ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅಮಿತ್ ಶಾ ಬರಿಗೈಯಲ್ಲಿ ರಾಜ್ಯಕ್ಕೆ ಬಂದಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇವತ್ತಿನವರೆಗೂ ಬರ ಪರಿಹಾರ ನೀಡುವ ಬಗ್ಗೆ ಅಮಿತ್ ಶಾ ಒಂದೇ ಒಂದು ಸಭೆ ಮಾಡಿಲ್ಲ. ರೈತರು, ಬಡವರ ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿಯವರಿಗಿಲ್ಲ. ರೈತರು ಕಷ್ಟ ಪಡುತ್ತಿದ್ದಾರೆ, ಕುಡಿಯುವ ನೀರಿಗೆ ಸಮಸ್ಯೆ ಇದೆ. ಎಂನರೇಗಾದಡಿ ಕೆಲಸದ ದಿನಗಳನ್ನು 150ಕ್ಕೆ ಹೆಚ್ಚಿಸಬೇಕು. ಈ ಬಗ್ಗೆ ಪತ್ರ ಕೊಟ್ಟಿದ್ದೇವೆ. ಆದರೆ, ಈವರೆಗೆ ಅನುಮತಿ ಕೊಟ್ಟಿಲ್ಲ ಎಂದರು.
ಇದಕ್ಕೂ ಮುನ್ನ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂಬ ಅಮಿತ್ ಶಾ ಹೇಳಿಕೆ ವಿರುದ್ಧ ಕಿಡಿ ಕಾರಿದ್ದಲ್ಲದೆ, ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಬನ್ನಿ ಎಂದಿದ್ದರು.