News Karnataka Kannada
Wednesday, April 24 2024
Cricket
ಬೆಂಗಳೂರು ನಗರ

ವೃತ್ತಿ ಶಿಕ್ಷಣ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಬೋಧಿಸಿ: ಟಿ.ಎಸ್.ನಾಗಾಭರಣ

Photo Credit :

ವೃತ್ತಿ ಶಿಕ್ಷಣ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಬೋಧಿಸಿ: ಟಿ.ಎಸ್.ನಾಗಾಭರಣ

ಬೆಂಗಳೂರು: ಆಗಸ್ಟ್ ಅಂತ್ಯದೊಳಗೆ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿಕೊಂಡು, ಈ ಸಾಲಿನ ಶೈಕ್ಷಣಿಕ ವರ್ಷ ಆರಂಭವಾದಾಗ ಅದನ್ನು ವೃತ್ತಿ ಶಿಕ್ಷಣ ಪದವಿ ವಿದ್ಯಾರ್ಥಿಗಳಿಗೆ ಬೋಧಿಸಬೇಕು. ಇಲ್ಲದಿದ್ದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಮುಂದಿನ ಹಾದಿಯನ್ನು ತುಳಿಯಬೇಕಾಗುತ್ತದೆ ಎಂದು ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕರಿಸಿದ್ದಪ್ಪ ಹಾಗೂ ಕುಲಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆಯ ಜಾಲ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಶೈಕ್ಷಣಿಕ ವರ್ಷದಲ್ಲಿಯೇ ಪರಿಷ್ಕೃತ ಕಡ್ಡಾಯ ಕನ್ನಡ ಪಠ್ಯಕ್ರಮವನ್ನು ಅಂಕಗಣನೆಯ ಆಧಾರದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಡೀಮ್ಡ್ ಇನ್ ವಿಶ್ವವಿದ್ಯಾಲಯ, ಸ್ವಾಯತ್ತ ವಿಶ್ವವಿದ್ಯಾಲಯ, ಖಾಸಗಿ ವಿಶ್ವವಿದ್ಯಾಲಯ ಹಾಗೂ ಅದರ ಅಧೀನ ವಿದ್ಯಾಲಯಗಳಲ್ಲಿ ಬೋಧಿಸುವ ಸಂಬಂಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಇದುವರೆಗೂ ಆ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈ ಬಾರಿಯ ಶೈಕ್ಷಣಿಕ ವರ್ಷದಿಂದ ಪರಿಷ್ಕೃತ ಕಡ್ಡಾಯ ಕನ್ನಡ ಪಠ್ಯಕ್ರಮವನ್ನು ಜಾರಿಗೊಳಿಸಿ ವಿದ್ಯಾರ್ಥಿಗಳಿಗೆ ಜ್ಞಾನ ವಿಸ್ತರಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಿಚಾರಧಾರೆಗಳನ್ನು ತಿಳಿಸಿಕೊಡುವಂತೆ ಸೂಚಿಸಿದರು.

ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬೋಧನೆ ಮಾಡುವುದರಿಂದ ಭಾಷಾ ಬೆಳವಣಿಗೆಯ ಜೊತೆಗೆ ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಯು ಹೆಚ್ಚಲಿದ್ದು, ಭಾಷಾಭಿಮಾನ ಬೆಳೆಯಲಿದೆ. ಎಲ್ಲ ವೃತ್ತಿ ಶಿಕ್ಷಣ ವಿಶ್ವವಿದ್ಯಾಲಯಗಳಲ್ಲಿ  ಎರಡು ಸೆಮಿಸ್ಟರ್ ನಲ್ಲಿ ಕನ್ನಡ ಬೋಧನೆಯನ್ನು ಕಡ್ಡಾಯವಾಗಿ ಮಾಡಲೇಬೇಕು. ಈ ಬಗ್ಗೆ ಮಾರ್ಚ್ ನಲ್ಲಿ ತಮಗೆ ಪತ್ರಮುಖೇನ ತಿಳಿಸಿದ್ದರೂ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದ ಜಾಲತಾಣದಲ್ಲಿಯೂ ಕೂಡ ಆಂಗ್ಲ ಭಾಷೆಯನ್ನು ಯಥೇಚ್ಛವಾಗಿ ಬಳಸಲಾಗಿದೆ. ಈ ಎಲ್ಲ ಕ್ರಮಗಳು ರಾಜ್ಯ ಸರ್ಕಾರದ ಕನ್ನಡ ಭಾಷಾ ನೀತಿಗೆ ವಿರುದ್ಧವಾಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾದರಿ ಜಾಲತಾಣವನ್ನು ರೂಪಿಸಿದ್ದು ಸರ್ಕಾರ ಅದಕ್ಕೆ ಮಾನ್ಯತೆ ನೀಡಿದಂತೆ ಈಗಾಗಲೇ 200ಕ್ಕೂ ಅಧಿಕ ಇಲಾಖೆಗಳು ಅದನ್ನು ಅಳವಡಿಸಿಕೊಂಡಿವೆ. ಅದರನ್ವಯ ವಿಶ್ವವಿದ್ಯಾಲಯವೂ ಕೂಡ ಕ್ರಮವಹಿಸಲಿ ಎಂದು ತಿಳಿಸಿದರು.  ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹೊಸ ಹೊಸ ಕನ್ನಡದ ಆಪ್ ಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆಗಳನ್ನು (ಪ್ರಾಜೆಕ್ಟ್) ನೀಡುವಂತೆ ಕುಲಪತಿಗಳಿಗೆ ಸಲಹೆ ನೀಡಿದರು.

ವಿಶ್ರಾಂತ ಕುಲಪತಿಗಳಾದ ಪ್ರೋ.ಹಿ.ಚಿ.ಬೋರಲಿಂಗಯ್ಯ ಅವರು ಮಾತನಾಡಿ, ನಮ್ಮ ಸಾಹಿತ್ಯ-ಸಂಸ್ಕೃತಿಯನ್ನು ಸರಳ ರೀತಿಯಲ್ಲಿ ತಿಳಿಸಿಕೊಡುವ ರೀತಿ ಪಠ್ಯಕ್ರಮ ರಚನೆಯಾಗಬೇಕಿದೆ. ಪ್ರಸ್ತುತ ಬೋಧಿಸಲಾಗುತ್ತಿರುವ ಕನ್ನಡದ ಪಠ್ಯಪುಸ್ತಕ ವೈಜ್ಞಾನಿಕ ಕ್ರಮದಲ್ಲಿ ರಚನೆಯಾಗಿಲ್ಲ. ಆದ್ದರಿಂದ ಕೂಡಲೇ ಉನ್ನತ ಮಟ್ಟದ ಸಮಿತಿಯಿಂದ ಪರಿಷ್ಕೃತಗೊಳಿಸಲಾಗಿರುವ ಪಠ್ಯಕ್ರಮವನ್ನು ತಮ್ಮ  ವಿಶ್ವವಿದ್ಯಾಲಯವು ಒಳಗೊಂಡಂತೆ   ಡೀಮ್ಡ್ ಇನ್ ವಿಶ್ವವಿದ್ಯಾಲಯ, ಸ್ವಾಯತ್ತ ವಿಶ್ವವಿದ್ಯಾಲಯ, ಖಾಸಗಿ ವಿಶ್ವವಿದ್ಯಾಲಯ ಹಾಗೂ ಅದರ ಅಧೀನ ವಿದ್ಯಾಲಯಗಳಲ್ಲಿ   ಬೋಧಿಸುವಂತೆ ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಸಿಎಂ ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ, ವಿಶ್ರಾಂತ ಕುಲಪತಿಗಳಾದ ಪ್ರೋ.ಹಿ.ಚಿ. ಬೋರಲಿಂಗಯ್ಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕರಿಸಿದ್ದಪ್ಪ, ಕುಲಸಚಿವರಾದ ದೇಶಪಾಂಡೆ, ಮೌಲ್ಯಮಾಪನ ಕುಲಸಚಿವರಾದ ಸತೀಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳಿಧರ, ವೆಬ್ ಪೋರ್ಟಲ್  ಯೋಜನಾಧಿಕಾರಿ ಸತೀಶ್, ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು