ಬೆಂಗಳೂರು: ಮುಂಬರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸುವಂತೆ ಕೆನಡಾ ಸಂಸತ್ತಿನಲ್ಲಿ ಕನ್ನಡ ಭಾಷಣ ಮಾಡಿದ ಚಂದ್ರ ಆರ್ಯ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಅವರು ಮನವಿ ಮಾಡಿದ್ದಾರೆ.
‘ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕೈಗೊಳ್ಳಲಾಗಿದೆ. 3 ದಿನಗಳ ನುಡಿಜಾತ್ರೆಯ ಮೊದಲ ದಿನತಾವು ವಿಶೇಷ ಅಥಿತಿಯಾಗಿ ಭಾಗವಹಿಸಿ, ಸಮಾರಂಭದ ಘನತೆ ಹೆಚ್ಚಿಸಬೇಕು’ ಎಂದು ಪತ್ರದಲ್ಲಿ ಕೋರಿದ್ದಾರೆ. ‘ಕೆನಡಾದಲ್ಲಿ ತಮ್ಮ ಮಾರ್ಗದರ್ಶನದಲ್ಲಿ ಪರಿಷತ್ತಿನ ಘಟಕ ಸ್ಥಾಪಿಸಲು ಉತ್ಸುಕರಾಗಿದ್ದೇವೆ’ ಎಂದು ಹೇಳಿದ್ದಾರೆ.