ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಹೊಸ ಅಡುಗೆ ಏನೂ ಇಲ್ಲ – ಡಿ.ಕೆ. ಶಿವಕುಮಾರ್

ಬೆಂಗಳೂರು: ‘ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಸಾಧನೆ, ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರದಂತಹ ಯಾವುದೇ ಅಂಶಗಳು ಇಲ್ಲ. ಸರ್ಕಾರದ ಯಾವುದೇ ಹೊಸ ಅಡುಗೆ ಇಲ್ಲ. ನಮ್ಮ ಅಡುಗೆಯನ್ನು ಅವರದು ಎಂದು ಹೇಳಿಕೊಂಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ನಂತರ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು.

‘ ನಾನು 30 ವರ್ಷಗಳಿಂದ ಅನೇಕ ರಾಜ್ಯಪಾಲರ ಭಾಷಣ ಕೇಳಿದ್ದೇನೆ. ಇಂದಿನ ಭಾಷಣದಲ್ಲಿ ಕೇವಲ ಹಸಿಸುಳ್ಳುಗಳೇ ಇವೆ. ಕಾಂಗ್ರೆಸ್ ಸರ್ಕಾರದ ಕೆಲಸಗಳಿಗೆ ಬಿಜೆಪಿ ಸರ್ಟಿಫಿಕೇಟ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಉದಾಹರಣೆಗೆ, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿ ಅದರ ಮಾರಾಟದಿಂದ 3500 ಕೋಟಿ ಆದಾಯ ಬಂದಿದೆ. ಆದರೆ ನವೀಕೃತ ಇಂಧನ ಕ್ಷೇತ್ರದಲ್ಲಿ 350 ಕೋಟಿಯಷ್ಟು ಸಾಧನೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ನಾನು ಇಂಧನ ಸಚಿವನಾಗಿದ್ದಾಗ ಈ ಸಾಧನೆ ಮಾಡಿದ್ದು, ಬಿಜೆಪಿ ಸರ್ಕಾರ ಈಗ ತನ್ನದೆಂದು ಹೇಳಿಕೊಳ್ಳುತ್ತಿದೆ.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕರ್ನಾಟಕವನ್ನು ದೇಶದ ಭ್ರಷ್ಟಾಚಾರ ರಾಜಧಾನಿಯನ್ನಾಗಿ ಮಾಡಿದ್ದಾರೆ. ಸರ್ಕಾರದ ಭ್ರಷ್ಟಾಚಾರದ ಬಗ್ಗೆ ವಿರೋಧ ಪಕ್ಷದ ಟೀಕೆ ಒಂದು ಕಡೆಯಾದರೆ, ಮತ್ತೊಂದು ಕಡೆ ಬಿಜೆಪಿ ಶಾಸಕರುಗಳು ಮಾಡುತ್ತಿರುವ ಆರೋಪ. ಮಾಧ್ಯಮಗಳು ದಿನ ನಿತ್ಯ ಹಗರಣಗಳನ್ನು ಬಯಲಿಗೆಳೆಯುತ್ತಿವೆ. ವಿಧಾನಸೌಧದ ಗೋಡೆಗಳು ಲಂಚ, ಲಂಚ ಅಂತಾ ಕೂಗುತ್ತಿವೆ. ಎಲ್ಲ ಸರ್ಕಾರಿ ಅಧಿಕಾರಿಗಳು ಲಂಚ ಲಂಚ ಅನ್ನುತ್ತಿದ್ದಾರೆ. ಈ ಸರ್ಕಾರ ಕಳೆದ ಮೂರೂವರೆ ವರ್ಷಗಳ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಕ್ಕಿಂತ ಭ್ರಷ್ಟರನ್ನು ರಕ್ಷಿಸಿದ್ದೇ ಹೆಚ್ಚು. ಅಧಿಕಾರ ಕಳೆದುಕೊಳ್ಳುವಾಗಲಾದರೂ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಒಂದೇ ಒಂದು ಮಾತನಾಡದಿರುವುದು ದುರಂತ.

ರಾಜ್ಯದಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೆ ನಿಲ್ಲುವ ಬಗ್ಗೆ ಯಾವುದೇ ಕಾರ್ಯಯೋಜನೆ ಇಲ್ಲ. ಅಡಿಕೆ, ತೆಂಗು, ಮೆಣಸು ಬೆಳೆಗಳಿಗೆ ಕೊಳೆ ರೋಗ ವ್ಯಾಪಕವಾಗಿ ಕಾಡುತ್ತಿವೆ. ಗೋವುಗಳು ಚರ್ಮಗಂಟು ಸೋಂಕಿಗೆ ಬಲಿಯಾಗುತ್ತಿವೆ. ಈ ವಿಚಾರದಲ್ಲಿ ರೈತರಿಗೆ ನೆರವಾಗುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ.

ನಿರುದ್ಯೋಗ ಸಮಸ್ಯೆ ರಾಜ್ಯದಲ್ಲಿದೆ. ಇವರು ಉದ್ಯೋಗ ಸೃಷ್ಟಿ ಬಗ್ಗೆಯೂ ಮಾತನಾಡಿದ್ದಾರೆ. ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೇವೆ ಎಂದು ಹೇಳಬೇಕಲ್ಲವೇ? 1 ಲಕ್ಷ ಉದ್ಯೋಗ ಕೊಟ್ಟಿದ್ದೇವೆ ಎಂದಿದ್ದಾರೆ. ಯಾರಿಗೆ ಯಾವ ಕ್ಷೇತ್ರದಲ್ಲಿ ಉದ್ಯೋಗ ನೀಡಿದ್ದಾರೆ ಎಂದು ಹೇಳಬೇಕಲ್ಲವೆ. ರಾಜ್ಯದಲ್ಲಿ 2.80 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ಅದನ್ನು ತುಂಬುವ ಕೆಲಸ ಈ ಸರ್ಕಾರದಿಂದ ಆಗಿಲ್ಲ. ಇನ್ನು ಖಾಸಗಿ ಉದ್ಯೋಗ ಸೃಷ್ಟಿ ಬಗ್ಗೆಯೂ ಯಾವುದೇ ಕಾರ್ಯಕ್ರಮ ಇಲ್ಲ. ಹೆಚ್ಚು ಉದ್ಯೋಗಾವಕಾಶ ಇರುವುದು ಕೃಷಿ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಯಲ್ಲಿ. ಈ ಕ್ಷೇತ್ರಗಳಿಗೆ ಉತ್ತೇಜನ ನೀಡಲು ಸರ್ಕಾರ ಕನಿಷ್ಠ ಚಿಂತನೆಯನ್ನು ಮಾಡಿಲ್ಲ.

ರಾಜಸ್ಥಾನದ ನಂತರ ಅತಿ ಹೆಚ್ಚು ಒಣಪ್ರದೇಶ ಇರುವ ರಾಜ್ಯ ನಮ್ಮದು. ಇಲ್ಲಿ ನೀರಾವರಿ ಯೋಜನೆ ಬಗ್ಗೆ ಮಾತನಾಡಬೇಕಲ್ಲವೇ. ಮೇಕೆದಾಟು, ಮಹದಾಯಿ, ಕೃಷ್ಣ ನದಿ ನೀರು ಯೋಜನೆ ಬಗ್ಗೆ ಪ್ರಸ್ತಾಪ ಯಾಕಿಲ್ಲ? ಕೇಂದ್ರದ ಮೇಲೆ ಒತ್ತಡ ಹೇರಿ ಅನುದಾನ ತರಲು ಯಾಕೆ ಸಾಧ್ಯವಾಗುತ್ತಿಲ್ಲ?

ಇನ್ನು ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ

ಐಟಿ ಕ್ಯಾಪಿಟಲ್, ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ಒಂದೇ ಒಂದು ಮಳೆಗೆ ಪ್ರವಾಹ ಪೀಡಿತ ಪ್ರದೇಶವಾಗುವ ದುಸ್ಥಿತಿಗೆ ಬಂದಿದೆ. ರಾಜ್ಯ ಮಾತ್ರವಲ್ಲ ದೇಶಕ್ಕೆ ಆದಾಯ ನೀಡುವ ಬೆಂಗಳೂರು ನಗರದ ಸಮರ್ಪಕ ಅಭಿವೃದ್ಧಿ ಬಗ್ಗೆ ಬಿಜೆಪಿ ಸರ್ಕಾರ ಗಮನಹರಿಸಿಲ್ಲ.

ಈ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಆಗಿಲ್ಲ. ಹೀಗಾಗಿ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಕೇವಲ ಭಾವನಾತ್ಮಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸರ್ಕಾರದ ಆಯಸ್ಸು ಇನ್ನು 60 ದಿನಗಳು ಮಾತ್ರ. ನಂತರ ಹೊಸ ಸರ್ಕಾರ ರಚನೆ ಆಗಲಿದೆ. ನಂತರ ನಾವು ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕೆಲಸ ಮಾಡುತ್ತೇವೆ.’

ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರವಾಗಿ ಗೊಂದಲ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅಮಿತ್ ಶಾ ಅವರು ಈ ಹಿಂದೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಸುತ್ತೇವೆ ಎಂದರು. ನಂತರ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು. ಇದು ಬಿಜೆಪಿಗೆ ರಾಜ್ಯದಲ್ಲಿ ನಾಯಕತ್ವದ ಕೊರತೆ ಇದೇ ಎಂಬುದಕ್ಕೆ ಸಾಕ್ಷಿ’ ಎಂದು ತಿಳಿಸಿದರು.

ನಾನು ಕುಮಾರಸ್ವಾಮಿ ವಕ್ತಾರನಲ್ಲ:

ಕುಮಾರಸ್ವಾಮಿ ಅವರ ಬ್ರಾಹ್ಮಣ ಸಿಎಂ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರವರ ಪಕ್ಷದ ನಿಲುವು ಅವರವರಿಗೆ. ನಾನು ಯಾಕೆ‌ ಇನ್ನೊಂದು ಪಕ್ಷದ ನಿಲುವಿನ ಬಗ್ಗೆ ಮಾತನಾಡಲಿ. ನಾವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವ ನಂಬಿ ಕೆಲಸ ಮಾಡುತ್ತಿದ್ದೇವೆ.

ನಮ್ಮ ಪಕ್ಷ ಗುಂಡೂರಾಯರು, ವೀರೇಂದ್ರ ಪಾಟೀಲ್, ದೇವರಾಜ ಅರಸ್, ವೀರಪ್ಪ ಮೋಯ್ಲಿ, ಎಸ್ ಎಂ ಕೃಷ್ಣ, ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಎಲ್ಲರನ್ನೂ ಸಿಎಂ ಮಾಡಿದೆ. ನಾವು ಅನೇಕ‌ ವರ್ಗದ ನಾಯಕರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದೇವೆ. ಎಲ್ಲ ವರ್ಗದವರ ಏಳ್ಗೆ ಕಾಂಗ್ರೆಸ್ ಸಿದ್ಧಾಂತ. ಹೀಗಾಗಿ ನಾನು ಬೇರೆ ಪಕ್ಷದ ನಾಯಕರ ನಿಲುವಿನ ಬಗ್ಗೆ ಮಾತನಾಡಲಾರೆ. ನಾನು ಕುಮಾರಸ್ವಾಮಿಗೆ ವಕ್ತಾರ ಆಗಲಾರೆ, ನಾನು ನನಗೆ ಮಾತ್ರ ವಕ್ತಾರ’ ಎಂದು ತಿಳಿಸಿದರು.

ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ:

ಏಪ್ರಿಲ್ 24ರ ವರೆಗೂ ವಿಚಾರಣೆ ನೊಟೀಸ್ ನೀಡದಂತೆ ಕೋರ್ಟ್ ತನಿಖಾ ಸಂಸ್ಥೆಗೆ ನೀಡಿರುವ ಆದೇಶದ ಬಗ್ಗೆ ಕೇಳಿದಾಗ, ‘ಇಡಿ ಅವರು ನನ್ನ ವಿರುದ್ಧ ಮೂರ್ನಾಲ್ಕು ಪ್ರಕರಣ ವಿಚಾರಣೆ ಮಾಡುತ್ತಿದ್ದಾರೆ. ಯಾವ ಪ್ರಕರಣದಲ್ಲಿ ಕೋರ್ಟ್ ಈ ಆದೇಶ ನೀಡಿದೆ ಗೊತ್ತಿಲ್ಲ. ಇಡಿ ಅಧಿಕಾರಿಗಳು ನ್ಯಾಷನಲ್ ಹೆರಾಲ್ಡ್ ವಿಚಾರವಾಗಿ ಯಂಗ್ ಇಂಡಿಯಾ ಸಂಸ್ಥೆಗೆ ದೇಣಿಗೆ ನೀಡಿರುವ ಬಗ್ಗೆ ಫೆ. 22 ರಂದು ಹಾಜರಾಗಲು ಹೇಳಿದ್ದಾರೆ. ನನಗೆ ದಿನಾ ಮೂರು ನಾಲ್ಕು ಕೇಸ್ ವಿಚಾರವಾಗಿ ನೊಟೀಸ್ ನೀಡುತ್ತಿದ್ದಾರೆ. ಹೀಗಾಗಿ ಯಾವ ವಿಚಾರಣೆಗೆ ಈ ಆದೇಶ ನೀಡಿದ್ದಾರೆ ಎಂದು ನಮ್ಮ ವಕೀಲರಿಂದ ಮಾಹಿತಿ ಪಡೆಯುತ್ತೇನೆ. ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೇನೆ’ ಎಂದು ತಿಳಿಸಿದರು.

Ashika S

Recent Posts

ಮಲಯಾಳಂ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ…

5 mins ago

ಮುಸ್ಲಿಂ ಯುವತಿಯೊಂದಿಗೆ ಮದುವೆ : ಖಾಕಿ ವಿರುದ್ಧ ಹಿಂದೂ ಸಂಘಟನೆ ಪ್ರತಿಭಟನೆ

ಬಾದಾಮಿ ಮೂಲದ ರುಬಿನಾ ಮತ್ತು ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಲ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದು,…

29 mins ago

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

49 mins ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

1 hour ago

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

1 hour ago

ಡಾ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ನಗರದ ಕೆಎಂಸಿಯ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ಜಿ ಲಕ್ಷ್ಮಣ ಪ್ರಭು ಅವರಿಗೆ ದಿಲ್ಲಿಯ ರಾಷ್ಟ್ರೀಯ ವೈದ್ಯಕೀಯ…

2 hours ago