ಬೆಂಗಳೂರು: ಜೆಡಿಎಸ್ -ಬಿಜೆಪಿ ಮೈತ್ರಿ ಕುರಿತು ಕಳೆದ ಎರಡು ತಿಂಗಳಿಂದ ಹೇಳಿಕೆ ಪ್ರತಿಹೇಳಿಕೆ, ಸ್ಪಷ್ಟನೆಗಳು ಕೇಳಿಬರುತ್ತಿವೆ. ಮೊನ್ನೆ ಬಿ.ಎಸ್ ಯಡಿಯೂರಪ್ಪ ಅವರು ಮಾತನಾಡಿ ಜೆಡಿಎಸ್ ನೊಂದಿಗೆ ಮೈತ್ರಿಗೆ ಅಮಿತ್ ಶಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದಿದ್ದರು.
ಬಳಿಕ ಜೆಡಿಎಸ್ ನಾಯಕರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅನುಮಾನದ ಹೇಳಿಕೆ ನೀಡುತ್ತಿದ್ದರು. ಇದೀಗ ಮತ್ತೊಮ್ಮೆ ಬಿ.ಎಸ್. ವೈ ಈ ಬಗ್ಗೆ ಮಾತನಾಡಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಕೇಂದ್ರ ನಾಯಕತ್ವ ನಿರ್ಧರಿಸಲಿದೆ ಎಂದು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಮಂಗಳವಾರ ಹೇಳಿದ್ದಾರೆ.
ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುವುದಾಗಿ ಹೇಳಿರುವ ಯಡಿಯೂರಪ್ಪ, ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನನಗೆ ಇದುವರೆಗೆ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ, ಮೈತ್ರಿ ಬಗ್ಗೆ ಕೇಂದ್ರ ನಾಯಕರದ್ದೇ ಅಂತಿಮ ನಿರ್ಧಾರ ಎಂದು ಹೇಳಿದ್ದಾರೆ.
ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಲು (ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ) ನಾಳೆಗೆ ದೆಹಲಿಗೆ ಹೋಗುತ್ತಿರುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಮತ್ತು ಅವರ ಸಲಹೆಗಳನ್ನು ಪಡೆಯಲು ಪ್ರಯತ್ನಿಸಲಾಗುವುದು. ಭೇಟಿ ವೇಳೆ ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಚರ್ಚೆ ನಡೆಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ಗೊತ್ತಿಲ್ಲ, ಅದು ಪ್ರಧಾನಿ ಹಾಗೂ ಅಮಿತ್ ಶಾ ಅವರಿಗೆ ಬಿಟ್ಟಿದ್ದು, ಚರ್ಚೆ ಹೇಗೆ ನಡೆಯುತ್ತೋ ನೋಡೋಣ… ಕೇಂದ್ರ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದರಂತೆ ನಾವು ನಡೆಯುತ್ತೇವೆ ಎಂದು ತಿಳಿಸಿದ್ದಾರೆ.