News Karnataka Kannada
Wednesday, April 24 2024
Cricket
ಬೆಂಗಳೂರು ನಗರ

ವಾಸಯೋಗ್ಯ ವಾತಾವರಣವನ್ನು ನಿರ್ಮಿಸಿ: ಹೋರಾಟಗಾರರ ಒತ್ತಾಯ

Photo Credit :

ವಾಸಯೋಗ್ಯ ವಾತಾವರಣವನ್ನು ನಿರ್ಮಿಸಿ: ಹೋರಾಟಗಾರರ ಒತ್ತಾಯ

ಬೆಂಗಳೂರು: ಇತ್ತೀಚಿಗೆ ಹೋರಾಟಗಾರರ ತೀವ್ರ ಪ್ರತಿಭಟನೆಯ ನಡುವೆಯೂ ರಾಜ್ಯ ಸರಕಾರವು ಬನ್ನೇರುಘಟ್ಟ ಸುತ್ತಲಿನ ಪರಿಸರ ಸೂಕ್ಷ್ಮವಲಯವನ್ನು ತೆಗೆದುಹಾಕಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಈ ವಲಯವನ್ನು 100 ಚದರ ಕಿಲೋಮೀಟರ್‍ಗೆ ಇಳಿಸುವಂತೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪರಿಸರವಾದಿಗಳು ಇದು ನಗರದ ಪರಿಸರ ಸಮತೋಲನವನ್ನ ಹಾಳುಗೆಡವುತ್ತದೆ ಎಂದಿದ್ದಾರೆ.

ನಗರದಲ್ಲಿ ಮಾಲಿನ್ಯಮಟ್ಟವು ಗಂಭೀರ ಪ್ರಮಾಣದಲ್ಲಿ ಏರಿಕೆ ಕಾಣುವ ಸಾಧ್ಯತೆಯಿದ್ದು, ಜನರಿಗೆ ವಾಸಯೋಗ್ಯವಲ್ಲದ ರೀತಿಗೆ ನಗರವನ್ನು ದೂಡುತ್ತಿರುವುದಕ್ಕೆ  ಸರಕಾರದ ನಿಲುವನ್ನು ದೂರುತ್ತಿದ್ದಾರೆ. ಭಾರತದ ಸಂವಿಧಾನದಲ್ಲಿ ತಿಳಿಸಲಾಗಿರುವಂತೆ ಜನರಿಗೆ ಉತ್ತಮ ಗಾಳಿ ಹಾಗೂ ವಾಸಯೋಗ್ಯ ಪರಿಸರವನ್ನು ದೊರಕಿಸಿಕೊಡುವುದು ಸರಕಾರದ ಕರ್ತವ್ಯ ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸಯನ್ಸ್ ನ ಪ್ರಾಧ್ಯಾಪಕ ಡಾ. ಟಿ.ವಿ. ರಾಮಚಂದ್ರ ಅವರ ಪ್ರಕಾರ ‘ಭಾರತದ ಸಂವಿಧಾನವು ಆರೋಗ್ಯಕರ ಮತ್ತು ಮಾಲಿನ್ಯ ರಹಿತ ಪರಿಸರವನ್ನು ಪಡೆಯುವ ಹಕ್ಕು ನಾಗರಿಕರಿಗೆ ನೀಡಿದೆ. ಪರಿಸರದಲ್ಲಿ ಮಾಲಿನ್ಯವು ಹೆಚ್ಚುವ ಮೂಲಕ ತಮ್ಮ ಆರೋಗ್ಯಕ್ಕೆ ಸಂಚಕಾರ ಬರುತ್ತದೆ, ಹೀಗಾಗಿ ಸರಕಾರದ ನಿರ್ಧಾರದ ವಿರುದ್ಧ ನಾಗರಿಕರು ಕೋರ್ಟಿನ ಮೊರೆ ಹೋಗುವ ಅವಕಾಶವಿದೆ ಎಂಬ ಬಗ್ಗೆ ಜನರಲ್ಲಿ ಅರಿವು ಅಗತ್ಯ’ ಎನ್ನುತ್ತಾರೆ.

ಈಗಾಗಲೇ ಹೊಸದಾಗಿ ಪ್ರಸ್ತಾವಿತ ಉಕ್ಕಿನ ಸೇತುವೆ (ಸ್ಟೀಲ್ ಬ್ರಿಡ್ಜ್) ಕೂಡಾ ನಗರದಲ್ಲಿರುವ ಹಸಿರು ಪ್ರದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದರ ಜೊತೆಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತವು ರಸ್ತೆ ಅಗಲೀಕರಣಕ್ಕಾಗಿ ಉದ್ದೇಶಿಸಿದ್ದು, 8500 ಮರಗಳನ್ನು ನೆಲಕ್ಕುರುಳಿಸಲು ಯೋಜನೆ ರೂಪಿಸಿದ್ದು, ಈ ಸಂಖ್ಯೆಯು 10 ಸಾವಿರದ ಗಡಿಯನ್ನು ದಾಟಬಹುದು ಎಂದು ಅಂದಾಜಿಸಲಾಗಿದೆ. ಇದು ಪರಿಸರವಾದಿಗಳು ಹಾಗೂ ನಾಗರಿಕರ ಕೋಪಕ್ಕೆ ಕಾರಣವಾಗಿದೆ.

ನಾಗರಿಕ ಹಕ್ಕುಗಳ ಹೋರಾಟಗಾರ ಸಂದೀಪ್ ಅನಿರುದ್ಧನ್ ಅವರು ನಾಗರಿಕರು ಜಾಗೃತಗೊಳ್ಳುತ್ತಿಲ್ಲ ಅಥವಾ ನಾಗರಿಕರಿಗೆ ಯಾವುದೇ ಅಧಿಕಾರವಿಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸರಕಾರದ ದೈನದಿಂದ ಆಡಳಿತದಲ್ಲಿ, ನೀತಿನಿಯಮಗಳನ್ನು ರೂಪಿಸುವಲ್ಲಿ ನಾಗರಿಕರಿಂದ ಯಾವುದೇ ಸಲಹೆ, ಸೂಚನೆಗಳನ್ನು ಪಡೆಯದಿರುವುದು ಹಾಗೂ ಜನರನ್ನು ಅಧಿಕಾರ ವ್ಯವಸ್ಥೆಯಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಮೂಲಕ ತಮ್ಮ ಹಕ್ಕುಗಳಿಂದ ವಂಚಿಸಲಾಗುತ್ತಿದೆ ಎನ್ನುತ್ತಾರವರು.

ಪರಿಸರ (ಸಂರಕ್ಷಣೆ) ಕಾಯ್ದೆ–1986ರ ಪ್ರಕಾರ ಜನರ ವಾಸದ ಪರಿಸರದ ರಕ್ಷಣೆ ಮತ್ತು ಸುಧಾರಣೆ, ಜನರ ಮತ್ತು ಇತರ ಜೀವಿಗಳಿಗೆ, ಸಸ್ಯಗಳಿಗೆ ಮತ್ತು ಆಸ್ತಿಗಳಿಗೆ ಅಪಾಯವಾಗದಂತೆ ತಡೆಗಟ್ಟಲು ಸೂಕ್ತಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತ ಸರಕಾರಕ್ಕೆ ಆದೇಶಿಸುತ್ತದೆ. ಭಾರತ ಸಂವಿಧಾನದ ಮೂಲಭೂತ ಕರ್ತವ್ಯಗಳ, ಪರಿಚ್ಛೇದ 51-ಎ (ಜಿ) ಪ್ರಕಾರ ಕಾಡುಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಮತ್ತು ಅಭಿವೃದ್ಧಿಪಡಿಸುವುದು ಮತ್ತು ಇತರ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಿರುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ಸಂವಿಧಾನದ ನಿರ್ದೇಶನ ತತ್ವಗಳು ಉತ್ತಮ ವಾತಾವರಣವನ್ನು ನಿರ್ವಹಿಸಬೇಕೆಂದು ಸರಕಾರಕ್ಕೆ ನಿರ್ದೇಶಿಸುತ್ತದೆ. ಪರಿಚ್ಛೇದ 47 ಪ್ರಕಾರ ಸಾರ್ವಜನಿಕರ ಆರೋಗ್ಯವನ್ನು ಸುಧಾರಿಸುವ ಕುರಿತಾಗಿ ವಿವರಿಸುತ್ತದೆ. ಪರಿಸರದ ರಕ್ಷಣೆ ಹಾಗೂ ಸುಧಾರಣೆಯು ಇದನ್ನೊಳಗೊಂಡಿದ್ದು, ಇಲ್ಲವಾದಲ್ಲಿ ಸಾರ್ವಜನಿಕ ಆರೋಗ್ಯ ಎಂಬುದು ಮರೀಚಿಕೆಯಾಗುತ್ತದೆ. ಸಂವಿಧಾನದ ಪರಿಚ್ಛೇದ – 48 ಎ ಯಲ್ಲಿ ತಿಳಿಸಲಾಗಿರುವಂತೆ ಸರಕಾರವು “ದೇಶದ ಪರಿಸರವನ್ನು ರಕ್ಷಿಸಲು ಮತ್ತು ಸುಧಾರಿಸಲು ಮತ್ತು ದೇಶದ ಕಾಡುಗಳು ಹಾಗೂ ವನ್ಯಜೀವಿಗಳನ್ನು ರಕ್ಷಿಸಲು ಪ್ರಯತ್ನಿಸಬೇಕು”.

ಸಂವಿಧಾನದ 19 ಮತ್ತು 21ನೇ ಪರಿಚ್ಛೇದದಡಿ ಬರುವ ಮೂಲಭೂತ ಹಕ್ಕುಗಳಡಿಯಲ್ಲಿ ನಾಗರಿಕರಿಗೆ ಪರಿಸರವನ್ನು ಸ್ವಚ್ಛಗೊಳಿಸುವ ಹಕ್ಕನ್ನು ಕೂಡಾ ನೀಡುತ್ತದೆ. ಸಂವಿಧಾನದ ಪರಿಚ್ಛೇದ 19 (1) (ಜಿ) ಯಂತೆ ಪ್ರತಿಯೊಬ್ಬ ನಾಗರಿಕನಿಗೂ ಯಾವುದೇ ರೀತಿಯ ವೃತ್ತಿ, ಅಥವಾ ಯಾವುದೇ ಉದ್ಯೋಗ, ವ್ಯಾಪಾರ ಅಥವಾ ಉದ್ಯಮ ನಡೆಸಲು ಅವಕಾಶ ನೀಡಿದೆಯಾದರೂ, ಸಮಾಜದ ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಯಾವುದೇ ಉದ್ಯೋಗ, ಉದ್ಯಮ, ವ್ಯವಹಾರ ಚಟುವಟಿಕೆಯನ್ನು ನಡೆಸುವಂತಿಲ್ಲ.

ಪರಿಚ್ಛೇದ 21 ವ್ಯಕ್ತಿಯ ಜೀವಿಸುವ ಮತ್ತು ಅಪಾಯಕಾರಿ ಖಾಯಿಲೆಗಳು ಮತ್ತು ಸೋಂಕಿನಿಂದ ಮುಕ್ತವಾಗಿರುವ ಪರಿಸರದ ಹಕ್ಕನ್ನು ಖಾತರಿಪಡಿಸುತ್ತದೆ. ಆರೋಗ್ಯಕರ ಪರಿಸರದ ಹಕ್ಕು ವ್ಯಕ್ತಿಯು ಘನತೆಯಿಂದ ಜೀವಿಸುವ ಹಕ್ಕಿನ ಭಾಗವಾಗಿದೆ ಮತ್ತು ಇದು ಪರಿಚ್ಛೇದ 21ಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂಬುದು ಎಂ.ಸಿ. ಮೆಹ್ತಾ ವರ್ಸಸ್ ಕೇಂದ್ರ ಸರಕಾರ ಪ್ರಕರಣದಿಂದ ಸಾಬೀತಾಗಿದೆ. ಈ ಪ್ರಕರಣದಲ್ಲಿ ಮಾಲಿನ್ಯಮುಕ್ತ ವಾತಾವರಣದಲ್ಲಿ ಬದುಕುವುದು ಪರಿಚ್ಛೇದ 21ರನ್ವಯ ವ್ಯಕ್ತಿಯ ಮೂಲಭೂತ ಹಕ್ಕಾಗಿದೆ ಎಂಬುದಾಗಿ ಸುಪ್ರಿಂ ಕೋರ್ಟು ತೀರ್ಪು ನೀಡಿತ್ತು.

ಸುಪ್ರೀಂ ಕೋರ್ಟಿನ ತೀರ್ಪುಗಳು, ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು ಪರಿಸರವನ್ನು ಸಂರಕ್ಷಿಸಲು ಸಂವಿಧಾನದಲ್ಲಿರುವ ಮಾರ್ಗಸೂಚಿಗಳಿದ್ದರೂ, ರಾಜ್ಯ ಹಾಗೂ ಕೇಂದ್ರ ಸರಕಾರಗಳು, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಅನೇಕಾರು ಇಲಾಖೆಗಳು ಪರಿಸರ ಸಂರಕ್ಷಣೆಯ ವಿಷಯದಲ್ಲಿ ಸಾಕಷ್ಟು ಕೆಲಸ ಮಾಡಿಲ್ಲವೆಂದು ತಜ್ಞರು ಅಭಿಪ್ರಾಯಪಡುತ್ತಾರೆ.

‘ಕಾಯಿದೆ, ಕಾನೂನುಗಳು ಅಂಗೀಕಾರಗೊಳ್ಳುತ್ತಲೇ ಇರುತ್ತದೆಯಾದರೂ ಅದರ ಅನುಷ್ಠಾನ ಹಾಗೂ ನಾಗರಿಕರ ಪಾಲ್ಗೊಳ್ಳುವಿಕೆಯು ಕಾಣಿಸುತ್ತಿಲ್ಲ’ ಎನ್ನುತ್ತಾರೆ ಪರಿಸರವಾದಿ ಅನಿರುದ್ಧನ್. “ನಾಗರಿಕರು ತಮ್ಮನ್ನು ತಾವು ಸ್ಥಳೀಯಮಟ್ಟದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವಂತಾಗದಿದ್ದರೆ ಸಂವಿಧಾನವನ್ನು ಆಶಯಗಳಿಗೆ ವಿರುದ್ಧವಾಗುತ್ತದೆ. ಆಡಳಿತದೊಂದಿಗೆ ತೊಡಗಿಸಿಕೊಳ್ಳುವ ಸಂಸ್ಕøತಿಯನ್ನು ನಮ್ಮ ದೇಶದಲ್ಲಿ ಎಂದಿಗೂ ಬೆಳೆಸಲಾಗಿಲ್ಲ, ಇದರಿಂದಾಗಿ ಜನರಿಗೆ ಮತ್ತು ಸರಕಾರ ಅಥವಾ ಆಡಳಿತ ಬಗ್ಗೆ ನಿರುತ್ಸಾಹಕ್ಕೆ ಕಾರಣವಾಗುತ್ತದೆ ಮತ್ತು ಪರಸ್ಪರ ಸಂಪರ್ಕ ಸಂವಹನವೂ ಕಡಿಮೆಯಾಗುತ್ತದೆ” ಎನ್ನುತ್ತಾರವರು.

ಇಕಾಲಜಿಕಲ್ ಸೆಕ್ಯುರಿಟಿ ಆಫ್ ಇಂಡಿಯಾದ ಆಡಳಿತ ಮಂಡಳಿ ಸದಸ್ಯರಾದ ಡಾ. ಯಲ್ಲಪ್ಪ ರೆಡ್ಡಿಯವರ ಪ್ರಕಾರ ‘ರಸ್ತೆ, ಮೂಲಸೌಕರ್ಯ ಅಥವಾ ಇನ್ನಿತರ ಯಾವುದೇ ಯೋಜನೆಗಳನ್ನು ಆರಂಭಿಸುವ ಮುನ್ನ ಅಲ್ಲಿನ ಪರಿಸರದ ಮೇಲಾಗುವ ಪ್ರಭಾವದ ಕುರಿತಾಗಿ ಮೌಲ್ಯಮಾಪನಗಳನ್ನು ನಡೆಸಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಅಂತಹ ಯಾವುದೇ ಮೌಲ್ಯಮಾಪನ, ಮುಂದಾಲೋಚನೆಗಳು ಕಾಣಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ತನ್ನ ಜವಾಬ್ದಾರಿಯನ್ನು ನಿಭಾಯಿಸಲಾಗದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ)ಯು ದೂರುತ್ತಾ ‘ಸಂಸ್ಥೆಯು ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲವೆಂದು’ ಟೀಕಿಸಿದ್ದಾರೆ.

ಪರಿಸರವಾದಿ ವಿಜಯ್ ನಿಶಾಂತ್ ಅವರು ‘ತಮ್ಮ ಹಕ್ಕುಗಳ ಪ್ರಾಮುಖ್ಯತೆ ಬಗ್ಗೆ ಜನರು ಚೆನ್ನಾಗಿ ತಿಳಿದುಕೊಂಡಿರಬೇಕು. ಇಂತಹ ವಿಷಯಗಳಲ್ಲಿನ ನಿರ್ಲಕ್ಷ್ಯವೇ ಇಲ್ಲಿ ದೊಡ್ಡ ಮಟ್ಟಿನಲ್ಲಿ ಅಪಾಯಗಳಿಗೆ ಕಾರಣವಾಗುತ್ತಿದೆ’ ಎನ್ನುತ್ತಾರೆ.

‘ಒಂದೇ ಒಂದು ಮರವನ್ನು ಕತ್ತರಿಸಲು ಕೂಡಾ ಸರಕಾರಕ್ಕೆ ಜನರ ಅನುಮತಿ ಬೇಕೆಂಬುದು ಜನರಿಗೆ ತಿಳಿದಿರಬೇಕು. ಬೆಂಗಳೂರಿನ ನಾಗರಿಕರು ತಮ್ಮ ಆರೋಗ್ಯಕರ ಪರಿಸರದಲ್ಲಿ ಬದುಕುವ ಹಕ್ಕಿಗಾಗಿ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ತಾವೇ ಸ್ವಯಂ ಆಗಿ ಮುಂದೆ ಬಂದು ಪ್ರತಿಭಟಿಸಬೇಕು ಮತ್ತು ಕಾನೂನಿನ ದಾರಿಯ ಮೂಲಕ ತಮ್ಮ ಹಕ್ಕುಗಳನ್ನು ಸಾಬೀತುಗೊಳಿಸಬೇಕು’ ಎನ್ನುತ್ತಾರೆ ನಿಶಾಂತ್.

(ಲೇಖಕರು ಬೆಂಗಳೂರು ಮೂಲದ ಹವ್ಯಾಸಿ ಬರಹಗಾರರು ಹಾಗೂ ಭಾರತೀಯ ವರದಿಗಾರರ ಸಂಪರ್ಕ ಜಾಲವಾಗಿರುವ 101reporters.com ನ ಸದಸ್ಯರು)

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು