News Karnataka Kannada
Thursday, April 25 2024
ಬೆಂಗಳೂರು ನಗರ

ಬಿಎಂಟಿಸಿ ಬಸ್ಸುಗಳನ್ನು ಹೆಚ್ಚಿಸಿ, ತೃತೀಯ ಲಿಂಗಿಗಳಿಗೆ ಉಚಿತ ಬಸ್ಸು ಸೌಲಭ್ಯ ಒದಗಿಸಿ: ಆಗ್ರಹ

ಬಿಎಂಟಿಸಿ ಬಸ್ಸುಗಳ ಸಂಖ್ಯೆಯನ್ನು(ಫ್ಲೀಟ್ ಗಾತ್ರ) ಹೆಚ್ಚಿಸಲು ಮತ್ತು ಮುಂಬರುವ ರಾಜ್ಯ ಬಜೆಟ್‌ನಲ್ಲಿ ನಿರ್ದಿಷ್ಟವಾಗಿ ಸಾರಿಗೆ ಸೌಕರ್ಯದ ಅಭಿವೃದ್ಧಿಗೆಂದೇ ಪ್ರತ್ಯೇಕ ಸಾರ್ವಜನಿಕ ಸಾರಿಗೆ ನಿಧಿಯನ್ನು ಕಾಯ್ದಿರಿಸಲು ಸರ್ಕಾರವನ್ನು ಆಗ್ರಹಿಸಿ, ಸ್ಲಂ ನಿವಾಸಿಗಳ ಒಕ್ಕೂಟ/ಸ್ಲಮ್‌ ಡ್ವೆಲ್ಲರ್ಸ್‌ ಫೆಡರೇಶನ್‌ ಮತ್ತು ಗ್ರೀನ್‌ಪೀಸ್ ಇಂಡಿಯಾ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರನ್ನು ಆಗ್ರಹಿಸಿವೆ.
Photo Credit : News Kannada

ಬೆಂಗಳೂರು: ಬಿಎಂಟಿಸಿ ಬಸ್ಸುಗಳ ಸಂಖ್ಯೆಯನ್ನು(ಫ್ಲೀಟ್ ಗಾತ್ರ) ಹೆಚ್ಚಿಸಲು ಮತ್ತು ಮುಂಬರುವ ರಾಜ್ಯ ಬಜೆಟ್‌ನಲ್ಲಿ ನಿರ್ದಿಷ್ಟವಾಗಿ ಸಾರಿಗೆ ಸೌಕರ್ಯದ ಅಭಿವೃದ್ಧಿಗೆಂದೇ ಪ್ರತ್ಯೇಕ ಸಾರ್ವಜನಿಕ ಸಾರಿಗೆ ನಿಧಿಯನ್ನು ಕಾಯ್ದಿರಿಸಲು ಸರ್ಕಾರವನ್ನು ಆಗ್ರಹಿಸಿ, ಸ್ಲಂ ನಿವಾಸಿಗಳ ಒಕ್ಕೂಟ/ಸ್ಲಮ್‌ ಡ್ವೆಲ್ಲರ್ಸ್‌ ಫೆಡರೇಶನ್‌ ಮತ್ತು ಗ್ರೀನ್‌ಪೀಸ್ ಇಂಡಿಯಾ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಗ್ರಹಿಸಿವೆ.

ರಾಜ್ಯ ಸರ್ಕಾರವು 2024-25ನೇ ಸಾಲಿನ ಕರ್ನಾಟಕ ಬಜೆಟ್‌ನ್ನು ಮಂಡಿಸುತ್ತಿರುವ ಈ ಸಂದರ್ಭದಲ್ಲಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸುವ ಮತ್ತು ನಗರದ ರಸ್ತೆಗಳನ್ನು ಸಂಚಾರ ದಟ್ಟಣೆಯಿಂದು ಮುಕ್ತವಾಗಿಸುವ ನಿಟ್ಟಿನಲ್ಲಿ ಸರ್ಕಾರವು ಕಾರ್ಯ ತತ್ಪರವಾಗಬೇಕು ಎಂಬ ಆಶಯದೊಂದಿಗೆ ಈ ಎರಡೂ ಸಂಸ್ಥೆಗಳು ಸರ್ಕಾರಕ್ಕೆ ಪತ್ರ ಬರೆದಿದ್ದು, ಇದರಲ್ಲಿ ಸಾರ್ವಜನಿಕ ಸಾರಿಗೆ ಕುರಿತ ವಿವಿಧ ಅಂಶಗಳ ಕುರಿತಾಗಿ ಸರ್ಕಾರದ ಗಮನ ಸೆಳೆದಿವೆ.

ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಕ್ಕಾಗಿ ಮುಖ್ಯಮಂತ್ರಿಯವರನ್ನು ಅಭಿನಂದಿಸಿದ ಸ್ಲಮ್‌ ಡ್ವೆಲ್ಲರ್ಸ್‌ ಫೆಡರೇಶನ್‌ ಮತ್ತು ಗ್ರೀನ್‌ಪೀಸ್ ಇಂಡಿಯಾದ ಪ್ರತಿನಿಧಿಗಳು ಇದರೊಂದಿಗೆ ಪ್ರಸ್ತುತ ನಗರದಲ್ಲಿ ಸಾರಿಗೆ ಸೌಲಭ್ಯ ಒದಗಿಸುತ್ತಿರುವ 6200 ಬಿಎಂಟಿಸಿ ಬಸ್ಸುಗಳು ದಿನವೊಂದಕ್ಕೆ ಮಹಾನಗರದಲ್ಲಿ ಪ್ರಯಾಣಿಸುತ್ತಿರುವ 27 ರಿಂದ 30 ಲಕ್ಷ ಪ್ರಯಾಣಿಕರ ಸಾರಿಗೆ ಬೇಡಿಕೆಗಳನ್ನು ಪೂರೈಸಲು ಹೇಗೆ ಅಸಮರ್ಥವಾಗಿವೆ ಎಂಬುದನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದರು. ʻʻಶಕ್ತಿ ಯೋಜನೆ ಸರ್ಕಾರದ ಅತ್ಯುತ್ತಮ ಯೋಜನೆಗಳಲ್ಲಿ ಒಂದು. ಈ ಯೋಜನೆಯನ್ನು ತೃತೀಯ ಲಿಂಗಿಗಳಿಗೂ ವಿಸ್ತರಿಸುವ ಅಗತ್ಯವಿದೆ. ಸಾರ್ವಜನಿಕ ಸಾರಿಗೆಯಲ್ಲಿ ಹೂಡಿಕೆಗೆ ಹೆಚ್ಚು ಪ್ರಾಧಾನ್ಯತೆ ನೀಡುವ ಮೂಲಕ ಬೆಂಗಳೂರು ನಗರದ ಟ್ರಾಫಿಕ್‌ ಸಮಸ್ಯೆಯನ್ನು ಪರಿಹರಿಸಬಹುದು ಮತ್ತು ವಾತಾವರಣದಲ್ಲಿ ಇಂಗಾಲದ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಈ ಮೂಲಕ ಎಲ್ಲರ ಅಗತ್ಯಗಳನ್ನು ಪೂರೈಸಬಲ್ಲ ಸುಸ್ಥಿರ ನಗರದ ನಿರ್ಮಾಣ ಸಾಧ್ಯʼʼ ಎನ್ನುತ್ತಾರೆ ಗ್ರೀನ್‌ಪೀಸ್‌ ಇಂಡಿಯಾದ ಪ್ರಚಾರಕ ಎಂ ಎಸ್‌ ಶರತ್‌.

ಹೀಗಾಗಿ, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಬಸ್ಸುಗಳ ಸಂಖ್ಯೆಗೆ ಹೊಸದಾಗಿ 4000 ಹೊಸ ಬಸ್‌ಗಳನ್ನು ಸೇರಿಸುವ ಮೂಲಕ ಬಿಎಂಟಿಸಿ ಬಸ್ಸುಗಳ ಸಂಖ್ಯೆಯನ್ನು10,000ಕ್ಕೆ ಹೆಚ್ಚಿಸುವಂತೆ ಸ್ಲಮ್‌ ಡ್ವೆಲ್ಲರ್ಸ್‌ ಫೆಡರೇಶನ್‌ ಮತ್ತು ಗ್ರೀನ್‌ಪೀಸ್ ಇಂಡಿಯಾ ಪ್ರತಿನಿಧಿಗಳು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು. ಇದರೊಂದಿಗೆ ಈ ಸಂಘಟನೆಗಳು ಮುಂಬರುವ 2024-25 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಬಸ್ ನಿಲ್ದಾಣಗಳು, ಬಸ್ ಡಿಪೋಗಳು ಮತ್ತು ಬಸ್‌ ಆದ್ಯತಾ ಪಥಗಳು/ಬಸ್ ಲೇನ್‌ಗಳು ಸೇರಿದಂತೆ ನಗರದಲ್ಲಿನ ಸಾರ್ವಜನಿಕ ಸಾರಿಗೆ ಮೂಲಸೌಕರ್ಯಗಳನ್ನು ಸುಧಾರಿಸಲು ಸಾರ್ವಜನಿಕ ಸಾರಿಗೆ ನಿಧಿಯನ್ನು ಮೀಸಲಿಡುವಂತೆ ಸಿದ್ದರಾಮಯ್ಯನವರನ್ನು ಆಗ್ರಹಿಸಿದವು.

ಸಂಘಟನೆಗಳು ತಮ್ಮ ಬಹು ದಿನದ ಬೇಡಿಕೆಯಾದ ನಗರದಲ್ಲಿ ಪ್ರತ್ಯೇಕ ಬಸ್ಸು ಆದ್ಯತಾ ಪಥ/ ಬಸ್‌ ಲೇನ್‌ ಗಳ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ಇನ್ನೊಮ್ಮೆ ನೆನಪಿಸಿ, ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಪ್ರಸ್ತಾಪಿಸಿದ 10 ಬಸ್ ಲೇನ್‌ಗಳನ್ನು ಜಾರಿಗೆ ತರಲು ಮತ್ತು ಕೋವಿಡ್‌ ಸಮಯದಲ್ಲಿ ಸ್ಥಗಿತಗೊಳಿಸಲಾಗಿದ್ದ ಹೊರವರ್ತುಲ ರಸ್ತೆಯಲ್ಲಿರುವ ಪ್ರತ್ಯೇಕ ಬಸ್ಸು ಆದ್ಯತಾ ಪಥವನ್ನು ಪುನರಾರಂಭಿಸಲು ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸ್ಲಂ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಜಾನ್ ಸ್ಯಾಮ್ಯುಯೆಲ್ ʻನಮ್ಮ ಬಸ್ಸು ನಮ್ಮ ಹಕ್ಕುʼ. ಸರ್ಕಾರವು ಬಸ್ಸು ಪ್ರಯಾಣಿಕರ ದೈನಂದಿನ ಪ್ರಮುಖ ಸವಾಲುಗಳಾದ ಬಸ್ಸುಗಳ ಅಲಭ್ಯತೆ, ನಿಗದಿಪಡಿಸಿದ ಸಂಚಾರದಲ್ಲಿ ಕಡಿತ, ಬಸ್ಸುಗಳಲ್ಲಿ ಹೆಚ್ಚಿದ ಜನಸಂದಣಿ, ಬಸ್ಸು ನಿಯಮಿತವಾಗಿ ಬಾರದಿರುವುದು, ಬಸ್ಸಿನಲ್ಲಿ ಮಹಿಳೆಯರು ಮತ್ತು ತೃತೀಯ ಲಿಂಗಿಗಳ ಸುರಕ್ಷತೆ, ಗುಣಮಟ್ಟದ ಬಸ್ಸು ನಿಲ್ದಾಣಗಳು ಮತ್ತು ಬಸ್ ಶೆಲ್ಟರ್‌ಗಳ ಕೊರತೆ ಮುಂತಾದ ಸಮಸ್ಯೆಗಳ ಕುರಿತಾಗಿ ಗಮನಹರಿಸಿ ಆದ್ಯತೆಯ ಮೇರೆಗೆ ಅವುಗಳನ್ನು ಪರಿಹರಿಸಿ ಸಾರ್ವಜನಿಕರಿಗೆ ಅನೂಕೂಲ ಕಲ್ಪಿಸಬೇಕು ಎಂದರು.

ಸಂಘಟನೆಗಳ ಇತರ ಮುಖ್ಯ ಬೇಡಿಕೆಗಳೆಂದರೆ ಸ್ಲಂ ನಿವಾಸಿಗಳ ಒಕ್ಕೂಟ/ಸ್ಲಮ್‌ ಡ್ವೆಲ್ಲರ್ಸ್‌ ಫೆಡರೇಶನ್‌ ಮತ್ತು ಗ್ರೀನ್‌ಪೀಸ್ ಇಂಡಿಯಾ ಸಾರಿಗೆ ಇಲಾಖೆಗೆ ಸಲ್ಲಿಸಿದ ಪತ್ರದಲ್ಲಿ ಬೆಂಗಳೂರು ನಗರದಲ್ಲಿ ಒಳಗೊಳ್ಳುವಿಕೆ, ಎಲ್ಲರ ಕೈಗೆಟಕುವ ದರ, ಸುರಕ್ಷಿತ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಸಾರಿಗೆ ಸೌಲಭ್ಯವನ್ನು ಒದಗಿಸಲು ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದೆ ಮತ್ತು ಮುಂಬರುವ 2024-25 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಈ ಕೆಳಗಿನ ಶಿಫಾರಸುಗಳನ್ನು ಪರಿಗಣಿಸಲು ವಿನಂತಿಸಿದೆ. ಅವುಗಳೆಂದರೆ ಪ್ರತಿ ಮಕ್ಕಳು, ಅಂಗವಿಕಲರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಮತ್ತು ಎಲ್ಲಾ ಬಸ್ ಬಳಕೆದಾರರಿಗೆ ಕನಿಷ್ಠ ವಾರದಲ್ಲಿ ಗೊತ್ತುಪಡಿಸಿದ ಒಂದು ದಿನ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಒದಗಿಸಬೇಕು, ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತ ಸಾರಿಗೆ ಸೌಕರ್ಯ, . ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕವಾಗಿ ವಿಶೇಷ ಫೀಡರ್ ಬಸ್‌ಗಳಆರಂಭ, ಬಸ್ ಸಾರಿಗೆ, ಸೈಕ್ಲಿಂಗ್ ಮತ್ತು ಮೋಟಾರು ರಹಿತ ಸಾರಿಗೆ (ನಾನ್ ಮೋಟಾರೈಸ್ಡ್ ಸಾರಿಗೆ) ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ವಾಹನ ದಟ್ಟಣೆಯನ್ನು ನಿವಾರಿಸಲು ಬೆಂಗಳೂರು ನಗರಕ್ಕೆ ಸುಸ್ಥಿರ ಸಾರಿಗೆಗಾಗಿ ಮೀಸಲಾದ ನಿಧಿಯನ್ನು ಸ್ಥಾಪನೆ, ಬಸ್ ನಿಲ್ದಾಣದಲ್ಲಿ ಶೌಚಾಲಯಗಳು, ಕುಡಿಯುವ ನೀರು, ಎಲ್‌ಇಡಿ ಸ್ಕ್ರೀನುಗಳಲ್ಲಿ ಬಸ್ಸುಗಳ ವೇಳಾಪಟ್ಟಿ ಕುರಿತ ಮಾಹಿತಿ ಪ್ರದರ್ಶನ ವ್ಯವಸ್ಥೆ ಮತ್ತು ಸಿಸಿಟಿವಿ ಕ್ಯಾಮೆರಾಗಳಂತಹ ಸೌಕರ್ಯಗಳನ್ನು ಒದಗಿಸಲು ಬಜೆಟ್‌ನಲ್ಲಿ ಅನುದಾನ ನೀಡಬೇಕು, ಹೆಚ್ಚು ಮಹಿಳಾ ಸ್ನೇಹಿ ಬಸ್ ತಂಗುದಾಣಗಳನ್ನು ಸ್ಥಾಪಿಸುವ ಅಗತ್ಯವಿದ್ದು ಇದರಲ್ಲಿ ತಾಯಂದಿರಿಗೆ ಶಿಶುಗಳ ಆರೈಕೆಯ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಅಂಗವಿಕಲರಿಗೆ ಪ್ರವೇಶ ಒದಗಿಸಲು ನಿಲ್ದಾಣಗಳು ಹೆಚ್ಚು ಅಂಗವಿಕಲ ಸ್ನೇಹಿ ಶೆಲ್ಟರ್‌ಗಳನ್ನು ಹೊಂದಿರಬೇಕು, ಮಹಿಳೆಯರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ತುರ್ತು ಎಚ್ಚರಿಕೆ ಕರೆಗಂಟೆ, ಮಹಿಳಾ ಸಹಾಯವಾಣಿ ಸಂಖ್ಯೆಗಳು, ಬಸ್ ನಿಲ್ದಾಣಗಳಲ್ಲಿ ಎಲ್‌ಇಡಿ ಲೈಟಿಂಗ್ ಮುಂತಾದ ಸುರಕ್ಷತಾ ಕ್ರಮಗಳನ್ನು ಪರಿಚಯಿಸಬೇಕು, ಜನಸ್ನೇಹಿ ಸಾರಿಗೆ ವ್ಯವಸ್ಥೇಯನ್ನು ರೂಪಿಸುವಲ್ಲಿ ಸಾರಿಗೆ ನೌಕರರ ಪಾತ್ರ ಹಿರಿದಾದುದು. ಹೀಗಾಗಿ ಸಾರಿಗೆ ಇಲಾಖೆಯಲ್ಲಿ ಗುತ್ತಿಗೆ ನೌಕರರಿಗೆ ಖಾಯಂ ಉದ್ಯೋಗ ನೀಡಬೇಕು. ಹೆಚ್ಚು ಹೆಚ್ಚು ಮಹಿಳಾ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳನ್ನು ನೇಮಕಾತಿಗೊಳಿಸುವುದರೊಂದಿಗೆ ಅವರಿಗೆ ಪ್ರತಿ ಬಸ್ ಡಿಪೋ ಮತ್ತು ವಿವಿಧ ಬಸ್ ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿಗಳು, ಶೌಚಾಲಯಗಳಂತಹ ಮೂಲಸೌಕರ್ಯಗಳನ್ನು ಒದಗಿಸಬೇಕು ಇತ್ಯಾದಿ ಬೇಡಿಕೆಗಳನ್ನು ಸಂಘಟನೆಗಳು ಸರಕಾರದ ಮುಂದಿಟ್ಟಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು