ಕನಕಪುರ: ತಾಲ್ಲೂಕಿನ ಕಾಡಳ್ಳಿ, ಅರೆಕಟ್ಟೆದೊಡ್ಡಿ, ಸಾತನೂರು ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶರಣ್ಯಗೌಡ (25) ಅಪಘಾತದಲ್ಲಿ ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಹಲಗೂರು ಹೋಬಳಿ ಬಳೆಹೊನ್ನಿಗ ಗ್ರಾಮದ ಇವರು, ಒಂದು ವರ್ಷದಿಂದ ಕನಕಪುರ ತಾಲ್ಲೂಕು ಪಂಚಾಯಿತಿಯಲ್ಲಿ ನರೇಗಾ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಶನಿವಾರ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಹಲಗೂರಿಗೆ ಹೋಗುತ್ತಿದ್ದಾಗ ಬಸಾಪುರ ಗೇಟ್ ಬಳಿ ಬೈಪಾಸ್ ಜಂಕ್ಷನ್‌ನಲ್ಲಿ ಮತ್ತೊಂದು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆಬ್ರವರಿ 16ಕ್ಕೆ ಅವರ ವಿವಾಹ ನಿಶ್ಚಯವಾಗಿತ್ತು.