ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಅಕ್ಟೋಬರ್ 5ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಇದರೊಂದಿಗೆ ಮುನಿರತ್ನ ನಾಯ್ಡು ಮತ್ತೆ ಜೈಲು ಪಾಲಾಗಿದ್ದಾರೆ.
ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಮುನಿರತ್ನ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಅವರನ್ನ ಬಂಧಿಸಲಾಗಿತ್ತು. ಇಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ವಿಚಾರಣೆ ವೇಳೆ ನ್ಯಾಯಾಧೀಶರ ಬಳಿ ಮುನಿರತ್ನ ಅಳಲು ತೋಡಿಕೊಂಡರು. ನನ್ನನ್ನು ಜೈಲಲ್ಲಿ ಇರಿಸಲು ವ್ಯವಸ್ಥಿತವಾದ ಸಂಚು ಹೂಡಲಾಗಿದೆ. ಲೋಕಸಭಾ ಚುನಾವಣೆ ಬಳಿಕ ಇದೆಲ್ಲ ಶುರುವಾಗಿದೆ. ಐದು ವರ್ಷಗಳ ಬಳಿಕ ಅತ್ಯಾಚಾರ ದೂರು ಕೊಡಿಸಿದ್ದಾರೆ. ಆಕೆ ಮೊದಲೇ ಕೊಡಬಹುದಿತ್ತಲ್ಲವೇ? ನನ್ನನ್ನು ಪೂರ್ತಿ ಐದು ವರ್ಷ ಜೈಲಲ್ಲಿ ಇಡಲು ಪ್ಲಾನ್ ಮಾಡಿಸಿದ್ದಾರೆ. ನಾನು ಜನಪ್ರತಿನಿಧಿಯಾದವನು, ನನಗೆ ಜನರ ಬಳಿ ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಿದೆ. ನಾನು ಈ ನ್ಯಾಯಾಲಯದಲ್ಲೆ ಬೇಕಾದರೆ ರಾಜೀನಾಮೆ ಕೊಡುತ್ತೇನೆ. ಆದರೆ ಈ ತರ ಹಿಂಸೆ ತಡೆದುಕೊಳ್ಳಲು ಆಗಲ್ಲ ಎಂದು ಮುನಿರತ್ನ ಕಣ್ಣೀರಾಕಿದ್ದಾರೆ.. ಇದಕ್ಕೆ ಪ್ರತಿಕ್ರಿಯಿಸಿದ ಜಡ್ಜ್, ನೀವು ಎಲ್ಲಿ ಕೊಡಬೇಕೋ ಅಲ್ಲಿಯೇ ರಾಜೀನಾಮೆ ಕೊಡಿ ಎಂದರು.