ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಶೇ. 99.9 ಗುರಿ ಸಾಧಿಸುವ ಮೂಲಕ ರಾಜ್ಯವಾರು ಸಾಧನೆ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನಲ್ಲಿದೆ.
ರಾಜ್ಯಾದ್ಯಂತ ಒಟ್ಟು 5,09,33,536 ಮಂದಿಗೆ ಮೊದಲ ಡೋಸ್ ಹಾಗೂ 4,13,15,765 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದು, ಆ ಮೂಲಕ ಒಟ್ಟು 9.26 ಕೋಟಿ ಡೋಸ್ ಲಸಿಕೆ ವಿತರಿಸಿದಂತಾಗಿದೆ.
15 ವರ್ಷ ಮೇಲ್ಪಟ್ಟ 5.9 ಕೋಟಿ ಮಂದಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, ದೇಶದಲ್ಲೇ ನಾವು ಮುಂಚೂಣಿಯಲ್ಲಿದ್ದೇವೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.
3.85 ಲಕ್ಷ ಮಂದಿ ಕೊರೊನಾ ಮುನ್ನೆಚ್ಚರಿಕೆ ಡೋಸ್ ಪಡೆದುಕೊಂಡಿದ್ದಾರೆ. 15ರಿಂದ 17 ವರ್ಷದೊಳಗಿನ 2.8 ಲಕ್ಷ ಮಕ್ಕಳು ಕೊವ್ಯಾಕ್ಸಿನ್ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ.
ನಾಲ್ಕು ಕೋಟಿಗಿಂತ ಹೆಚ್ಚು ಮಂದಿಗೆ ಮೊದಲ ಡೋಸ್ ಲಸಿಕೆ ವಿತರಿಸಲಾಗಿದೆ. ಆ ಮೂಲಕ ಶೇ. 100ರ ಗುರಿ ಸಾಧನೆ ಸಮೀಪಿಸುತ್ತಿದೆ. ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಕೊರೊನಾ ಮೊದಲ ಡೋಸ್ ವಿತರಣೆಯಲ್ಲಿ ಶೇ.100 ಗುರಿ ಸಾಧಿಸಿ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.