News Karnataka Kannada
Sunday, April 28 2024
ಬೆಂಗಳೂರು ನಗರ

ರಾಜ್ಯದಲ್ಲಿ ಎಲ್ಲ ಮನೆಗಳಿಗೂ ನೀರಿನ ಸೌಲಭ್ಯ : ಕೆ.ಎಸ್.ಈಶ್ವರಪ್ಪ

Eshwarappa
Photo Credit :

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕನಸಿನ ಯೋಜನೆಯಾದ ಜಲಜೀವನ ಮಿಷನ್ – ಮನೆ ಮನೆಗೂ ಗಂಗೆ ಯೋಜನೆಯಡಿ ರಾಜ್ಯದಲ್ಲಿನ ಎಲ್ಲ ಮನೆಗಳಿಗೂ ಕುಡಿಯುವ ನೀರನ್ನು ಪೂರೈಸಲು ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪರವರು ತಿಳಿಸಿದರು.

ವಿಧಾನಸೌಧದ 3ನೇ ಮಹಡಿಯ ಸಮಿತಿ ಕೊಠಡಿಯಲ್ಲಿ ಜಲಜೀವನ್ ಮಿಷನ್ ಮತ್ತು ಮನ್ರೇಗಾ ಅಭಿವೃದ್ಧಿಯ ಕುರಿತು ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವರು, ಕರ್ನಾಟಕ ರಾಜ್ಯದಲ್ಲಿ ಈ ಯೋಜನೆ ಅತಿ ವೇಗವಾಗಿ ಅನುಷ್ಠಾನವಾಗುತ್ತಿದೆ. ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಂದೇ ಬಾರಿಗೆ 16 ಯೋಜನೆಗಳಿಗೆ ಅನುಮೋದನೆ ಪಡೆದು, ದಾಖಲೆ ಮಾಡಲಾಗಿದೆ ಎಂದು ತಿಳಿಸಿದರು.

ಜಲಜೀವನ್ ಮಿಶನ್ ಮತ್ತು ಮನ್ರೇಗಾ ಅಭಿವೃದ್ಧಿ ಕಾರ್ಯಕ್ರಮಗಳಡಿ, 6,357 ಹಳ್ಳಿಗಳ 6,17,607 ಮನೆಗಳಿಗೆ ನಲ್ಲಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತದೆ. ಇಲ್ಲಿಯ ತನಕ ಒಟ್ಟು 45.44 ಲಕ್ಷ ಮನೆಗಳಿಗೆ ನೀರು ಸಂಪರ್ಕ ನೀಡಲಾಗಿದೆ. 2020-21 ರಲ್ಲಿ 3.43ಲಕ್ಷ ಮನೆಗಳಿಗೆ ನಲ್ಲಿ ನೀರು ಸಂಪರ್ಕ ದೊರೆತಿದೆ ಎಂದು ತಿಳಿಸಿದರು.

2021-22 ರಲ್ಲಿ 25.17 ಲಕ್ಷ ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ನೀಡುವ ಗುರಿಯನ್ನು ಹೊಂದಲಾಗಿದ್ದು, ಈಗಾಗಲೇ 17.60 ಲಕ್ಷ ಕುಟುಂಬಗಳ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ.  2022-23 ರಲ್ಲಿ  27.14 ಲಕ್ಷ ಮತ್ತು 23-24ರಲ್ಲಿ 17.45ಲಕ್ಷ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಿ ಇಡಿ ರಾಜ್ಯದ 97.91 ಲಕ್ಷ ಗ್ರಾಮೀಣ ಮನೆಗಳಿಗೆ ನೀರು ಸಂಪರ್ಕ ಒದಗಿಸಲಾಗುವುದು ಎಂದು ತಿಳಿಸಿದರು.

ಮಹಾತ್ಮ ಗಾಂಧಿ ನರೇಗಾ  ಯೋಜನೆಯ 2021-22 ಸಾಲಿನಲ್ಲಿ ಕೇಂದ್ರ ಸರ್ಕಾರವು,  ರಾಜ್ಯಕ್ಕೆ ಅನುಮೋದಿಸಿದ್ದ 13 ಕೋಟಿ ಮಾನವ ದಿನಗಳ ಉದ್ಯೋಗವನ್ನು ಡಿಸೆಂಬರ್ ತಿಂಗಳಿನಲ್ಲಿ ಪೂರ್ಣಗೊಳಿಸಿದ ತರುವಾಯ ಮತ್ತೆ 1.40 ಕೋಟಿ ಮಾನವ ದಿನಗಳ ಹೆಚ್ಚುವರಿ ಉದ್ಯೋಗ ನೀಡಲು ರಾಜ್ಯಕ್ಕೆ ಹೆಚ್ಚುವರಿಯಾಗಿ ರೂ 715 ಕೋಟಿ  ಅನುದಾನ ಲಭ್ಯವಾಯಿತು. 32.41 ಲಕ್ಷ ಕುಟುಂಬಗಳ 60.87 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ. 30.05 ಲಕ್ಷ ಮಹಿಳೆಯರು 5.80 ಲಕ್ಷ ಹಿರಿಯ ನಾಗರಿಕರಿಗೆ ಮತ್ತು 22,400 ಲಕ್ಷಕ್ಕೂ ಹೆಚ್ಚು ವಿಶೇಷ ಚೇತನದವರಿಗೆ ಉದ್ಯೋಗ ನೀಡಲಾಗಿದೆ. ಒಟ್ಟು 4,064 ಕೋಟಿ ಕೂಲಿ ಹಣದ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದರು.

ಈ ವರ್ಷ ದಾಖಲೆಯ 13.61 ಲಕ್ಷ ಕಾಮಗಾರಿಗಳನ್ನು ತೆಗೆದುಕೊಂಡು ಈಗಾಗಲೆ 4.31 ಲಕ್ಷ ಕಾಮಗಾರಿಗಳನ್ನು ಪೂರ್ಣ ಮಾಡಲಾಗಿದೆ. ಕೊರೊನಾ ಸಾಂಕ್ರಾಮಿಕದಿಂದ ಸಂಕಷ್ಟಕ್ಕೊಳಗಾದ ವಲಸೆ ಕಾರ್ಮಿಕರಿಗೆ ಕೆಲಸ ಒದಗಿಸುವುದರಲ್ಲಿ ನಾವು ಸಫಲರಾಗಿದ್ದೇವೆ. ಜಲಶಕ್ತಿ ಅಭಿಯಾನದಲ್ಲಿ ರಾಜ್ಯದಲ್ಲಿ 8.92 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಂಡು 4.87 ಲಕ್ಷ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದರಲ್ಲಿ ನಾವು ದೇಶದಲ್ಲೇ ಮೊದಲನೇ ಸ್ಥಾನದಲ್ಲಿ ಇದ್ದೇವೆ. ನರೇಗಾ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದಿಂದ ಕಳೆದ 6 ವರ್ಷದಲ್ಲಿ 3,275 ಅಂಗನವಾಡಿ ಕಟ್ಟಡಗಳ ನಿರ್ಮಾಣವನ್ನು ಕೈಗೆತ್ತಿಕೊಂಡು 2,335 ಕಟ್ಟಡಗಳು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ಈ ವೇಳೆ ಸಚಿವರ ವಿಶೇಷಾಧಿಕಾರಿಗಳಾದ ಜಿ.ಜಯರಾಮ್, ಆಪ್ತ ಸಹಾಯಕರಾದ ಸಿ.ಎನ್ ಮಂಜನಾಥ  ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು