೋಣನೂರು ಗ್ರಾಮದಲ್ಲಿ ಡಿ.25ರಂದು ಪತ್ನಿಯನ್ನು ಕೊಲೆ ಮಾಡಿ ಮಂಚದ ಕೆಳಗೆ ಹೂತಿಟ್ಟಿದ್ದ ಪ್ರಕರಣ ಸಂಬಂಧ ಪತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕೊಣನೂರು ಗ್ರಾಮದ ಆರ್. ನಾರಪ್ಪ (40) ಬಂಧಿತ. ಈತ ತನ್ನ ಪತ್ನಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಬೆಣ್ಣೆಹಳ್ಳಿ ಗ್ರಾಮದ ಸುಮಾ (26) ಅವರನ್ನು ಕೊಲೆ ಮಾಡಿದ್ದ. ಶವ ಪತ್ತೆಯಾದ 24 ಗಂಟೆಯೊಳಗೆ ಮಿಂಚಿನ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋ‍‍ಪಿಯನ್ನು ಬಂಧಿಸಿದ್ದಾರೆ. ಚಿತ್ರದುರ್ಗದ ಡಿವೈಎಸ್ಪಿ ತಂಡ ಆರೋಪಿಯನ್ನು ಮಹಜರು ಮಾಡಲು ಕೋಣನೂರು ಗ್ರಾಮಕ್ಕೆ ಕರೆತಂದಿತು. ಕೊಲೆ ಮಾಡಿದ ಸಂದರ್ಭದಲ್ಲಿ ಬಳಸಿದ ಪರಿಕರಗಳ ಮಾಹಿತಿ ಪಡೆದು ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಕೋಣನೂರು ಗ್ರಾಮದ ಜನರಲ್ಲಿ ಭಯದ ವಾತಾವರಣ ಮೂಡಿಸಿತ್ತು. ಆರೋಪಿಯನ್ನು ಪೊಲೀಸರು ಗ್ರಾಮಕ್ಕೆ ಕರೆತಂದಾಗ ಗ್ರಾಮಸ್ಥರು ಆರೋಪಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮರಣದಂಡನೆ ಜಾರಿಯಾಗಬೇಕು ಎಂದು ಮಹಿಳೆಯರು ಶಪಿಸುತ್ತಿದ್ದ ದೃಶ್ಯ ಕಂಡುಬಂದಿತು. 24 ಗಂಟೆಯೊಳಗೆ ಬಂಧಿಸಿದ ಪೊಲೀಸರಿಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ಬಿ. ನಂದಗಾವಿ ಅವರು ಆರೋಪಿ ಪತ್ತೆಗೆ ಎರಡು ತಂಡಗಳನ್ನು ರಚಿಸಿದ್ದರು.

ಡಿವೈಎಸ್ಪಿ ಪಾಂಡುರಂಗ, ಭರಮಸಾಗರ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಎಸ್. ಮಧು, ಸಬ್ ಇನ್‌ಸ್ಪೆಕ್ಟರ್ ಟಿ.ರಾಜು, ಡಿವೈಎಸ್ಪಿ ಕಚೇರಿಯ ಎಎಸ್‍ಐ ಜಾಕಿರ್, ಭರಮಸಾಗರ ಕ್ರೈಂ ಬ್ರ್ಯಾಂಚ್‌ನ ಹೆಡ್ ಕಾನ್‌ಸ್ಟೆಬಲ್‌ ಕೇಶವ್, ಇದಾಯತ್, ರಫಿ, ಮಂಜುಳಾ, ಎಂ.ಬಿ. ರವಿ, ಸಿರಿಗೆರೆಯ ಉಪಠಾಣೆಯ ಹೆಡ್‌ ಕಾನ್‌ಸ್ಟೆಬಲ್ ಸಿ.ಬಿ. ಮಲ್ಲಿಕಾರ್ಜುನ್, ಎಸ್‍.ವೈ.ಮಂಜಣ್ಣ, ಎಂ.ಡಿ. ಬಸವರಾಜು, ಎನ್‍. ಜಗದೀಶ್‍ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕೊಲೆ ಮಾಡಿ ನಾಪತ್ತೆ ದೂರು ನಾಟಕ: ಆರೋಪಿ ಆರ್. ನಾರಪ್ಪಗೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಬೆಣ್ಣೆಹಳ್ಳಿ ಗ್ರಾಮದ ಸುಮಾ (26) ಅವರೊಂದಿಗೆ 6 ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ ನಾರದಮುನಿ ಎಂಬ 5 ವರ್ಷದ ಪುತ್ರ ಇದ್ದಾನೆ.

ನಾರಪ್ಪ ಡಿ.25ರ ರಾತ್ರಿ ಪತ್ನಿಯನ್ನು ಮನೆಯಲ್ಲಿಯೇ ಕೊಲೆ ಮಾಡಿ, ಮರುದಿನ ಬೆಣ್ಣೆಹಳ್ಳಿಯ ತನ್ನ ಮಾವನ ಮನೆಗೆ ಬಂದು ಪುತ್ರ ನಾರದಮುನಿಯನ್ನು ಬಿಟ್ಟು ಹೋಗಿದ್ದ. ಎರಡು ದಿನಗಳ ಬಳಿಕ ನಾರಪ್ಪ ಪುತ್ರನನ್ನು ಬೆಣ್ಣೆಹಳ್ಳಿಯಿಂದ ಕೋಣನೂರಿಗೆ ವಾಪಸ್ ಕರೆದುಕೊಂಡು ಬಂದಿದ್ದ. ಡಿ.28ರಂದು ರಾತ್ರಿ ಆರೋಪಿ ನಾರಪ್ಪ ತನ್ನ ಮಾವ ಕರಿಯಪ್ಪನಿಗೆ ಮೊಬೈಲ್ ಕರೆ ಮಾಡಿ, ‘ನಿಮ್ಮ ಮಗಳು ಮನೆಯಿಂದ ಹೋಗಿದ್ದಾಳೆ. ವಾಪಸ್ ಬಂದಿಲ್ಲ. ನಾನು ಹುಡುಕುತ್ತಿದ್ದೇನೆ. ಎಲ್ಲಿಯೂ ಸಿಗುತ್ತಿಲ್ಲ’ ಎಂದು ಹೇಳಿದ್ದ. ಡಿ.29ರಂದು ಕೋಣನೂರಿಗೆ ಬಂದ ಮಾವನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಭರಮಸಾಗರ ಠಾಣೆಯಲ್ಲಿ ದೂರು ನೀಡಿದ್ದ.

ಸುಳಿವು ನೀಡಿದ ಕಡಪ ಕಲ್ಲು: ಒಂದು ವಾರವಾದರೂ ಮಗಳ ಬಗ್ಗೆ ಸುಳಿವು ಸಿಗದ ಸುಮಾಳ ತಂದೆ ಕರಿಯಪ್ಪ, ಕಾಣೆಯಾದ ದಿನವೇ ಅಳಿಯ ವಿಷಯ ತಿಳಿಸದೆ ಇರುವುದರಿಂದ ಅನುಮಾನಗೊಂಡು ಜ.6ರಂದು ಅಳಿಯನಿಗೆ ಫೋನ್ ಮಾಡಿದಾಗ ಆತನ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಇದರಿಂದ ಗಾಬರಿಗೊಂಡ ಕರಿಯಪ್ಪ ಕೋಣನೂರಿನ ಅಳಿಯನ ಮನೆಗೆ ಬಂದಾಗ ಆತ ನಾಪತ್ತೆಯಾಗಿದ್ದ. ಮನೆಯ ಬಾಗಿಲು ತೆಗೆದಾಗ ಮಂಚದ ಬಳಿ ಕೆಟ್ಟ ವಾಸನೆ ಬರುತ್ತಿತ್ತು. ಕಬ್ಬಿಣದ ಮಂಚವನ್ನು ಸರಿಸಿದಾಗ ಮೂಲೆಯಲ್ಲಿ ಕಡಪದ ಕಲ್ಲು ಹೊರ ಬಂದಿತ್ತು. ಸಿಮೆಂಟ್ ಕಾಂಕ್ರೀಟ್ ಗುಡ್ಡೆ ಹಾಕಿರುವುದು ಕಂಡುಬಂತು. ಆಗ ಅಳಿಯನ ಮೇಲೆ ಅನುಮಾನ ಬಂದ ಕರಿಯಪ್ಪ ತನ್ನ ಸಂಬಂಧಿಕರಿಗೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ವರದಕ್ಷಿಣೆ ಕಿರುಕುಳ, ಮದ್ಯವ್ಯಸನಿ: ‘ಜೂಜುಕೋರ, ಮದ್ಯವ್ಯಸನಿಯಾದ ಆರೋಪಿ, ನಿಮ್ಮಪ್ಪ ಮದುವೆ ಸಮಯದಲ್ಲಿ ವರದಕ್ಷಿಣೆ ಕೊಟ್ಟಿಲ್ಲ. ನೀನು ನಿಮ್ಮ ಅಪ್ಪನ ಹತ್ತಿರ ಹಣ ಬಂಗಾರ ತೆಗೆದುಕೊಂಡು ಬಾ’ ಎಂದು ಪೀಡಿಸುತ್ತಿದ್ದ ವಿಷಯವನ್ನು ಕರಿಯಪ್ಪನ ಮಗನ ಬಳಿ ಸುಮಾ ಹೇಳಿದ್ದರು. ‘ಪ್ರತಿ ದಿನ ಮದ್ಯಪಾನ ಮಾಡಿ ಪತ್ನಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ವಿಷಯ ಅಕ್ಕಪಕ್ಕದವರಿಂದ ತಿಳಿಯಿತು’ ಎಂದು ಕರಿಯಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಸುಳಿವು ಕೊಟ್ಟ 5 ವರ್ಷದ ಪುತ್ರ
ಆರೋಪಿ ನಾರಪ್ಪ ಪತ್ನಿಯನ್ನು ಕೊಲೆ ಮಾಡಿ ಯಾರಿಗೂ ಗೊತ್ತಾಗದಂತೆ ಶವವನ್ನು ಮಂಚದ ಕೆಳಗೆ ಹೂತಿಟ್ಟ. ಮರುದಿನ ತನ್ನ 5 ವರ್ಷದ ಮಗ ನಾರದಮುನಿಯನ್ನು ಬೆಣ್ಣೆಹಳ್ಳಿಗೆ ಬಿಟ್ಟು ಹೋಗಿದ್ದ. ಆ ವೇಳೆ ಈತನ ತಾತ ಕರಿಯಪ್ಪ ಮೊಮ್ಮಗನನ್ನು ಪ್ರಶ್ನಿಸಿದಾಗ ‘ಅಪ್ಪ ಮನೆಯ ಒಳಗಡೆ ಸಿಮೆಂಟ್‍ ಕೆಲಸ ಮಾಡುತ್ತಿತ್ತು’ ಎಂದು ಹೇಳಿದ್ದು, ಇದರಿಂದ ಅನುಮಾನಗೊಂಡು ಕರಿಯಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Gayathri SG

Recent Posts

ಪ್ರವಾಹಕ್ಕೆ ತತ್ತರಿಸಿ ಹೋದ ಅಫ್ಗಾನಿಸ್ತಾನ : 200ಕ್ಕೂ ಹೆಚ್ಚು ಜನ ಬಲಿ

ಅಫ್ಘಾನಿಸ್ತಾನದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಈ ಪ್ರವಾಹದಿಂದಾಗಿ ಸುಮಾರು 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಶನಿವಾರ…

6 mins ago

ಫ್ಲೈಯಿಂಗ್ ಎಲೆಕ್ಟ್ರಿಕ್ ಟ್ಯಾಕ್ಸಿ ನಿರ್ಮಿಸಲು ಮುಂದಾದ ಮದ್ರಾಸ್ ಐಐಟಿ-ಶ್ಲಾಘಿಸಿದ ಆನಂದ್ ಮಹೀಂದ್ರಾ

ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸುತ್ತಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‍ನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು…

18 mins ago

ಜಮ್ಮು –ಕಾಶ್ಮೀರ : ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್)…

28 mins ago

ನೂಕುನುಗ್ಗಲಿನಲ್ಲೂ ಪಾದಯಾತ್ರೆ ಹೊರಟ ಭಕ್ತರು : ವಿಡಿಯೋ ವೈರಲ್‌

ಯಮುನೋತ್ರಿ, ಗಂಗೋತ್ರಿ, ಕೇದರ್‌ನಾಥ್‌ ಮತ್ತು ಬದರಿನಾಥ್‌ ಪವಿತ್ರ ಚಾರ್‌ ಧಾಮ್‌ ಯಾತ್ರೆಯ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಭಕ್ತರು ಜಮಾಯಿಸಿದ ಪರಿಣಾಮ…

47 mins ago

ಕೆಂಪು ಲಿಪ್​ ಸ್ಟಿಕ್ ಬಳಕೆ ಮೇಲೆ ನಿಷೇಧ ವಿಧಿಸಿದ ಉತ್ತರ ಕೊರಿಯಾ: ಹಚ್ಚಿದರೆ ಕಠಿಣ ಶಿಕ್ಷೆ!

ಮಹಿಳೆಯರು ತುಟಿಗೆ ಹಚ್ಚುವ ಕೆಂಪು ಲಿಪ್​  ಸ್ಟಿಕ್ ಬಳಕೆಯ ಮೇಲೆ ಉತ್ತರ ಕೊರಿಯಾದಲ್ಲಿ ಕಟ್ಟುನಿಟ್ಟಾದ ನಿಷೇಧ ವಿಧಿಸಿದೆ.

47 mins ago

ಬಸವೇಶ್ವರ ಜಾತ್ರೆ: ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಜಿಲ್ಲೆಯ ಸೊನ್ನ ಗ್ರಾಮದ ಶಿವುಕುಮಾರ ಮಾಸ್ತಾರ ದಂಪತಿಗಳ ಸಹಾಯಾರ್ಥದೊಂದಿಗೆ ಗ್ರಾಮದ ಸುಮಾರು 200 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ವಿಶ್ವರಾಧ್ಯ…

1 hour ago