News Karnataka Kannada
Saturday, April 20 2024
Cricket
ಬೆಂಗಳೂರು ನಗರ

ವಾಯುಮಾಲಿನ್ಯ: ಅಪಾಯದಿಂದ ಪಾರಾಗುವುದು ಅಸಾಧ್ಯ

Photo Credit :

ವಾಯುಮಾಲಿನ್ಯ: ಅಪಾಯದಿಂದ ಪಾರಾಗುವುದು ಅಸಾಧ್ಯ

ಬೆಂಗಳೂರು:  ವೈಟ್‍ಕಾಲರ್ ಉದ್ಯೋಗಿಗಳು ಸಾಮಾನ್ಯವಾಗಿ ವಾಯುಮಾಲಿನ್ಯದ ಬಗ್ಗೆ ಅಸಡ್ಡೆ ಹೊಂದಿರುತ್ತಾರೆ. ಅದಕ್ಕೆ ಕಾರಣವೂ ಇಲ್ಲವೆಂದಿಲ್ಲ. ಮನೆಯಿಂದ ಹೊರಟು ಎಸಿ ಕ್ಯಾಬ್‍ಗಳ ಮೂಲಕ ಕಚೇರಿ ತಲುಪಿ ಅಲ್ಲಿಯೂ ಎಸಿ ಕೊಠಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಮಾಲಿನ್ಯ ಬಾಧಿಸದು ಎಂಬ ಕಲ್ಪನೆ ಅವರಲ್ಲಿ ಸಾಮಾನ್ಯವಾಗಿರುತ್ತವೆ. ಆದಾಗ್ಯೂ ಅಧ್ಯಯನ ವರದಿಗಳ ಪ್ರಕಾರ ವೈಟ್‍ಕಾಲರ್ ಉದ್ಯೋಗಿಗಳೇ ವಾಯುಮಾಲಿನ್ಯದಿಂದ ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆಂದು ಅಂಕಿಸಂಖ್ಯೆಗಳು ಲೆಕ್ಕಕೊಡುತ್ತಿವೆ.

ಕ್ಯಾಲಿಫೋರ್ನಿಯಾ ಮೂಲದ ವಿಶ್ವವಿದ್ಯಾಲಯವೊಂದರ ವರದಿಯ ಪ್ರಕಾರ ಕಾರುಗಳ ಒಳಭಾಗದಲ್ಲಿ ಮಾಲಿನ್ಯಕಾರಕಗಳ ಮಟ್ಟವು ಯಾವಾಗಲೂ ಹೆಚ್ಚಿರುತ್ತದೆ. ಯಾಕೆಂದರೆ ಕಾರುಗಳು ಓಡಾಡುವ ದಾರಿಯಲ್ಲಿನ ಸುತ್ತಮುತ್ತಲಿಂದ ಓಡಾಡುವ ಕಾರುಗಳು ಹೆಚ್ಚು ಕಲುಷಿತ ಹೊಗೆಯನ್ನು ವಾತಾವರಣಕ್ಕೆ ಬಿಡುತ್ತಿದ್ದರೆ ಅಥವಾ ಡಿಸೇಲ್ ಬಳಸುವ ಟ್ರಕ್‍ಗಳ ಹೊಗೆಯನ್ನು ಇವು ಹೀರಿಕೊಳ್ಳುತ್ತವೆ.

ಕೆಲವು ಮಾಲಿನ್ಯಕಾರಕಗಳು ಹಾಗೂ ವಿಷಕಾರಿ ಸಂಯುಕ್ತಗಳ ಮಟ್ಟವು ಕಾರಿನ ಹೊರಭಾಗದಲ್ಲಿರುವುದಕ್ಕಿಂತಲೂ 10 ಪಟ್ಟು ಒಳಭಾಗದಲ್ಲೇ ಇರುತ್ತವೆ. ಮಾಲಿನ್ಯಕಾರಕಗಳು ಹೆಚ್ಚಾಗಿ ಗ್ಯಾಸೋಲಿನ್ ಮತ್ತು ಡಿಸೇಲ್ ಇಂಜಿನ್‍ಗಳು ಉಗುಳುವ ಹೊಗೆಯಿಂದ ಬರುತ್ತವೆ. ವಾಲಾಟೈಲ್ ಆರ್ಗಾನಿಕ್ ಕೌಂಪೌಂಡ್ (ವಿಒಸಿಎಸ್ – ಅಥವಾ ಬಾಷ್ಪಶೀಲ ಸಾವಯವ ಸಂಯುಕ್ತಗಳು)ಗಳಾದ ಬೆಂಜೇನ್, ಟೊಲ್ಯುನ್ ಮತ್ತು ಫಾರ್ಮಾಡೈಡ್ (ಖಚಿತ ಅಥವಾ ಶಂಕಿತ ಕಾರ್ಸಿನೋಜೆನ್ಸ್), ಕಾರ್ಬನ್ ಮೋನೋಕ್ಸೈಡ್ (ಇದು ರಕ್ತದ ಆಮ್ಲಜನಕ ಸಾಗಿಸುವ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ), ನೈಟ್ರೋಜನ್ ಆಕ್ಸೈಡ್ ಮತ್ತು ಪಿಎಂ ಕಣಗಳು ನಗರದ ವಾತಾವರಣದಲ್ಲಿ ಹೇರಳವಾಗಿರುತ್ತವೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ)ಯ ಪರಿಸರ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ. ಟಿ. ವಿ. ರಾಮಚಂದ್ರ ಅವರ ಪ್ರಕಾರ `ಸರಿಯಾಗಿ ಗಾಳಿಯಾಡದ ಮುಚ್ಚಿದ ಕೊಠಡಿ ಮತ್ತು ಕಾರುಗಳಲ್ಲಿ ಜನರು ನಿರಂತರವಾಗಿ ಕುಳಿತಿರುವುದರಿಂದ ಧೂಳಿನ ಕಣಗಳನ್ನು ನಿರಂತರವಾಗಿ ಉಸಿರಾಡುತ್ತಿರುತ್ತಾರೆ. ಇದಲ್ಲದೆ ಎಸಿಯನ್ನು ಸರಿಯಾಗಿ ನಿರ್ವಹಿಸದೇ ಇದ್ದಲ್ಲಿ ಕೊಠಡಿಯೊಳಗೆ ಶಿಲೀಂದ್ರ (ಫಂಗಿ) ಮತ್ತು ಬ್ಯಾಕ್ಟೀರಿಯಾಗಳು ಅಧಿಕಗೊಳ್ಳುತ್ತವೆ’.

ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಷನ್ (ಎನ್‍ಸಿಬಿಐ)ಯ ವರದಿಯ ಪ್ರಕಾರ ಕಾರುಗಳಲ್ಲಿನ ಒಳಾಂಗಣ ವಾಯುಮಾಲಿನ್ಯವು ಹೃದಯ ಸಂಬಂಧಿ ಕಾಯಿಲೆಗಳು, ಹೃದ್ರೋಗ, ಪಾಶ್ರ್ವವಾಯು, ಶ್ವಾಸಕೋಶದ ಕ್ಯಾನ್ಸರ್, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಖಾಯಿಲೆ, ಅಸ್ತಮಾ ಮತ್ತು ನ್ಯುಮೋನಿಯಾ ಸೇರಿದಂತೆ ಉಸಿರಾಟದ ಸೋಂಕುಗಳಿಗೆ ಕಾರಣವಾಗುತ್ತವೆ.

ಕಾರಿನ ಒಳಾಂಗಣದಲ್ಲಿ ಮಾಲಿನ್ಯಕಾರಕಗಳು (ಮೂಲ – ಎನ್‍ಸಿಬಿಐ ಅಧ್ಯಯನ)

ಅಷ್ಟೊಂದು ಸ್ವಚ್ಛವಲ್ಲದ ಎಸಿ ಕೋಣೆಗಳು

ಹವಾನಿಯಂತ್ರಿತ ಕಚೇರಿಗಳು ಕೂಡಾ ವಾಯುಮಾಲಿನ್ಯದಿಂದ ಹೊರತಾಗಿಲ್ಲ. ದಿ ಲ್ಯಾನ್ಸೆಟ್ ವರದಿಯ ಪ್ರಕಾರ `ಕೆಲಸದ ಸ್ಥಳಗಳಲ್ಲಿ ಗುಣಮಟ್ಟವಿಲ್ಲದ ಗಾಳಿಯ ಸೇವನೆಯಿಂದಾಗಿ ವರ್ಷಕ್ಕೆ ಸುಮಾರು 8 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ’.

ಶಾಸಕೋಶಶಾಸ್ತ್ರಜ್ಞ ಡಾ. ಶಶಿಧರ ಗಂಗಯ್ಯ ಅವರು ಈ ಬಗ್ಗೆ ವಿವರಿಸುತ್ತಾ `ಕೋಣೆಯೊಳಗೆ ಗಾಳಿಯಾಡುವ ಬಗ್ಗೆ ಖಾತರಿಪಡಿಸಿಕೊಳ್ಳಿ. ಮನೆಯೊಳಗೆ ಹಾಗೂ ಕಾರಿನೊಳಗೆ ನಿಯಮಿತವಾಗಿ ಉಸಿರಾಟಕ್ಕೆ ತೊಂದರೆಯಾಗುವ ಧೂಳು ಮತ್ತು ಪರಾಗಗಳನ್ನು ಸ್ವಚ್ಛಗೊಳಿಸುತ್ತಿರಬೇಕು. ನೆಲಕ್ಕೆ ಬಳಸುವ ರತ್ನಗಂಬಳಿ, ರಗ್ಗಿನಂತಹ ವಸ್ತುಗಳು ಅವು ಹೆಚ್ಚಾಗಿ ಶಾಸಕೋಶಕ್ಕೆ ಹಾನಿಯೆಸಗುವ ಕಣಗಳನ್ನು ಆಕರ್ಷಿಸುತ್ತಿರುತ್ತವೆ. ಇವುಗಳನ್ನು ಬಳಸುವುದರ ಬದಲಾಗಿ ಟೈಲ್ಸ್, ಲ್ಯಾಮಿನೇಟ್ಸ್ ಅಥವಾ ಗಟ್ಟಿ ಮರದ ಬಳಕೆಯನ್ನು ಹೆಚ್ಚಿಸುವುದು ಒಳ್ಳೆಯದು ಎಂದು ಸಲಹೆ ನೀಡುತ್ತಾರೆ.

ಯುನೈಟೆಡ್ ಸ್ಟೇಟ್ಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ಅಧ್ಯಯನ ಪ್ರಕಾರ `ವಿಶ್ವದಾದ್ಯಂತ ಹೊಸದಾಗಿ ಮತ್ತು ಪುನರ್ರಚಿಸಿದ 30% ಕಟ್ಟಡಗಳಲ್ಲಿ ಒಳಾಂಗಣ ಗಾಳಿಯ ಗುಣಮಟ್ಟವು ಕಳಪೆಯಾಗಿದೆ. ಕಟ್ಟಡದ ಮೂಲ ವಿನ್ಯಾಸ ಅಥವಾ ನಿರ್ವಣೆಗಳಿಗೆ ಹೊಂದಿಕೆಯಾಗದ ರೀತಿಯಲ್ಲಿ ನಿರ್ಮಿಸಿದಾಗ ಒಳಾಂಗಣ ವಾಯುಗುಣಮಟ್ಟವು ಕಳಪೆಯಾಗುವುದಕ್ಕೆ ಕಾರಣವಾಗುತ್ತದೆ.

ಒಳಾಂಗಣ ವಾಯುಮಾಲಿನ್ಯಕ್ಕೆ ಕಾರಣವಾಗುವ ಪ್ರಮುಖ ಅಂಶಗಳೆಂದರೆ ಕಡಿಮೆ ಗಾಳಿಯ ಹರಿದಾಡುವಿಕೆ, ಅಂಟಿಕೊಳ್ಳುವ ವಸ್ತುಗಳಾಗಿರುವ ಒಳಾಂಗಣದಲ್ಲಿರುವ ರತ್ನಗಂಬಳಿ, ಮರದಿಂದ ತಯಾರಿಸಿದ ಉತ್ಪನ್ನಗಳು, ಕೀಟನಾಶಕಗಳು, ಕಾಪಿ ಯಂತ್ರಗಳು, ಶುಚಿಗೊಳಿಸುವ ರಾಸಾಯನಿಕಗಳು, ಬಾಷ್ಪಶೀಲ ಸಾವಯವ ಸಂಯುಕ್ತಗಳು ಸೆಳೆದಿಟ್ಟುಕೊಳ್ಳುವ ಮೂಲಕ ಮತ್ತು ಮೋಟಾರು ವಾಹನಗಳ ಹೊಗೆ, ಹೊಗೆಯ ಕೊಳವೆಯ ದ್ವಾರ, ಕಟ್ಟಡಗಳ ಗಾಳಿಯ ನಿಷ್ಕಾಸ ದ್ವಾರ (ವೆಂಟಿಲೇಟರ್) ಮತ್ತು ಕಿಟಕಿಗಳ ಮೂಲಕವೂ ಒಳಾಂಗಣದಲ್ಲಿ ರಾಸಾಯನಿಕ ಹಾಗೂ ಜೈವಿಕ, ಬ್ಯಾಕ್ಟೀರಿಯಾ, ಅಚ್ಚು, ಪರಾಗ, ವೈರಸ್‍ಗಳು ಸೇರಿಕೊಳ್ಳುತ್ತವೆ.

ಐಐಎಸ್‍ಸಿಯ ದಿವೆಚಾ ಸೆಂಟರ್ ಫಾರ್ ಕ್ಲೈಮೆಟ್ ಚೇಂಜ್‍ನ ಪ್ರಾಧ್ಯಾಪಕ, ಪರಿಸರವಾದಿ, ಮಕ್ಕಳ ಶ್ವಾಸಕೋಶಶಾಸ್ತ್ರಜ್ಞ ಡಾ. ಹೆಚ್. ಪರಮೇಶ್ ಅವರ ಪ್ರಕಾರ ‘ಒಬ್ಬ ವ್ಯಕ್ತಿಯು 90% ಸಮಯವನ್ನು ಕಾರು, ಮನೆ, ಕಚೇರಿಯೊಳಗೆ ಕಳದರೂ ಕೂಡಾ ಗಾಳಿಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಬೆಂಗಳೂರಿನಲ್ಲಿನ ರೋಗಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾಗ ಒಳಾಂಗಣ ವಾಯುಮಾಲಿನ್ಯದಿಂದಲೇ ಹೆಚ್ಚಿನ ಜನರು ತೊಂದರೆ ಅನುಭವಿಸುತ್ತಿದ್ದಾರೆಂದು ತಿಳಿದುಬಂದಿದೆ’ ಎನ್ನುತ್ತಾರೆ.

ವಾಯು ಮಾಲಿನ್ಯದ ದುಷ್ಪರಿಣಾಮಗಳಿಂದ ಯಾರೂ ಸುರಕ್ಷಿತರಾಗಿಲ್ಲ. ಎಸಿ ಕಾರು, ಎಸಿ ಮನೆ, ಎಸಿ ಕಚೇರಿಯಷ್ಟೇ ಸುತ್ತಾಡುವ ಜನರು ವಾಯುಮಾಲಿನ್ಯದಿಂದ ಸುರಕ್ಷಿತರೆಂಬ ತಪ್ಪು ಕಲ್ಪನೆ ಜನರಲ್ಲಿದೆ ಎನ್ನುತ್ತಾರೆ ಅವರು.

ಇಕಾಲಜಿಕಲ್ ಸೆಕ್ಯುರಿಟಿ ಆಫ್ ಇಂಡಿಯಾದ ಆಡಳಿತ ಮಂಡಳಿ ಸದಸ್ಯ ಡಾ. ಯಲ್ಲಪ್ಪ ರೆಡ್ಡಿ ಅವರು ಹೇಳುವಂತೆ `ಕಾರು ಮತ್ತು ಕಚೇರಿಯ ಒಳಾಂಗಣ ವಾಯುಮಾಲಿನ್ಯವು ಹೊರಾಂಗಣ ವಾಯುಮಾಲಿನ್ಯದಷ್ಟೇ ಪ್ರಮಾಣದಲ್ಲಿದೆ’.

`ಹೆಚ್ಚಿನ ಮರಗಳನ್ನು ನೆಡುವುದು, ಕೈಗೆಟುಕುವ ಸಾರ್ವಜನಿಕ ಸಾರಿಗೆಯನ್ನು ಜನರಿಗೆ ಸುಲಭಗೊಳಿಸುವುದು ಮುಂತಾದ ಕ್ರಮಗಳಿಂದಷ್ಟೇ ವಾಯುಮಾಲಿನ್ಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು’ ಎಂದು ಅವರು ಅಭಿಪ್ರಾಯಪಡುತ್ತಾರೆ.

(ಲೇಖಕರು ಬೆಂಗಳೂರು ಮೂಲದ ಹವ್ಯಾಸಿ ಬರಹಗಾರರು ಹಾಗೂ ಭಾರತೀಯ ವರದಿಗಾರರ ಸಂಪರ್ಕ ಜಾಲವಾಗಿರುವ 101Reporters.comನ ಸದಸ್ಯರು)

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು