News Karnataka Kannada
Wednesday, May 01 2024
ಬೆಂಗಳೂರು ನಗರ

ಬಂದ್ ಕೈಬಿಡಲು ಕ್ಷತ್ರಿಯ ಮರಾಠ ಮಹಾ ಒಕ್ಕೂಟ ಮನವಿ

Photo Credit :

ಬಂದ್ ಕೈಬಿಡಲು ಕ್ಷತ್ರಿಯ ಮರಾಠ ಮಹಾ ಒಕ್ಕೂಟ ಮನವಿ

ಬೆಂಗಳೂರು: ಕರ್ನಾಟಕ  ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದು ಬಲವಾಗಿ ಪ್ರತಿಪಾದಿಸುತ್ತಿರುವ, ರಾಜ್ಯದಲ್ಲಿ ಹುಟ್ಟಿ, ಬೆಳೆದು, ಇಲ್ಲಿನ ನೆಲ, ಜಲ, ಭಾಷೆ, ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿರುವ ನಾವು ಕನ್ನಡಿಗರು. ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕರೆ ನೀಡಿರುವ ಬಂದ್ ಕೈಬಿಡಿ. ನಾವೆಲ್ಲರೂ ಶಾಂತಿ ಸೌಹಾರ್ದತೆಯಿಂದ ಬಾಳೋಣ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿ.ಎಸ್.ಶ್ಯಾಮಸುಂದರ್ ಗಾಯಕ್ವಾಡ್ ಮನವಿ ಮಾಡಿದ್ದಾರೆ.

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ನಂತರ ಮಾರಾಠಿ ಜನಾಂಗದ ವಿರುದ್ದ ಕೆಲ ಕನ್ನಡ ಪರ ಹೋರಾಟಗಾರರು, ಸಂಘಟನೆಗಳು ಮಾಡುತ್ತಿರುವ ಆರೋಪ, ಭಾಷಾ ಸಾಮರಸ್ಯಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಮರಾಠರು ದೇಶದ ನಾಲ್ಕನೇ ಅತಿ ದೊಡ್ಡ ಜನಾಂಗ. ಕರ್ನಾಟಕದಲ್ಲಿ ಆರನೇ ದೊಡ್ಡ ಜನಸಂಖ್ಯೆ ಹೊಂದಿದೆ. ಚಾಮರಾಜನಗರದಿಂದ ಬೀದರ್ ವರೆವಿಗೆ, ಪೂರ್ವದ ಬಳ್ಳಾರಿಯಿಂದ ಉತ್ತರ ಕನ್ನಡದ ಗೋಕರ್ಣದವರೆಗೆ 50 ಲಕ್ಷಕ್ಕೂ ಹೆಚ್ಚು ಜನ ರಾಜ್ಯದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ. 32 ಕ್ಷತ್ರೀಯ ಪಂಗಡಗಳಾಗಿ ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಶತಶತಮಾನಗಳಿಂದ ಅಪ್ಪಟ ಕನ್ನಡಿಗರಾಗಿ ಶಾಂತಿಯಿಂದ ಜೀವನ ಸಾಗಿಸುತ್ತಿದ್ದಾರೆ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ಹೋರಾಟಕ್ಕೆ ಮರಾಠ ಮುಖಂಡರು ಕೈಜೋಡಿಸಿ ಸಹಿ ಮಾಡಿದ್ದಾರೆ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿರುವಂತೆ ಮರಾಠ ಎಂದರೆ ಭಾಷೆಯಲ್ಲ ಜನಾಂಗ ಎಂಬುದು ಅಕ್ಷರಶಃ ಸತ್ಯ. ಭಾಷೆಯ ಹೆಸರಿನಲ್ಲಿ ನಮ್ಮನ್ನು ವಿಭಜಿಸುವುದು ಸರಿಯಲ್ಲ. ಮರಾಠ ಸಮಾಜದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕಾಭಿವೃದ್ಧಿಗಾಗಿ ನಿಗಮ ರಚಿಸಲಾಗಿದೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್  ಹೇಳಿಕೆಯನ್ನು ಖಂಡಿಸುತ್ತೇವೆ. ಬೆಳಗಾವಿ, ಕಾರವಾರ, ನಿಪ್ಪಾಣಿಯ ಒಂದು ಇಂಚು ಜಾಗವನ್ನು ನಾವು ಬಿಟ್ಟುಕೊಡುವುದಿಲ್ಲ  ಅಖಂಡ ಕರ್ನಾಟಕವಾಗಬೇಕಾದರೆ ಸೋಲಾಪುರ ಹಾಗೂ ಕೊಲ್ಲಾಪುರವನ್ನು ಕರ್ನಾಟಕಕ್ಕೆ ಪಡೆಯಬೇಕು ಎಂಬ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ಭಾಷೆ ಬೆಳವಣಿಗೆಗೆ ಮಹಾನ್ ಕವಿಗಳು ಬರಹಗಾರರು, ಸಂಗೀತಗಾರರು ಕೊಡುಗೆ ನೀಡಿದ್ದಾರೆ. ವಿ.ಕೆ. ಗೋಕಾಕ್, ದ.ರಾ.ಬೇಂದ್ರೆ, ಭೀಮಸೇನಜೋಷಿ, ಗಂಗೂಬಾಯಿ  ಹಾನಗಲ್, ರಾಮಜಾಧವ್, ಪಾಟೀಲ್ ಪುಟ್ಟಪ್ಪ, ಸರ್ಜೂಕಾಟ್ಕರ್,  ಜೋಷಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬಿಜಾಪುರದ ಆದಿಲ್ಶಾಹಿ ಅವರಲ್ಲಿ ರಾಜ್ಯಪಾಲರಾಗಿದ್ದ ಛತ್ರಪತಿ ಶಿವಾಜಿ ತಂದೆ ಶಹಜಿ ಮಹಾರಾಜರು ಬಿಜಾಪುರದಿಂದ ತಂಜಾವೂರ ವರೆಗೂ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಆ ಸಮಯದಲ್ಲಿ ಸುಮಾರು 30 ವರ್ಷಗಳ ಕಾಲ ಬೆಂಗಳೂರಿನಲ್ಲಿ ವಾಸವಾಗಿದ್ದರು. ಶಹಜಿ ಮಹಾರಾಜರು ಕರ್ನಾಟಕದ ಪ್ರವಾಸ ಸಂದರ್ಭದಲ್ಲಿ 1664 ಜನವರಿ 23 ರಂದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿ ಕುದುರೆಯಿಂದ ಬಿದ್ದು ಸಾವನ್ನಪ್ಪಿದ್ದು, ಅವರ ಸಮಾಧಿ ಈಗಲೂ ಅಲ್ಲೇ ಇದೆ ಎಂದರು.

ಎಲ್ಲಾ ರಂಗದಲ್ಲಿ ಮರಾಠಿ ಭಾಷಿಕರ ಕೊಡುಗೆ ಇದೆ. ಕನ್ನಡ ಚಳುವಳಿ ಮಹಾನಾಯಕರುಗಳಲ್ಲಿ ಭಿನ್ನವಿಸಿ ಕೊಳ್ಳುವುದೇನೆಂದರೆ ಅಪ್ಪಟ ಕನ್ನಡಿಗರಾದ ನಮಗೆ ಕೆಟ್ಟ ಹಣೆ ಪಟ್ಟಿಯನ್ನು ಕಟ್ಟಬೇಡಿ ಈ ರಾಜ್ಯದ 50 ಲಕ್ಷಕ್ಕೂ ಹೆಚ್ಚು ಇರುವ ಮರಾಠರು ನಿಮ್ಮ ಜೊತೆಯಲ್ಲಿ ಇದ್ದು ನಿಮ್ಮ ಹೋರಾಟಕ್ಕೆ ಕನ್ನಡದ ಏಳಿಗೆಗಾಗಿ ಹಗಲಿರುಳು ನಿಮ್ಮ ಜೊತೆಯಲ್ಲಿ ಇದ್ದೇವೆ. ಇರುತ್ತೇವೆ. ಇದನ್ನು ತಾವು ಅರಿತು ಮರಾಠ ಸಮಾಜವನ್ನು ವಿರೋಧ ಮಾಡಬೇಡಿ ಅಣ್ಣ – ತಮ್ಮಂದಿರಂತೆ ಬಾಳೋಣ ಒಬ್ಬರಿಗೆ – ಒಬ್ಬರು ಸಹಾಯ ಹಸ್ತ ನೀಡೋಣ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಡಿ. ಘೋರ್ಪಡೆ, ಜಂಟಿ ಕಾರ್ಯದರ್ಶಿ ವಿನೂತ್ ಕುಮಾರ್, ಉಪಾಧ್ಯಕ್ಷರಾದ ಶಂಕರ್ ರಾವ್ ಚೌವ್ಹಾಣ್, ಶ್ರೀಧರ್ ರಾವ್ ಶಿಂಧೆ, ಲಕ್ಷ್ಮಣ ರಾವ್ ಚೌವ್ಹಾಣ್, ಬೆಂಗಳೂರು ನಗರದ ಜಿಲ್ಲಾಧ್ಯಕ್ಷ ರವಿಶಂಕರ್, ಧಾರವಾಡ ಜಿಲ್ಲಾಧ್ಯಕ್ಷ ಪ್ರಕಾಶ್ ಚೌವ್ಹಾಣ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ರಮೇಶ್ ರಾವ್, ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕುಮಾರ್ ಗೋವಿಂದ್ ಗಾಯಕ್ ವಾಡ್ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು