ಬೆಂಗಳೂರು: ಬಿಜೆಪಿ ಹೈಕಮಾಂಡ್ ಅಳೆದೂ ತೂಗಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದೆ. ಈ ಬಗ್ಗೆ ಸ್ವತಃ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕ ಬಸನಗೌಡ ಯತ್ನಾಳ್, ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಪಕ್ಷದ ಎಲ್ಲ ಹಿರಿಯ ನಾಯಕರನ್ನು ವೈಯಕ್ತಿಕವಾಗಿ ಭೇಟಿ ಮಾಡಲಿದ್ದೇನೆ ಎಂದು ಹೇಳಿದ್ದಾರೆ.
ಮಾಜಿ ಸಚಿವ ಆರ್.ಅಶೋಕ್ ಅವರನ್ನು ಪದ್ಮನಾಭನಗರದ ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವೆ. ಮಂಗಳವಾರ ಕುರುಡುಮಲೆ ದೇವಸ್ಥಾನಕ್ಕೆ ಭೇಟಿ ಕೊಡಲಿದ್ದೇನೆ. ಬೂತ್ ಅಧ್ಯಕ್ಷರು ಮತ್ತು ಕೆಲವು ಪ್ರಮುಖರನ್ನು ಭೇಟಿ ಮಾಡಿ ಹಿಂದಿರುಗುವೆ ಎಂದು ತಿಳಿಸಿದರು.