News Karnataka Kannada
Thursday, May 02 2024
ಬೆಂಗಳೂರು ನಗರ

ಪಶುವೈದ್ಯಕೀಯ ಕಾಲೇಜುಗಳ ಸಮಸ್ಯೆ ಪರಿಹಾರದ ಭರವಸೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್

DCM DK Shivakumar assures solution to veterinary colleges' problem
Photo Credit : G Mohan

ಬೆಂಗಳೂರು: ಕೋಳಿ ಉದ್ಯಮ ಸಂಕಷ್ಟದಲ್ಲಿದ್ದು, ಮೊಟ್ಟೆ ಹಾಗೂ ಕೋಳಿಯ ಬೆಲೆ ಸಾಕಷ್ಟು ಏರಿಳಿತ ಕಾಣುತ್ತಿದೆ. ಜೊತೆಗೆ ಪಶುವೈದ್ಯಕೀಯ ಕಾಲೇಜುಗಳ ಸಮಸ್ಯೆ ಪರಿಹಾರ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಪರಿಷತ್ ನಲ್ಲಿ ಶುಕ್ರವಾರ ನಡೆದ ವಿಶ್ವ ಮೊಟ್ಟೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು “ನಮ್ಮ ರಾಜ್ಯದಲ್ಲಿ ಪಶು ವೈದ್ಯರ ಸಂಖ್ಯೆ ಕಡಿಮೆ ಇದೆ. ಆದ ಕಾರಣ ಪಶುವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿ ಎಂದು ಖಾಸಗಿಯವರ ಬಳಿ ಮನವಿ ಮಾಡಿದ್ದೆ, ಅವರು ನೂರಾರು ಕೋಟಿ ಬೇಕಾಗುತ್ತದೆ ಎಂದರು. ಈ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು. ಪಶುವೈದ್ಯರಿಗೆ ಸಾಕಷ್ಟು ಬೇಡಿಕೆ ಇದ್ದು, ನೀವು ಭರವಸೆ ಕಳೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಭರವಸೆಯ ಮಾತುಗಳನ್ನಾಡಿದರು.

ಇಲ್ಲಿಗೆ ಬಂದ ಒಂದಷ್ಟು ಜನ ರೈತರನ್ನು ಮಾತನಾಡಿಸಿದೆ. ಅನೇಕರು 20,000 ದಿಂದ 50,000 ತನಕ ಕೋಳಿ ಸಾಕಾಣಿಕೆ ಮಾಡುತ್ತಿರುವುದಾಗಿ ತಿಳಿಸಿದರು. ಕೋಳಿ ಆಹಾರದ ಬೆಲೆಯು ಈಗ ಹೆಚ್ಚಳವಾಗುತ್ತಿದೆ, ಒಂದೆರಡು ದಿನ ಆರೈಕೆ ಕಡಿಮೆಯಾದರೆ ತೂಕದಲ್ಲಿ ವ್ಯತ್ಯಾಸವಾಗುತ್ತದೆ, ಈ ಕ್ಷೇತ್ರದ ಬಗ್ಗೆ ನನಗೆ ಅರಿವಿರುವ ಕಾರಣ ಇಷ್ಟೆಲ್ಲಾ ಅಂಶಗಳನ್ನು ನಾನು ಉಲ್ಲೇಖಿಸುತ್ತಿದ್ದೇನೆ. ರೈತರಿಗೆ ಕೃಷಿಯ ಜೊತೆಗೆ ಉಪ ಕಸುಬಾಗಿ ಇದು ಬೆಳೆಯುವ ರೀತಿ ಯೋಜನೆ ರೂಪಿಸೋಣ ಎಂದರು.

“ನಾನು ನಂಬಿದ ದೈವ ನೀವು ಸಸ್ಯಹಾರಿಯಾಗಿರಬೇಕು ಎಂದು ಹೇಳಿದ ಕಾರಣ ಮಾಂಸ ತಿನ್ನುವುದನ್ನು ಬಿಟ್ಟಿದ್ದೇನೆ. ಆದರೆ ಈ ದೇಶದ ಬಹುತೇಕ ಜನರ ಆಹಾರ ಕ್ರಮವನ್ನು ಗೌರವಿಸುತ್ತೇನೆ” ಎಂದು ಹೇಳಿದರು.

“ನನ್ನ ವ್ಯವಹಾರಿಕ ಜೀವನ ಪ್ರಾರಂಭವಾಗಿದ್ದೇ ಕೋಳಿ ಫಾರಂನಿಂದ. ಪಿಯು ರಜೆ ವೇಳೆಯಲ್ಲಿ ಇದೇ ಸಂಸ್ಥೆಯಲ್ಲಿ 15 ದಿನಗಳ ಕಾಲ ಕೋಳಿ ಸಾಕಾಣಿಕೆಯ ಬಗ್ಗೆ ತರಬೇತಿ ಪಡೆದಿದ್ದೆ” ಎಂದು ಹಳೆಯ ನೆನಪಿಗೆ ಜಾರಿದರು.

ತರಬೇತಿ ಪಡೆದ ನಂತರ ಬ್ಯಾಂಕ್‌ನಲ್ಲಿ ಸಾಲ ಪಡೆದು ಸುಂಕದಕಟ್ಟೆ- ಹೆಗ್ಗನಹಳ್ಳಿಯಲ್ಲಿ ಕೋಳಿ ಫಾರಂ ಸ್ಥಾಪಿಸಿದೆ. ನಷ್ಟವಾಯಿತು ಅದಕ್ಕೆ ಆ ವ್ಯವಹಾರ ಬಿಟ್ಟುಬಿಟ್ಟೆ. ಆನಂತರ ನಮ್ಮ ತಂದೆ- ತಾಯಿ ಊರಿನ ಜಮೀನಿನಲ್ಲಿ ಐದು ಶೆಡ್‌ಗಳನ್ನ ನಿರ್ಮಾಣ ಮಾಡಿದ್ದರು, ನಾನು ನನ್ನ ತಮ್ಮ ಕೆಲಸದ ಒತ್ತಡದ ನಡುವೆ ನೋಡಿಕೊಳ್ಳಲು ಹೋಗಲಿಲ್ಲ. ನನಗೂ ಹಾಗೂ ಈ ಕೋಳಿ ವ್ಯವಹಾರಕ್ಕೂ ಅವಿನಾಭಾವ ಸಂಬಂಧವಿದೆ ಜೀವನದ ಘಟನೆಗಳನ್ನು ಸ್ಮರಿಸಿಕೊಂಡರು.

ಹಿಟ್ಟನ್ನು (ಮುದ್ದೆ) ಉಂಬುವನು ಬೆಟ್ಟವನು ಎತ್ತುವನು, ಜೋಳವನು ತಿನ್ನುವವನು, ತೋಳದಂತಾಗುವನು ಅದೇರೀತಿ ಮೊಟ್ಟೆಯನು ತಿನ್ನುವವನು ಜಟ್ಟಿಯಂತಾಗುವನು ಎಂದು ಹಿರಿಯರು ಹೇಳುತ್ತಾ ಇದ್ದರು. ಅಂದರೆ ನಮ್ಮ ಆಹಾರದಂತೆ ಆರೋಗ್ಯ ಇರುತ್ತದೆ. ಒಂದೇ ನಾಣ್ಯದ ಎರಡು ಮುಖಗಳು ಇವು, ಯಾವುದನ್ನು ಕಡೆಗಣನೆ ಮಾಡಬಾರದು ಎಂದರು.

ಕೋಳಿ, ಕುರಿ, ಮೇಕೆ ಸೇರಿದಂತೆ ಮಾಂಸಹಾರಕ್ಕೆ ನಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ‌. ಇದೆಲ್ಲಾ ಇರದೆ ಇದ್ದರೆ ಸಮೂಹತನ ಇರುವುದಕ್ಕೆ ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

“ಸಣ್ಣ ರೋಗದ ಸುದ್ದಿ ಹಬ್ಬಿದರೂ ಮೊದಲು ನಾಶ ಮಾಡುವುದೇ ಕೋಳಿಗಳನ್ನ, ಸರ್ಕಾರಕ್ಕೆ ಇದರ ಬಗ್ಗೆ ಅರಿವಿದೆ, ಎಲ್ಲರ ಜೊತೆ ಚರ್ಚೆ ಮಾಡಿ ಪರಿಹಾರ ಸೂತ್ರ ಕಂಡುಹಿಡಿಯಲಾಗುವುದು ಎಂದರು.

ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಕೊಬ್ಬು ಹೆಚ್ಚಿಲ್ಲದ ಮೊಟ್ಟೆ ಪ್ರಯೋಗ ನಡೆದಿತ್ತು. ಅದನ್ನು ಪರಿಚಯಿಸುವ ಸಭೆಯನ್ನು ಕರೆಯಲಾಗಿತ್ತು, ಆದರೆ ನನಗೆ ಆಗ ಅದರ ಬಗ್ಗೆ ಹೆಚ್ಚು ಜ್ಞಾನವಿರಲಿಲ್ಲ. ಇತ್ತೀಚೆಗೆ ನನ್ನ ಮಕ್ಕಳು ಗಿಡದಲ್ಲಿ ಮೊಟ್ಟೆ ಬೆಳೆಯುತ್ತಿದ್ದಾರೆ ಎಂದು ಒಂದು ವಿಡಿಯೋ ತೋರಿಸಿದರು‌. ಅದನ್ನು ನೋಡಿದ ನನಗೆ ಮನುಷ್ಯ ಪ್ರಕೃತಿಯ ವಿರುದ್ದ ಹೋಗುತ್ತಿದ್ದಾನಲ್ಲ ಎಂದು ಆಶ್ಚರ್ಯವಾಯಿತು. ಅದು ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ ಎಂದರು.

ಅಶ್ವಂ ನೈವ ಗಜಂ ನೈವ, ವ್ಯಾಘ್ರಂ ನೈವ ಚ ನೈವ ಚ. ಅಜಾ ಪುತ್ರಂ ಬಲಿಂ ದದ್ಯಾತ್, ದೇವೋ ದುರ್ಬಲ ಘಾತಕಃ ಅಂದರೆ ನಮ್ಮ ಊರಿನಲ್ಲಿ ಕಬ್ಬಾಳಮ್ಮ, ಬೇರೆ ಕಡೆ ಮಾರಮ್ಮ ದೇವರಿದ್ದಾವೆ. ಈ ದೇವರುಗಳು ಬಲಿ ತೆಗೆದುಕೊಳ್ಳುವಾಗ, ಹೆಚ್ಚು ದುರ್ಬಲ ಪ್ರಾಣಿಗಳನ್ನ ತೆಗೆದುಕೊಳ್ಳುತ್ತದೆಯೇ ಹೊರತು, ಆನೆಯಂತಹ ಶಕ್ತಿಶಾಲಿ ಪ್ರಾಣಿಗಳನ್ನು ಮುಟ್ಟುವುದಿಲ್ಲ ಎಂಬುದು ಇದರ ಅರ್ಥ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು