News Karnataka Kannada
Friday, April 19 2024
Cricket
ಬೆಂಗಳೂರು ನಗರ

ವಿಧಾನಸೌಧದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ

Siddaramaiah to contest from another constituency, to shift to Kolar, Badami
Photo Credit :

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು:

ನಿನ್ನೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಮತ್ತು ಅರುಣ್ ಸಿಂಗ್ ಅವರು ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರವನ್ನು ಹೊಗಳಿದ್ದಾರೆ. ಅರುಣ್ ಸಿಂಗ್ ಅವರು ಬೊಮ್ಮಾಯಿ ಅವರನ್ನು ಜನಸಾಮಾನ್ಯರ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಇದರರ್ಥ ಈ 40% ಕಮಿಷನ್ ಸರ್ಕಾರದ ಭ್ರಷ್ಟಾಚಾರಕ್ಕೆ ಅಮಿತ್ ಶಾ ಮತ್ತು ಅರುಣ್ ಸಿಂಗ್ ಅವರು ಅಧಿಕೃತ ಒಪ್ಪಿಗೆಯ ಮುದ್ರೆ ಒತ್ತಿದ್ದಾರೆ. ಇದು 40% ಕಮಿಷನ್ ಸರ್ಕಾರ ಎಂಬುದು ಜಗಜ್ಜಾಹಿರಾತಾಗಿದೆ. ಸರ್ಕಾರಿ ಕಾಮಗಾರಿಗಳಿಗೆ 40% ಕಮಿಷನ್ ಕೊಡಬೇಕು ಎಂದು ಗುತ್ತಿಗೆದಾರರ ಸಂಘದವರು, ಸ್ವಾಮೀಜಿಗಳು ಹೇಳಿದ್ದಾರೆ. ಒಬ್ಬ ಗುತ್ತಿಗೆದಾರ ಕಮಿಷನ್ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗೋಶಾಲೆಗೆ ಮೇವು ಖರೀದಿಗೆ, ಬಿಬಿಎಂಪಿ ಕಾಮಗಾರಿಗಳಿಗೂ 40% ಕಮಿಷನ್ ಕೊಡಬೇಕು. ಇದು ಭ್ರಷ್ಟ ಸರ್ಕಾರ ಎಂದು ಜನಸಾಮಾನ್ಯರ ಬಾಯಿಯಲ್ಲಿ ಬರುತ್ತಿದೆ, ಈ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಕುಮ್ಮಕ್ಕು ಕೊಡುತ್ತಿದೆ.

7/6/2021 ರಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದಾಗಿ ಸುಮಾರು ಹತ್ತು ತಿಂಗಳಾದ್ರೂ ಈ ವರೆಗೆ ಅವರು ತನಿಖೆಯನ್ನು ನಡೆಸಿಲ್ಲ, ರಾಜ್ಯ ಸರ್ಕಾರದಿಂದ ವರದಿ ಪಡೆಯುವ ಕೆಲಸವನ್ನು ಮಾಡಿಲ್ಲ. ಮೋದಿಯವರು ಕಳೆದ ಚುನಾವಣೆಯಲ್ಲಿ ನಮ್ಮ ಸರ್ಕಾರವನ್ನು ಹತ್ತು ಪರ್ಸೆಂಟ್ ಸರ್ಕಾರ ಎಂದು ಆಧಾರ ರಹಿತ ಆರೋಪ ಮಾಡಿದ್ದರು. ಈಗ ಪ್ರಧಾನಿಗಳು ಈ ಸರ್ಕಾರಕ್ಕೆ 40% ಕಮಿಷನ್ ಪಡೆಯಲು ಪರವಾನಗಿ ಕೊಟ್ಟಿದ್ದಾರ?
“ನ ಖಾವೂಂಗಾ, ನ ಖಾನೇದೂಂಗ” ಎಂದು ಹೇಳಿ ಜನರ ಕಣ್ಣೊರೆಸುತ್ತಾ, ಭ್ರಷ್ಟಾಚಾರಕ್ಕೆ ಪ್ರಧಾನಿಗಳು ಬೆಂಬಲವಾಗಿ ನಿಂತಿದ್ದಾರೆ.

ಪಿಎಸ್‌ಐ ನೇಮಕಾತಿಯಲ್ಲಿ ಸುಮಾರು 1,29,000 ಜನ ಅರ್ಜಿ ಹಾಕಿದ್ದಾರೆ. ಅದರಲ್ಲಿ 57,000 ಜನರಿಗೆ ಪರೀಕ್ಷೆಗೆ ಅರ್ಹರು ಎಂದು ಪರೀಕ್ಷೆ ಬರೆಯಲು ಕರೆದಿದ್ದರು. ಅದರಲ್ಲಿ 545 ಜನರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಮಾಡಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸರ್ಕಾರವೇ ಒಪ್ಪಿಕೊಂಡು ಪರೀಕ್ಷೆ ರದ್ದು ಮಾಡಿ, ಮರು ಪರೀಕ್ಷೆ ಮಾಡುವುದಾಗಿ ಹೇಳಿದೆ. ಈ ನೇಮಕಾತಿ ಸಮಿತಿಯ ನೇತೃತ್ವ ವಹಿಸಿದ್ದ ಅಮೃತ್ ಪೌಲ್ ಎಂಬ (ಎಡಿಜಿಪಿ) ಹಿರಿಯ ಪೊಲೀಸ್ ಅಧಿಕಾರಿಯನ್ನು ಸರ್ಕಾರ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಿದೆ. ಇನ್ನೊಬ್ಬರು ಶಾಂತ ಕುಮಾರ್ ಎಂಬ ಡಿವೈಎಸ್‌ಪಿ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಇದರಿಂದ ಈ ಇಬ್ಬರೂ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಅಮಾನತ್ತು ಮಾಡಬೇಕಿತ್ತು. ರಾಜಕಾರಣಿಗಳು, ಅಧಿಕಾರಿಗಳು, ಸರ್ಕಾರ ಭಾಗಿಯಾಗದೆ ಇಂಥದ್ದೊಂದು ಭ್ರಷ್ಟಾಚಾರ ಮಾಡಲು ಸಾಧ್ಯವಾಗಲ್ಲ.

ಕಲಬುರಗಿಯ ಜ್ಞಾನಜ್ಯೋತಿ ಸಂಸ್ಥೆ ಪಿಎಸ್‌ಐ ಪರೀಕ್ಷೆ ನಡೆಸಲು ಯೋಗ್ಯವಾದ ಪರೀಕ್ಷಾ ಕೇಂದ್ರವಾಗಿರಲಿಲ್ಲ ಎಂಬ ವರದಿಯನ್ನು ನಮ್ಮ‌ ಶಾಸಕರಾದ ಪ್ರಿಯಾಂಕ್ ಖರ್ಗೆಯವರು ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ. ಪರೀಕ್ಷಾ ಕೇಂದ್ರ ಆಯ್ಕೆ ಮಾಡುವವರು ಸ್ಥಳೀಯ ಪೊಲೀಸರು. ಯೋಗ್ಯವಲ್ಲದ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿದ್ದಾರೆ ಎಂದರೆ ಪರೀಕ್ಷೆಗೆ ಮುನ್ನ ವ್ಯವಹಾರ ನಡೆದಿದೆ ಎಂದರ್ಥ. ದಿವ್ಯಾ ಹಾಗರಗಿ, ಆರ್.ಡಿ ಪಾಟೀಲ್ ರನ್ನು ಕಿಂಗ್ ಪಿನ್ ಎಂದು ಹೇಳಿ ಬಂಧಿಸಿದ್ದಾರೆ. ಈ ವರೆಗೆ ಸುಮಾರು 29 ಜನ ತಪ್ಪಿತಸ್ಥರ ಬಂಧನವಾಗಿದೆ. ಹಗರಣದಲ್ಲಿ ಭಾಗಿಯಾದ ಈ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಯಾಕೆ ಕೇಸ್ ದಾಖಲಿಸಿಲ್ಲ ಮತ್ತು ಅಗತ್ಯ ಕಾನೂನು ಕ್ರಮ ಜರುಗಿಸಿಲ್ಲ?

ಇಷ್ಟು ದೊಡ್ಡ ಹಗರಣಕ್ಕೆ ಸರ್ಕಾರ ಮತ್ತು ಗೃಹ ಸಚಿವರೇ ಹೊಣೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬೇಜವಾಬ್ದಾರಿತನಕ್ಕೆ ಉದಾಹರಣೆ ಎಂದರೆ ನೊಂದ ಅಭ್ಯರ್ಥಿಗಳು ಪೊಲೀಸ್ ಡಿಜಿ ಅವರಿಗೆ 25/1/2022 ರಲ್ಲಿ ಪತ್ರ ಬರೆದಿದ್ದಾರೆ. ಆಗ ಯಾವ ಕ್ರಮ ತೆಗೆದುಕೊಂಡಿಲ್ಲ. ಫೆಬ್ರವರಿ 3 ರಂದು ಪಶು ಸಂಗೋಪನೆ ಸಚಿವರಾದ ಪ್ರಭು ಚೌಹಾನ್ ಅವರು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಮತ್ತು ಪರೀಕ್ಷೆ ಒಂದು ಮತ್ತು ಎರಡರಲ್ಲಿ ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರ ತಾಲೂಕು ಒಂದರಲ್ಲೆ 43 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಈ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ, ಸರ್ಕಾರ ಕೂಡಲೇ ತನಿಖೆಗೆ ಆದೇಶ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಸಂಕನೂರ ಎಂಬ ಬಿಜೆಪಿಯ ಪರಿಷತ್ ಸದಸ್ಯರು 15/3/2022 ರಲ್ಲಿ ಪತ್ರ ಬರೆದು ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳು ಬ್ಲೂಟೂಥ್ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದಾರೆ, ಇನ್ನು ಕೆಲವು ವಿದ್ಯಾರ್ಥಿಗಳು ಬಹಳಷ್ಟು ಚೆನ್ನಾಗಿ ಪರೀಕ್ಷೆ ಬರೆದರೂ ಆಯ್ಕೆಯಾಗಿಲ್ಲ ಎಂಬ ನೋವು ಇದೆ. ಈ ಅಕ್ರಮದಲ್ಲಿ ಯಾದಗಿರಿಯ ಒಬ್ಬ ವ್ಯಕ್ತಿ ಸೂತ್ರಧಾರನಾಗಿದ್ದಾನೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ ಎಂದು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

10/2/2022 ರಲ್ಲಿ ಶಶಿಲ್ ನಮೋಶಿ ಎಂಬ ಪರಿಷತ್ ಸದಸ್ಯರು ಪರಿಷತ್ ನಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಪರೀಕ್ಷೆಗಳನ್ನು ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ನಡೆಸಲಾಗಿದೆ ಎಂದು ಗೃಹ ಸಚಿವರು ಉತ್ತರ ನೀಡಿದ್ದಾರೆ.

ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾಯಿತ ಪ್ರತಿನಿಧಿ ಎಸ್. ರವಿ ಎಂಬುವವರಿಗೆ ಅದೇ ದಿನ ನೀಡಿರುವ ಉತ್ತರದಲ್ಲಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಐದು ಅಭ್ಯರ್ಥಿಗಳು ದೂರು ನೀಡಿದ್ದಾರೆ, ಈ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಅವರವರ ಅರ್ಹತೆಯ ಮೇಲೆ ಅಂಕ ಪಡೆದಿರುವುದು ಕಂಡುಬಂದಿರುತ್ತದೆ. ಹೀಗಾಗಿ ದೂರು ಅರ್ಜಿಗಳಲ್ಲಿ ತಿಳಿಸಿರುವಂತೆ ಯಾವುದೇ ಅಕ್ರಮ ನಡೆದಿರುವುದಿಲ್ಲ ಎಂದು ಹೇಳಲಾಗಿದೆ.
ನಮ್ಮ ಪಕ್ಷದ ಪರಿಷತ್ ಸದಸ್ಯರಾದ ಯು.ಬಿ ವೆಂಕಟೇಶ್ ಅವರ ಪ್ರಶ್ನೆಗೆ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನೀಡಿಲ್ಲ ಎಂದು ಉತ್ತರ ನೀಡಿದ್ದಾರೆ. ಒಟ್ಟಾರೆ ಈ ಪ್ರಕರಣದಲ್ಲಿ ತನಿಖೆ ನಡೆಸುವ ಮೊದಲೇ ತೀರ್ಪು ಕೊಟ್ಟಿದ್ದಾರೆ.

ಈಗ ನೋಡಿದ್ರೆ ಅಕ್ರಮ ನಡೆದಿರುವುದು ಕಂಡುಬಂದು ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಮಾಡಿ, ಮರು ಪರೀಕ್ಷೆಗೆ ಆದೇಶ ಮಾಡಿದ್ದಾರೆ. ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಹಿಂದೆ ಗೃಹ ಸಚಿವರು ಈ ರೀತಿ ಉತ್ತರ ನೀಡಿದ್ದಾರೆ ಎಂದರೆ ಇವರು ತಮ್ಮ ಹುದ್ದೆಯಲ್ಲಿ ಮುಂದುವರೆಯಲು ಲಾಯಕ್ಕಾ? ಅಮಿತ್ ಶಾ ಅವರು ಬಂದು ಬೆನ್ನು ತಟ್ಟಿ ಹೋಗುವ ಬದಲು ಆರಗ ಜ್ಞಾನೇಂದ್ರ ವಿರುದ್ಧ ಕ್ರಮ ಕೈಗೊಳ್ಳಲು ಹೇಳಬೇಕಿತ್ತು. ನನ್ನ ಪ್ರಕಾರ ಆರಗ ಜ್ಞಾನೇಂದ್ರ ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡಬೇಕು.

ಈ ಹಗರಣದಲ್ಲಿ ಭಾಗಿಯಾಗಿ ವರ್ಗಾವಣೆಗೊಂಡ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಇವರ ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಅಧಿಕಾರಿಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕು.

ಇದೊಂದೆ ಇಲಾಖೆ ಅಲ್ಲ, ಸರ್ಕಾರದ ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ, ಅಕ್ರಮಗಳು ನಡೆದಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಹ ಪ್ರಾಧ್ಯಾಪಕ ಹುದ್ದೆ ನೇಮಕದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನಾಗರಾಜ್ ಮತ್ತು ಸೌಮ್ಯ ಎಂಬುವವರನ್ನು ಬಂಧಿಸಲಾಗಿದೆ. ಇದರಲ್ಲಿ ಉನ್ನತ ಶಿಕ್ಷಣ ಸಚಿವರ ಪಾತ್ರ ಏನು? ಈ ಕೂಡಲೇ ಸಚಿವ ಅಶ್ವಥ್ ನಾರಾಯಣ ಅವರನ್ನು ವಜಾ ಮಾಡಬೇಕು.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಅಶ್ವಥ್ ನಾರಾಯಣ ಅವರ ಪಾತ್ರವಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪರೀಕ್ಷೆಯಲ್ಲಿ 5 ನೇ ರ‌್ಯಾಂಕ್ ಬಂದಿರುವ ದರ್ಶನ್ ಗೌಡ ಹಾಗೂ 10ನೇ ರ‌್ಯಾಂಕ್ ಬಂದಿರುವ ನಾಗೇಶ್ ಗೌಡ ಎಂಬುವವರು ಅಶ್ವಥ್ ನಾರಾಯಣ ಅವರ ಸಂಬಂಧಿಕರು. ಈ ಇಬ್ಬರನ್ನು ವಿಚಾರಣೆಗೆ ಕರೆದು ಬಿಟ್ಟು ಕಳಿಸಿದ್ದಾರೆ. ಉಳಿದವರ ಬಂಧನವಾಗಿದೆ, ಈ ಇಬ್ಬರ ಬಂಧನ ಯಾಕೆ ಆಗಿಲ್ಲ? ಅಶ್ವಥ್ ನಾರಾಯಣ ಅವರ ಮೇಲೆ ಭ್ರಷ್ಟಾಚಾರದ ತೂಗುಗತ್ತಿ ನೇತಾಡುತ್ತಿದೆ. ಕೂಡಲೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು.

ಈ ಹಗರಣದಲ್ಲಿ ಸರ್ಕಾರ, ಮಂತ್ರಿಗಳು ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ, ಸುಮಾರು ರೂ. 300 ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ. ಆದ್ದರಿಂದ ಸಿಐಡಿ ತನಿಖೆಯಲ್ಲಿ ನ್ಯಾಯ ಸಿಗುವುದಿಲ್ಲ ಹಾಗಾಗಿ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು.

ಇದು ಜನಸಾಮಾನ್ಯರ ಪೀಡಕ, ಜನಸಾಮಾನ್ಯರ ಸುಲಿಗೆ ಸರ್ಕಾರ. ನರೇಂದ್ರ ಮೋದಿ ಅವರು ನಾಟಕ ಮಾಡುವುದನ್ನು ಬಿಟ್ಟು ಭ್ರಷ್ಟಾಚಾರದ ತನಿಖೆ ಮಾಡಿಸಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು