News Karnataka Kannada
Thursday, April 25 2024
ಬೆಂಗಳೂರು ನಗರ

ವಾಯುಮಾಲಿನ್ಯ: ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಬೆಂಗಳೂರು

Photo Credit :

ವಾಯುಮಾಲಿನ್ಯ: ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಬೆಂಗಳೂರು

ವರದಿ : ಕಪಿಲ್‍ಕಾಜಲ್

ಬೆಂಗಳೂರು: ವಾಯುಮಾಲಿನ್ಯವು ಒಂದು ಪ್ರದೇಶದ ಒಟ್ಟು ಅಭಿವೃದ್ಧಿಯ ಹಿನ್ನಡೆಗೆ ಕಾರಣವಾಗಿದೆ. 1.2 ಮಿಲಿಯನ್ ಭಾರತೀಯರ ಸಾವಿಗೆ ಕಾರಣವಾಗುತ್ತಿರುವ ವಾಯುಮಾಲಿನ್ಯವು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ)ಯ 3%ರಷ್ಟರ ಮೇಲೆ ಪರಿಣಾಮ ಬೀರುತ್ತದೆ. ವಾಯುಮಾಲಿನ್ಯದ ಹಾಟ್‍ಸ್ಪಾಟ್ ಎನಿಸಿಕೊಂಡಿರುವ ಹಲವು ಪ್ರಮುಖ ನಗರಗಳ ಪೈಕಿ ಬೆಂಗಳೂರು ಕೂಡಾ ಒಂದಾಗಿದ್ದು, ಇದು ಪ್ರದೇಶವಾರು ಅಭಿವೃದ್ಧಿಯ ಮೇಲೆ ಗಾಢವಾದ ಪರಿಣಾಮವನ್ನೇ ಬೀರುತ್ತದೆ.

ಗ್ರೀನ್‍ಪೀಸ್ ಇಂಡಿಯಾ ಅಧ್ಯಯನ ವರದಿಯ ಪ್ರಕಾರ ಕರ್ನಾಟಕದ 21 ನಗರಗಳ ಪೈಕಿ ಬೆಂಗಳೂರು ಗರಿಷ್ಠ ವಾಯುಮಾಲಿನ್ಯವನ್ನು ಹೊಂದಿದೆ. ನಂತರದ ಸ್ಥಾನವನ್ನು ತುಮಕೂರು ಪಡೆದುಕೊಂಡಿದ್ದು, ಅಧ್ಯಯನವು ದೇಶದ ಪ್ರಮುಖ ರಾಜ್ಯಗಳಲ್ಲಿನ ವಾಯುಮಾಲಿನ್ಯದ ಮಟ್ಟವನ್ನು ಕಂಡುಕೊಂಡಿದೆ.  

ಬೆಂಗಳೂರು ಮೂಲದ ನಗರ ಸಂರಕ್ಷಣಾ ತಜ್ಞರಾಗಿರುವ ವಿಜಯ್ ನಿಶಾಂತ್ ಅವರ ಪ್ರಕಾರ ‘ಬೆಂಗಳೂರು ನಗರವನ್ನು ಗಾರ್ಡನ್ ಸಿಟಿಯಿಂದ ಗಾರ್ಬೆಜ್ ಸಿಟಿಯನ್ನಾಗಿಸಲಾಗಿದೆ’.

`ಅತಿಯಾದ ಮರಗಳ ಕಡಿಯುವಿಕೆ, ಗಗನಚುಂಬಿ ಕಟ್ಟಡಗಳ ನಿರ್ಮಾಣ, ಸುಸಜ್ಜಿತ ರಸ್ತೆಗಳ ನಿರ್ಮಾಣ, ಗಣನೀಯವಾಗಿ ಏರಿಕೆಯಾಗುತ್ತಿರುವ ವಾಹನಗಳು ಹಾಗೂ ಕೈಗಾರಿಕೆಗಳು ನಗರವನ್ನು ಮಾಲಿನ್ಯಗೊಳಿಸಿದ್ದು, ಇವುಗಳನ್ನು ತಡೆಯುವ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ’ ಎನ್ನುತ್ತಾರವರು.

ದಿ ಎನರ್ಜಿ ಆಂಡ್ ರಿಸೋರ್ಸಸ್ ಇನ್‍ಸ್ಟಿಟ್ಯೂಟ್ ಸಂಸ್ಥೆ ನಡೆಸಿದ ಅಧ್ಯಯನ ಪ್ರಕಾರ ಪಿಎಂ10 (10 ಎಂಎಂ ವ್ಯಾಸಕ್ಕಿಂತ ಕಡಿಮೆ ಗಾತ್ರದ ಕಣಗಳು) ಗಾತ್ರದ ಕಣಗಳ ಹೊರಸೂಸುವಿಕೆಯು ಸಾರಿಗೆ ಕ್ಷೇತ್ರದಿಂದ (42%), ರಸ್ತೆಯ ಧೂಳು (20%), ನಿರ್ಮಾಣ ಕ್ಷೇತ್ರದಲ್ಲಿ (14%), ಕೈಗಾರಿಕೆ (14%), ಡಿಸೇಲ್ ಜನರೇಟರ್ (7%), ಗೃಹಬಳಕೆಯ ಹೊರಸೂಸುವಿಕೆಯಿಂದ (3%) ಉಂಟಾಗುತ್ತಿದೆ.

ಬೆಂಗಳೂರು ನಗರದಲ್ಲಿ ನೈಟ್ರೋಜನ್ ಆಕ್ಸೈಡ್‍ಗಳ ಪ್ರಮುಖ ಮೂಲಗಳಾಗಿರುವ ಸಾರಿಗೆ (68%), ಡಿಸೇಲ್ ಜನರೇಟರ್ (23%), ಕೈಗಾರಿಕೆ (8%), ಗೃಹಬಳಕೆಯಿಂದ (1%) ಮತ್ತು ಸಲ್ಫರ್ ಡೈಆಕ್ಸೈಡ್‍ನಲ್ಲಿ ಕೈಗಾರಿಕೆ (56%), ಡಿಸೇಲ್ ಜನರೇಟರ್ (23%), ಸಾರಿಗೆ (16%) ರಷ್ಟು ಮಾಲಿನ್ಯಕ್ಕೆ ಕಾರಣವಾಗಿದೆ.

 

ಮೂಲ : ಏರ್‍ರ್ಪೋಕಲಿಪ್ಸ್ ಗ್ರೀನ್‍ಪೀಸ್ ವರದಿ

ಇದೇ ವರದಿಯು ಸಾರಿಗೆ ವಲಯದಿಂದ ಉಂಟಾಗುವ ಮಾಲಿನ್ಯದ ಗಂಭೀರತೆಯ ಮುಖವನ್ನು ಅನಾವರಣಗೊಳಿಸುತ್ತದೆ. ಪಿಎಂ10ರಲ್ಲಿನ 19% ಸಾರಿಗೆ ವಲಯದ ಮಾಲಿನ್ಯದ ಪ್ರಮಾಣವು ಪಿಎಂ2.5ನಲ್ಲಿ ಶೇ.50 ಕ್ಕೆ ಏರುತ್ತದೆ. ಇದು ವಾಹನಗಳಿಂದ ಉಂಟಾಗುವ ಹೊರಸೂಸುವಿಕೆಯಿಂದ ವಾತಾವರಣದಲ್ಲಿ ಹರಡುವ ಅತಿಸೂಕ್ಷ್ಮ ಕಣಗಳ ಪ್ರಮಾಣವನ್ನು ಸೂಚಿಸುತ್ತದೆ.

ಡಿಸೇಲ್ ಜನರೇಟರ್‍ ಗಳು ವಾಯುಮಾಲಿನ್ಯದ ಪ್ರಮುಖ ಮೂಲಗಳಾಗಿದ್ದು, ಅದು 13% ರಿಂದ 25%ರವರೆಗೆ ಕ್ರಮವಾಗಿ ಪಿಎಂ10 ಹಾಗೂ ಪಿಎಂ2.5 ಕಣಗಳಲ್ಲಿ ಶೇಖಡವಾರು ಸ್ಥಾನವನ್ನು ಪಡೆದಿದ್ದು, ಕೈಗಾರಿಕೆಗಳ ಪಾಲು ಬೆಂಗಳೂರಿನಲ್ಲಿ ಕಡಿಮೆಯಾಗಿದ್ದು, ಬೃಹತ್ ಕೈಗಾರಿಕೆಗಳಿಲ್ಲದಿರುವುದು ಇದಕ್ಕಿರುವ ಕಾರಣ. ಆದಾಗ್ಯೂ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಪಿಎಂ10 ಮತ್ತು ಪಿಎಂ2.5 ಮಟ್ಟವು ನಗರದ ಉಳಿದÀ ಭಾಗಗಳಿಗಿಂತ ಹೆಚ್ಚಳವಾಗಿದೆ.

 

ಮೂಲ : ಏರ್‍ರ್ಪೋಕಲಿಪ್ಸ್ ಗ್ರೀನ್‍ಪೀಸ್ ವರದಿ

ಹೆಚ್ಚುತ್ತಿರುವ ವಾಯುಮಾಲಿನ್ಯ, ವೇಗಗತಿಯ ಸಾಮಾಜಿಕ – ಆರ್ಥಿಕ ಅಭಿವೃದ್ಧಿಯ ಗತಿಯು ಹೃದಯರಕ್ತನಾಳದ ಕಾಯಿಲೆಗಳು, ದೀರ್ಘಕಾಲದ ಉಸಿರಾಟದ ಕಾಯಿಲೆಗಳು (ಶ್ವಾಸಕೋಶದ ಕಾಯಿಲೆ, ಅಸ್ತಮಾ ಮುಂತಾದವು) ಮಧುಮೇಹ, ಅಧಿಕ ರಕ್ತದೊತ್ತಡ ಇತ್ಯಾದಿಗಳ ಹೆಚ್ಚಳಕ್ಕೂ ಕಾರಣವಾಗುತ್ತದೆ. ಅದರಲ್ಲೂ ಸೂಕ್ಷ್ಮ ವಿಭಾಗದವರಾದ ಹಿರಿಯರು ಹಾಗೂ ಮಕ್ಕಳು ಇದರಿಂದ ಹೆಚ್ಚು ತೊಂದರೆಗೊಳಗಾಗುತ್ತಾರೆ.

ದೇಶದ 35 ನಗರಗಳಲ್ಲಿನ ರೋಗಗಳು ಮತ್ತು ರೋಗಲಕ್ಷಣಗಳ ಬಗ್ಗೆ ಅಧ್ಯಯನ ಮಾಡಿದ ಪ್ರಾಕ್ಟೋ ಸಂಸ್ಥೆಯ ವರದಿಯ ಪ್ರಕಾರ ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯ ಕಾರಣದಿಂದ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚುತ್ತಿದ್ದು, ದೇಶದಲ್ಲಿ 2015ಕ್ಕೆ ಹೋಲಿಸಿದರೆ 2016ರಲ್ಲಿ ಶೇ. 62% ಹೆಚ್ಚುವರಿ ಜನರು ಶ್ವಾಸಕೋಶಶಾಸ್ತ್ರಜ್ಞರನ್ನು ಭೇಟಿಯಾಗುತ್ತಿರುವುದೇ ಇದನ್ನು ರುಜುವಾತುಪಡಿಸುತ್ತಿದೆ. ಬೆಂಗಳೂರಿನಲ್ಲಿ ಈ ಸಂಖ್ಯೆಯು ಅತಿಹೆಚ್ಚಿದ್ದು, ವರ್ಷವೊಂದಕ್ಕೆ 80%ರಷ್ಟು ತಜ್ಞರ ಭೇಟಿಯು ಹೆಚ್ಚಳವಾಗಿದ್ದು, ಮುಂಬಯಿ ಹಾಗೂ ದೆಹಲಿಯಲ್ಲಿ ಕ್ರಮವಾಗಿ 64% ಹಾಗೂ 50% ತಜ್ಞ ವೈದ್ಯರ ಭೇಟಿಯಲ್ಲಿ ಹೆಚ್ಚಳವಾಗಿದೆ.

ಲೇಕ್‍ಸೈಡ್ ಸೆಂಟರ್ ಫಾರ್ ಹೆಲ್ತ್ ಪ್ರಮೋಷನ್ ಮಕ್ಕಳ ಶ್ವಾಸಕೋಶಶಾಸ್ತ್ರಜ್ಞ ಡಾ. ಹೆಚ್. ಪರಮೇಶ್ ಅವರ ಹೇಳುವಂತೆ ಹಿಂದೆ ಸಾಂಕ್ರಾಮಿಕ ರೋಗಗಳಾಗಿರುವ ಚಿಕನ್‍ಫಾಕ್ಸ್, ದಡಾರದಂತಹ ಕಾಯಿಲೆಗಳು ಹೆಚ್ಚಿದ್ದವು. ಆದರೆ ಈಗ ಅಸ್ತಮಾದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚುತ್ತಿವೆ.

ಗ್ರೀನ್‍ಪೀಸ್ ಸಂಸ್ಥೆಯ ವರದಿಯು ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟವನ್ನು ಅಳೆದು ನೋಡಿ ಮೇಲ್ವಿಚಾರಣೆ ಮಾಡುವುದು ಹಾಗೂ ಸಾರ್ವಜನಿಕರ ಆರೋಗ್ಯ ಮತ್ತು ವಾತಾವರಣದಲ್ಲಿನ ವಾಯುಮಾಲಿನ್ಯದ ಒತ್ತಡವನ್ನು ಗಣನೀಯವಾಗಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ನೀತಿನಿಯಮಗಳನ್ನು ರೂಪಿಸುವಂತೆ ಸಲಹೆ ನೀಡಿದೆ.

ಮಾಲಿನ್ಯವನ್ನು ಕಡಿಮೆಗೊಳಿಸುವ ಕಾರ್ಯತಂತ್ರಗಳು ಕ್ರಿಯಾಯೋಜನೆಗಳಾಗಿರಬೇಕು ಮತ್ತು ಅವು ನಿರ್ಧಿಷ್ಟ ಸಮಯ ಹಾಗೂ ಗುರಿಯನ್ನು ಹೊಂದಿರಬೇಕು. ಮತ್ತು ಸೂಕ್ತವಾದ ದಂಡ ಮತ್ತು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ಮೇಲ್ವಿಚಾರಣೆ ಕೈಗೊಳ್ಳುವಂತಿರಬೇಕು ಎಂಬುದಾಗಿಯೂ ವರದಿ ಸಲಹೆ ನೀಡಿದೆ. 

ವರದಿಯಲ್ಲಿ ಉಲ್ಲೇಖಿಸಿರುವಂತೆ ಗಾಳಿಯು ಹೆಚ್ಚು ಕಲುಷಿತಗೊಂಡಿರುವ ದಿನಗಳಲ್ಲಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆಗಳನ್ನು ನೀಡುವುದು, ಸಲಹೆಗಳನ್ನು ನೀಡುವುದು, ಶಾಲೆಗಳಿಗೆ ರಜೆ ಘೋಷಿಸುವುದು, ಸಮ – ಬೆಸ ಸಂಖ್ಯೆಗಳ ಮಾದರಿಯಲ್ಲಿ ವಾಹನಗಳನ್ನು ರಸ್ತೆಗಿಳಿಸುವುದು, ವಿದ್ಯುತ್ ಸ್ಥಾವರಗಳನ್ನು ಮುಚ್ಚುವುದು ಮುಂತಾದ ಅನೇಕ ವಿಧಾನಗಳ ಮೂಲಕ ನಗರದ ವಾಯುಗುಣಮಟ್ಟವನ್ನು ನಿರ್ವಹಿಸಬೇಕೆಂಬ ಸಲಹೆ ನೀಡಲಾಗಿದೆ.

ಇವುಗಳ ಜೊತೆಗೆ ನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುವುದು, ಭಾರತ್ 6ನಂತೆ (ಬಿಎಸ್6) ಕಡಿಮೆ ಮಾಲಿನ್ಯದ ವಾಹನಗಳ ಬಳಕೆಗೆ ಉತ್ತೇಜನ, ಕಟ್ಟುನಿಟ್ಟಿನ ಹೊರಸೂಸುವಿಕೆ ನಿಯಮಗಳು, ಉಷ್ಣ ವಿದ್ಯುತ್ ಸ್ಥಾವರಗಳು ಹಾಗೂ ಕೈಗಾರಿಕೆಗಳಲ್ಲಿ ಸುಧಾರಿತ, ಧಕ್ಷ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ಕಡಿಮೆ ವಾಯುಮಾಲಿನ್ಯವಾಗುವಂತೆ ನೋಡಿಕೊಳ್ಳುವುದು, ಸ್ವಚ್ಛ ಹಾಗೂ ನವೀಕರಿಸಬಹುದಾದ ಇಂಧನದ ಬಳಕೆಯನ್ನು ಹೆಚ್ಚಿಸುವುದು, ವಿದ್ಯುತ್ ಚಾಲಿತ ವಾಹನಗಳ ಬಳಕೆ, ರಸ್ತೆಗಳಿಂದ ಧೂಳನ್ನು ಸ್ವಚ್ಛಗೊಳಿಸುವುದು, ನಿರ್ಮಾಣ ಕಾಮಗಾರಿಗಳ ಮೇಲೆ ನಿಯಂತ್ರಣ, ಜೈವಿಕ ಸುಡುವಿಕೆಯನ್ನು ನಿಲ್ಲಿಸುವುದರಿಂದ ವಾಯುಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ ಎಂಬುದಾಗಿ ವರದಿ ತಿಳಿಸುತ್ತದೆ.

(ಲೇಖಕರು ಬೆಂಗಳೂರು ಮೂಲದ ಹವ್ಯಾಸಿ ಬರಹಗಾರರು ಹಾಗೂ ಭಾರತೀಯ ವರದಿಗಾರರ ಸಂಪರ್ಕ ಜಾಲವಾಗಿರುವ 101Reporters.comನ ಸದಸ್ಯರು)

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು