News Karnataka Kannada
Monday, April 29 2024
ಬೆಂಗಳೂರು

ಬೆಂಗಳೂರು: ಮುಸ್ಲಿಮ್ ಹೆಸರು ಸೇರಿಸಿ ನಡೆಸುತ್ತಿರುವ ಅಪ ಪ್ರಚಾರದಲ್ಲಿ ಅಚ್ಚರಿಪಡುವಂತಹದ್ದೇನಿಲ್ಲ

Cm Siddaramaiah suspends zero traffic for convoy
Photo Credit : Facebook

ಬೆಂಗಳೂರು: ಸುಳ್ಳು, ಅಪಪ್ರಚಾರ ಮತ್ತು ಚಾರಿತ್ರ್ಯ ಹನನವನ್ನೇ ರಾಜಕೀಯ ಪ್ರಚಾರದ ಸರಕನ್ನಾಗಿ ಮಾಡಿಕೊಂಡ ಭಾರತೀಯ ಜನತಾ ಪಕ್ಷ ನನ್ನ ಹೆಸರಿಗೆ ಮುಸ್ಲಿಮ್ ಹೆಸರು ಸೇರಿಸಿ ನಡೆಸುತ್ತಿರುವ ಅಪ ಪ್ರಚಾರದಲ್ಲಿ ಅಚ್ಚರಿಪಡುವಂತಹದ್ದೇನಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂತಹ ಅಪ ಪ್ರಚಾರವಲ್ಲದೆ ಅವರಾದರೂ ಬೇರೆ ಏನು ಮಾಡಲು ಸಾಧ್ಯ? ಶೂನ್ಯ ಸಾಧನೆ, ಭ್ರಷ್ಟಾಚಾರ, ಅನಾಚಾರಗಳನ ಮಸಿ ಬಳಿದುಕೊಂಡ ಮುಖವನ್ನು ತೋರಿಸಿ ಮತಯಾಚನೆ ಮಾಡಲಿಕ್ಕಾಗುತ್ತದೆಯೇ? ಮೈತುಂಬ ಕಪ್ಪು ಬಳಿದುಕೊಂಡ ದುಷ್ಟರಿಗೆ ಬಿಳಿ ಬಟ್ಟೆ ನೋಡಿದಾಕ್ಷಣ ಕಪ್ಪು ಬಳಿಯೋಣ ಎಂದು ಮನಸ್ಸಾಗುವುದು ಸಹಜ ಗುಣ.

ಇದು ಅವರ ಸೋಲು, ಹತಾಶೆ ಮತ್ತು ಅಸಹಾಯಕತೆಯನ್ನು ಸೂಚಿಸುತ್ತದೆ. ಒಂದು ಕಾಲದಲ್ಲಿ ಒಂದಷ್ಟು ಸಭ್ಯಸ್ಥರು ಇದ್ದ ಪಕ್ಷ ಇಂತಹ ನೈತಿಕ ಅಧ:ಪತನಕ್ಕೆ ಬಿದ್ದಿರುವುದರ ಬಗ್ಗೆ ನಾವೆಲ್ಲ ಸಾಮೂಹಿಕವಾಗಿ ಸಂತಾಪ ಸೂಚಿಸೋಣ.

ಸಿದ್ರಮುಲ್ಲಾಖಾನ್ ಎಂದು ನನ್ನ ಹೆಸರಿಗೆ ಮುಸ್ಲಿಮ್ ಹೆಸರು ಸೇರಿಸಿರುವ ಬಗ್ಗೆ ನನಗೇನು ಬೇಸರವಿಲ್ಲ. ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿ ಗೋವಿಂದ ಭಟ್ಟರ ಶಿಷ್ಯನಾಗಿ ಈಗಲೂ ನಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸುತ್ತಲೇ ಇರುವ ಸಂತ ಶಿಶುನಾಳ ಷರೀಪರ ಪರಂಪರೆ ನಮ್ಮದು.

ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿ ಸಂತ ರಮಾನಂದರ ಶಿಷ್ಯತ್ವವನ್ನು ಒಪ್ಪಿಕೊಂಡು ಜಗಮೆಚ್ಚಿದ ಸೂಫಿ ಕವಿ ಕಬೀರನೂ ನಮ್ಮದೇ ಪರಂಪರೆಯವರು. ಆದ್ದರಿಂದ ಮುಸ್ಲಿಮ್ ಹೆಸರನ್ನು ನನ್ನ ಹೆಸರಿಗೆ ಜೋಡಿಸುವ ಮೂಲಕ ಜಾತ್ಯತೀತತೆಯ ಮೇಲಿನ ನನ್ನ ನಂಬಿಕೆಯನ್ನು ಅವರು ಪುರಸ್ಕರಿಸಿದ್ದಾರೆಂದು ಎಂದು ತಿಳಿದುಕೊಳ್ಳುವೆ.

ಮುಖ್ಯಮಂತ್ರಿಯಾಗಿ ಜನರಿಗಾಗಿ ಮಾಡಿರುವ ಸೇವೆಯನ್ನು ಗುರುತಿಸಿ ಬಹಳಷ್ಟು ಜನ ನನ್ನನ್ನು ‘ಅನ್ನರಾಮಯ್ಯ’, ರೈತರಾಮಯ್ಯ, ಕನ್ನಡ ರಾಮಯ್ಯ, ದಲಿತರಾಮಯ್ಯ ಎಂದೆಲ್ಲಾ ಕರೆಯುತ್ತಾರೆ. ಅದೇ ರೀತಿ ಮುಸ್ಲಿಮ್ ಸಮುದಾಯಕ್ಕೆ ನಾನು ಮಾಡಿರುವ ಕೆಲಸವನ್ನು ಗುರುತಿಸಿ ನನ್ನನ್ನು ‘ಸಿದ್ರಮುಲ್ಲಾ ಖಾನ್’ ಎಂದು ಕರೆದರೆ ಅದಕ್ಕೂ ಖುಷಿಪಡುವೆ.

ಹಿಂದೂ ಕೋಮುವಾದದಷ್ಟೇ ಸ್ಪಷ್ಟತೆ ಮತ್ತು ಬದ್ದತೆಯಿಂದ ನಾನು ಮುಸ್ಲಿಮ್ ಮತ್ತಿತರ ಧರ್ಮಗಳ ಕೋಮುವಾದವನ್ನೂ ವಿರೋಧಿಸುತ್ತಾ ಬಂದಿದ್ದೇನೆ. ಭಾರತೀಯ ಜನತಾ ಪಕ್ಷದ ರೀತಿಯಲ್ಲಿ ರಾಜಕೀಯ ಕಾರಣಕ್ಕಾಗಿ ಒಳ್ಳೆಯವರು-ಕೆಟ್ಟವರು ಎಂಬ ಭೇದವಿಲ್ಲದೆ ಸಾರಾಸಗಟಾಗಿ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡ ಕೋಮುವಾದದ ರಾಜಕೀಯವನ್ನು ನಾನು ಮಾಡಿದವನಲ್ಲ.

ಮುಸ್ಲಿಮ್ ಬಂಧುಗಳ ಮೂಲಭೂತ ಅವಶ್ಯಕತೆಗಳಾದ ಭದ್ರತೆ, ಶಿಕ್ಷಣ,ಆರೋಗ್ಯ, ಉದ್ಯೋಗಳನ್ನು ಒದಗಿಸಲು ಮುಂಗಡಪತ್ರದಲ್ಲಿ ನ್ಯಾಯಬದ್ದವಾದ ಪಾಲನ್ನು ಎತ್ತಿಟ್ಟು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದೇನೆ.

ಈ ಬಗ್ಗೆ ನನಗೆ ಹೆಮ್ಮೆಯೂ ಇದೆ, ಅಭಿಮಾನವೂ ಇದೆ

ಟಿಪ್ಪು ಸುಲ್ತಾನ ಜಯಂತಿ ಆಚರಣೆಯನ್ನೇ ನೆಪವಾಗಿಟ್ಟುಕೊಂಡು ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಮತ್ತು ಸಂಘ ಪರಿವಾರ ಹುಟ್ಟುಹಾಕಿದ ವಿವಾದ ಮತ್ತು ಗಲಭೆಗಳು ರಾಜಕೀಯ ಪ್ರೇರಿತವಾದುದು ಎಂದು ರಾಜ್ಯದ ಜನರಿಗೆ ಈಗ ಮನದಟ್ಟಾಗಿದೆ.

ಬಿಜೆಪಿಯ ಮುಖ್ಯಮಂತ್ರಿಗಳಿಂದ ಹಿಡಿದು ಸಚಿವ-ಶಾಸಕರ ವರೆಗೆ ಎಲ್ಲರೂ ಬಗೆಬಗೆಯ ವೇಷಧರಿಸಿ ಟಿಪ್ಪು ಜಯಂತಿ ಆಚರಿಸಿರುವುದು ಮಾತ್ರವಲ್ಲ ಟಿಪ್ಪುವನ್ನು ಹಾಡಿ ಹೊಗಳಿದ್ದಕ್ಕೆ ಸಾಕ್ಷಿಗಳಿವೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಟಿಪ್ಪುವಿನ ಬಗ್ಗೆ 400 ಪುಟಗಳ ಪುಸ್ತಕ ಬರೆಸಿದ್ದು ಮಾತ್ರವಲ್ಲ ಟಿಪ್ಪುವನ್ನು ಕೊಂಡಾಡಿ ಮುನ್ನುಡಿಯನ್ನೂ ಬರೆದಿದ್ದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ವಿಧಾನಮಂಡಲದ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನನ ಸಾಧನೆಗಳನ್ನು ಉಲ್ಲೇಖಿಸಿ ಶ್ಲಾಘಿಸಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಹಿಂದೂ ಯುವಕರ ಕೊಲೆ ನಡೆದಿತ್ತು ಎಂಬ ಸುಳ್ಳು ಪ್ರಚಾರವನ್ನೂ ಬಿಜೆಪಿ ನಾಯಕರು ನಡೆಸುತ್ತಿದ್ದಾರೆ.

ಶೋಭಾ ಕರಂದ್ಲಾಜೆಯವರು ರಾಜ್ಯದಲ್ಲಿ 24 ಹಿಂದೂಗಳ ಹತ್ಯೆಗಳು ನಡೆದಿವೆ ಎಂದು ಕೇಂದ್ರ ಗೃಹಸಚಿವರಾದ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ಜೀವಂತವಿದ್ದ ವ್ಯಕ್ತಿಯ ಹೆಸರನ್ನೂ ಸೇರಿಸಲಾಗಿತ್ತು. ಅದರಲ್ಲಿ ಹನ್ನೊಂದು ಹಿಂದೂಗಳ ಹತ್ಯೆಯಲ್ಲಿ ಆರೋಪಿಗಳಾಗಿದ್ದವರು ಎಸ್ ಡಿಪಿಐ ಮತ್ತು ಪಿಎಫ್ ಐ ಸದಸ್ಯರು. ಅವರ ವಿರುದ್ದ ನಮ್ಮದೇ ಸರ್ಕಾರ ಪ್ರಕರಣ ದಾಖಲಿಸಿ ಆರೋಪ ಪಟ್ಟಿ ಸಲ್ಲಿಸಿತ್ತು. ಅವರಲ್ಲಿ ಪರೇಶ್ ಮೇಸ್ತಾ ಎಂಬ ಯುವಕನ ಸಾವು ಹತ್ಯೆಯಲ್ಲ ಎಂದು ಸಿಬಿಐ ಇತ್ತೀಚೆಗೆ ಹೇಳಿದೆ.

ಉಳಿದ ಹತ್ಯೆಗಳು ನಡೆದಿದ್ದು ವೈಯಕ್ತಿಕ ದ್ವೇಷ-ಜಗಳಗಳಿಂದ ಎಂದು ತನಿಖೆಯಿಂದ ಗೊತ್ತಾಗಿದೆ. ಇದೇ ಅವಧಿಯಲ್ಲಿ 11 ಮುಸ್ಲಿಮ್ ಯುವಕರ ಹತ್ಯೆಯೂ ನಡೆದಿತ್ತು. ಈ ಹತ್ಯೆಗಳ ಎಲ್ಲ ಆರೋಪಿಗಳು ಬಜರಂಗದಳ ಮತ್ತಿತರ ಸಂಘಪರಿವಾರದ ಸಂಘಟನೆಗಳ ಕಾರ್ಯಕರ್ತರಾಗಿದ್ದಾರೆ. ಅವರ ವಿರುದ್ದವೂ ನಮ್ಮ ಸರ್ಕಾರ ಪ್ರಕರಣಗಳನ್ನು ದಾಖಲಿಸಿತ್ತು.

ಈ ಪ್ರಕರಣಗಳ ಸಮಗ್ರ ಮಾಹಿತಿಯನ್ನು ನಮ್ಮ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ರಾಮಲಿಂಗ ರೆಡ್ಡಿಯವರು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅದನ್ನು ಬಿಜೆಪಿ ಕಚೇರಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡುತ್ತೇನೆ.

ಕರ್ನಾಟಕದ ಜನತೆ ಪ್ರಜ್ಞಾವಂತರಿದ್ದಾರೆ, ಸರಿ-ತಪ್ಪುಗಳನ್ನು ಅರ್ಥಮಾಡಿಕೊಳ್ಳುವಷ್ಟು ವಿವೇಕವುಳ್ಳವರಾಗಿದ್ದಾರೆ. ಆದ್ದರಿಂದ ಅಪಪ್ರಚಾರ ನಡೆಸಿದಷ್ಟು ಅಪಪ್ರಚಾರ ನಡೆಸಿದವರು ರಾಜ್ಯದ ಜನರ ಮುಂದೆ ಬತ್ತಲಾಗುತ್ತಾರೆ ಎನ್ನುವುದು ನನಗೆ ಗೊತ್ತು. ನನ್ನ ವಿರುದ್ದದ ಅಪಪ್ರಚಾರವನ್ನು ನಿಲ್ಲಿಸಬೇಕೆಂದು ನಾನೇನು ಮನವಿ ಮಾಡುವುದಿಲ್ಲ. ಆದರೆ ಇಂತಹ ಅಪಪ್ರಚಾರಗಳಿಗೆ ಹೆದರಿ ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಮತ್ತು ಕೋಮುವಾದದ ರಾಜಕಾರಣದ ವಿರುದ್ದದ ನನ್ನ ಹೋರಾಟವನ್ನು ನಾನು ನಿಲ್ಲಿಸುತ್ತೇನೆ ಎಂದು ತಿಳಿದುಕೊಂಡರೆ ಅದು ಮೂರ್ಖತನ ಅಷ್ಟೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು