ಬೆಂಗಳೂರು: ಮಲ್ಲೇಶ್ವರಂ ಬಿಬಿಎಂಪಿ ಮೈದಾನದ ಗೇಟ್ ಬಿದ್ದು ಮಗು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದ್ದಾರೆ.
ಮಲ್ಲೇಶ್ವರಂ ಬಿಬಿಎಂಪಿ ಆಟದ ಮೈದಾನದಲ್ಲಿ ಗೇಟ್ ಬಿದ್ದು 11 ವರ್ಷದ ಬಾಲಕ ನಿರಂಜನ್ ಸಾವಿಗೀಡಾಗಿದ್ದು, ಈ ಬಗ್ಗೆ ಅಗತ್ಯ ತನಿಖೆ ನಡೆಸಲು ಬಿಬಿಎಂಪಿ ಕಮಿಷನರ್‌ಗೆ ಸೂಚನೆ ನೀಡಿದರು ಮೈದಾನಕ್ಕೆ 4 ವರ್ಷದ ಹಿಂದೆ ಗೇಟ್ ಅಳವಡಿಸಲಾಗಿದೆ. ಸಂಬಂಧಪಟ್ಟವರಿಂದ ವರದಿ ತರಿಸಿಕೊಳುತ್ತೇವೆ.
ಕಳಪೆ ಮಾಡಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಈ ಕುರಿತು ಯಾರಿಂದಲೂ ದೂರು ಬಂದಿರಲಿಲ್ಲ. ಕಾರ್ಯಕರ್ತರ ಗಮನಕ್ಕೂ ಬಂದಿಲ್ಲ. ಯಾರಿಂದ ಲೋಪ ಆಗಿದೆ ಎಂಬ ಬಗ್ಗೆ ಪರಿಶೀಲಿಸುತ್ತೇವೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ ಅವರಿಗೆ ಸೂಚನೆ ನೀಡಲಾಗಿದೆ ಎಂದರು.
ಸಚಿವ ದಿನೇಶ್ ಗುಂಡುರಾವ್ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಸೂಚಿಸಿ, ಕುಟುಂಬಕ್ಕೆ ಬಿಬಿಎಂಪಿಯಿಂದ 5 ಲಕ್ಷ ರೂ. ಹಾಗೂ ಗಾಂಧಿ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ 5 ಲಕ್ಷ ರೂ. ಪರಿಹಾರ ಘೋಷಿಸಿದರು. ಅಲ್ಲದೇ ಬಾಲಕನ ಸಹೋದರಿಯ ಸಂಪೂರ್ಣ ವಿದ್ಯಾಭ್ಯಾಸದ ಹೊಣೆಯನ್ನು ಆರ್.ಗುಂಡೂರಾವ್ ಫೌಂಡೇಶನ್ ವಹಿಸಿಕೊಳ್ಳಲಿದೆ ಎಂದು ತಿಳಿಸಿದರು.